ADVERTISEMENT

ಯಾದಗಿರಿ: ವಿವಿಧೆಡೆ ಆಯುಧ ಪೂಜೆ ಸಂಭ್ರಮ, ಬೈಕ್ ಗಳಿಗೆ ಅಲಂಕಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 6:05 IST
Last Updated 14 ಅಕ್ಟೋಬರ್ 2021, 6:05 IST
ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಮನೆಯೊಂದರ ಮುಂದೆ ಆಯುಧ ಪೂಜೆ ಅಂಗವಾಗಿ ವಾಹನಗಳಿಗೆ ಪೂಜೆ ನೆರವೇರಿಸಲಾಯಿತು
ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಮನೆಯೊಂದರ ಮುಂದೆ ಆಯುಧ ಪೂಜೆ ಅಂಗವಾಗಿ ವಾಹನಗಳಿಗೆ ಪೂಜೆ ನೆರವೇರಿಸಲಾಯಿತು   

ಯಾದಗಿರಿ: ನವರಾತ್ರಿ ಹಬ್ಬದ ಅಂಗವಾಗಿ ಗುರುವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆಯುಧ ಪೂಜೆ ಮಾಡಲಾಯಿತು.

ಬೈಕ್ ಮತ್ತು ಕಾರು ಶೋ ರೂಂಗಳಲ್ಲಿ ಮುಂಗಡವಾಗಿ ಬುಕಿಂಗ್ ಮಾಡಿದ ವಾಹನಗಳನ್ನು ಖರೀದಿಸಿ ದೇವಸ್ಥಾನ, ಮಠಗಳಲ್ಲಿ ಗ್ರಾಹಕರು ಪೂಜೆ ಸಲ್ಲಿಸಿದರು. ವಾಹನಗಳಿಗೆ ಹೂಗಳಿಂದ ಅಲಂಕರಿಸಲಾಗಿತ್ತು.

ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರಮುಖ ವೃತ್ತಗಳಲ್ಲಿ ಚೆಂಡು ಹೂ, ಬಾಳೆದಿಂಡು, ಕುಂಬಳಕಾಯಿ ಸೇರಿದಂತೆ ಪೂಜಾ ಸಮಾಗ್ರಿ ಮಾರಾಟಕ್ಕೆ ಇಡಲಾಗಿತ್ತು.

ADVERTISEMENT

ಕಚೇರಿಗಳನ್ನು ಸ್ವಚ್ಛ ಮಾಡಿ ಪೂಜೆ ಸಲ್ಲಿಸಲಾಯಿತು.

ಆನೆ ಅಂಬಾರಿ ಮೆರವಣಿಗೆಗೆ ಸಿದ್ಧತೆ:ನಗರದ ರೈಲ್ವೆ ಸ್ಟೇಷನ್ ರಸ್ತೆಯ ಅಂಭಾ ಭವಾನಿ ಮಂದಿರದಲ್ಲಿ ನವರಾತ್ರಿ ಅಂಗವಾಗಿ ಶುಕ್ರವಾರ (ಅ.15) ರಂದು ಹಿಂದೂ ಸೇವಾ ಸಮಿತಿಯಿಂದ ಶೋಭಾ ಯಾತ್ರೆ ನಡೆಯಲಿದೆ. ಆನೆ ಅಂಬಾರಿ ಮೆರವಣಿಗೆಯೂ ನಡೆಯಲಿದ್ದು, ಸಿದ್ಧತೆಗಳು ನಡೆದಿವೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಮಠದಿಂದ ಆನೆ ಕರೆ ತರಲಾಗುತ್ತಿದೆ. ಅಲ್ಲದೇ ಗುರುವಾರ ರಾತ್ರಿ ದಾಂಡಿಯಾ ನೃತ್ಯ ಸಮಾರೋಪ ನಡೆಯಲಿದೆ‌.

ಯರಗೋಳ ವರದಿ:ಯರಗೋಳ ಗ್ರಾಮದಲ್ಲಿ ಗುರುವಾರ ಆಯುಧ ಪೂಜೆ ಸಂಭ್ರಮ ಜೋರಾಗಿತ್ತು. ಕೃಷಿಕರು ತಮ್ಮ ತಮ್ಮ ಕೃಷಿ ಪರಿಕರಗಳಿಗೆ ಪೂಜೆ ನೆರವೇರಿಸಿದರು.

ಟ್ರ್ಯಾಕ್ಟರ್, ಜೀಪು, ಕ್ರೂಸರ್ , ಟಂಟಂ ಬೈಕ್ ಗಳನ್ನು ತೊಳೆದು ಹೂ, ಬಾಳೆ ಗೊನೆ, ಮಾವಿನ ತಪ್ಪಲು, ಲಿಂಬೆಹಣ್ಣು, ತೆಂಗಿನ ಗರಿಯಿಂದ ಶೃಂಗರಿಸಿ ಕುಂಬಳಕಾಯಿ ಒಡೆದು, ನೈವೇದ್ಯ ಅರ್ಪಿಸಿದರು.

ಕುಲ ಕಸುಬುದಾರರಾದ ಕಮ್ಮಾರ, ಕುಂಬಾರ, ಚಮ್ಮಾರ, ಬಡಿಗೇರ, ಸಿಂಪಿಗ, ಈಡಿಗ, ಹಡಪದ, ಹೂಗಾರ, ಹಗಲು ವೇಷ, ಬಣಜಿಗ, ಅಗಸ, ಅಕ್ಕಸಾಲಿಗ, ಕೊರವ, ಅಂಬಿಗ ಸಮುದಾಯದವರು ತಮ್ಮ ಆಯುಧಗಳನ್ನು ಪೂಜಿಸಿದರು.

ಇನ್ನು ಮಹಿಳೆಯರು ಮನೆಯಲ್ಲಿ ತಾಯಿ ದುರ್ಗಾ ದೇವಿಯನ್ನು ಪೂಜಿಸಿ ಮುತೈದೆಯರಿಗೆ ಅರಿಸಿನ, ಕುಂಕುಮ ಹಚ್ಚಿ ಉಡಿ ತುಂಬಿ ಪಾದಕ್ಕೆ ನಮಸ್ಕರಿಸಿದರು.

ಪುಟಾಣಿ ಮಕ್ಕಳು, ಯುವಕರು, ಯುವತಿಯರು ವಾಹನಗಳ ಮುಂದೆ ನಿಂತು ಫೋಟೋ ಕ್ಲಿಕ್ಲಿಸಿ ಸಂತೋಷ ಪಟ್ಟರು.

ಅಬ್ಬೆ ತುಮಕೂರು ವಿಶ್ವಾರಾಧ್ಯರ ಮಠದಲ್ಲಿ ಭಕ್ತರು ತಮ್ಮ ನೂತನ ವಾಹನಗಳಿಗೆ ಪೂಜೆ ನೆರವೇರಿಸಿದರು.

ಗ್ರಾಮದ ಮನೆಗಳಲ್ಲಿ ಸಿಹಿ ತಿನಿಸುಗಳಾದ ಹೋಳಿಗೆ, ಕಡುಬು, ಅನ್ನ, ಸಾಂಬರ್, ಬಜಿ, ಹಪ್ಪಳ, ಸಂಡಿಗೆ ತಯಾರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.