ಯಾದಗಿರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ರಸ್ತೆಗಳಲ್ಲಿನ ಗುಂಡಿಗಳ ಅವ್ಯವಸ್ಥೆಯನ್ನು ಖಂಡಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ದೋರನಹಳ್ಳಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ದೋರನಹಳ್ಳಿಯ ರಸ್ತೆಯಲ್ಲಿ ಮುಖಂಡರು, ಕಾರ್ಯಕರ್ತರು ಜಮಾಯಿಸಿದರು. ಹದಗೆಟ್ಟಿರುವ ರಸ್ತೆಗಳ ಸುಧಾರಣೆಗೆ ಆಗ್ರಹಿಸಿ ಸುಮಾರು ಒಂದು ಗಂಟೆ ರಸ್ತೆ ತಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
’ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ ಗುಂಡಿಗಳ ಮುಚ್ಚಲು ಹಣವಿಲ್ಲದಾಗಿದೆ’, ‘ಗುಂಡಿ ಮುಚ್ಚದೆ ಕರ್ನಾಟಕದ ಘನತೆ ಹಾಳು ಮಾಡಿದ ಸರ್ಕಾರಕ್ಕೆ ಧಿಕ್ಕಾರ’, ‘ಗುಂಡಿಗಳ ಜನಕ ಡಿಕೆ ಶಿವಕುಮಾರ್‌ಗೆ ಧಿಕ್ಕಾರ’, ‘ಸಂಚಾರಕ್ಕಿಲ್ಲ ಸಮರ್ಪಕ ರಸ್ತೆ ಇದು ಕೈಸರ್ಕಾರದ ಅವ್ಯವಸ್ಥೆ’ ಎಂಬ ನಾಮಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಿಂದ ಬೆಳೆ ಕಳೆದುಕೊಂಡ ರೈತರ ಬದುಕು ಬೀದಿಗೆ ಬಂದಿದೆ. ಕೃಷಿಕರು ಬೆಳೆ ವಿಮೆಯ ಕಂತು ಭರ್ತಿ ಮಾಡಿದ್ದರೂ ಪರಿಹಾರ ಹಣ ಇನ್ನೂ ಬಿಡುಗಡೆಯಾಗಿಲ್ಲ. ಬೇರೆ ಕಡೆಗಳಿಂದ ಸಾಲ ತಂದು ಕೃಷಿಗಾಗಿ ಖರ್ಚು ಮಾಡಿದ್ದಾರೆ. ಈಗ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು, ಸಾಲ ತೀರಿಸಲು ರೈತರು ಪರದಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ವಿಮೆಯ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ವಿಮೆ ಇಲ್ಲದ ರೈತರಿಗೂ ಪರಿಹಾರ ಕೊಡಬೇಕು. ಕೃಷಿಕರ ಸಾಲವನ್ನು ಮನ್ನಾ ಮಾಡಬೇಕು. ಹಾಳಾಗಿರುವ ರಸ್ತೆಗಳ ದುರಸ್ತಿಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ‘ರಾಜ್ಯದಲ್ಲಿ ಅತಿ ಭ್ರಷ್ಟ ಶಾಸಕ ಮತ್ತು ಸಚಿವರು ಸಿಗುವುದು ಯಾದಗಿರಿ ಜಿಲ್ಲೆಯಲ್ಲಿ. ನಿತ್ಯವೂ ಇದೇ ರಸ್ತೆಯಲ್ಲಿ ಒಡಾಡಿದರೂ ರಸ್ತೆಯ ದುಸ್ಥಿತಿ ಕಾಣದಷ್ಟು ಕುರುಡುತನ ಬಂದಿದೆ. ಈ ಸರ್ಕಾರದಲ್ಲಿ ಎಲ್ಲರೂ ಗಂಟುಗಳ್ಳರೆ ಆಗಿದ್ದಾರೆ. ಈ ರಸ್ತೆ ಕೇವಲ ಶಹಾಪುರ– ಯಾದಗಿರಿ ಸೀಮಿತವಲ್ಲ. ಇದು ಕೊಡಂಗಲ್ -ಸಿಂದಗಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾಗಿದ್ದು, ಅಭಿವೃದ್ಧಿ ಪದದ ಅರ್ಥವೆ ಗೋತ್ತಿಲ್ಲ’ ಎಂದು ಟೀಕಿಸಿದರು.
ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಅಭಿವೃದ್ಧಿಯನ್ನು ಮರೆತು ಸಾರ್ವಜನಿಕರ ಜೀವ ಹಿಂಡುತಿದೆ. ಉಚಿತ ಬಸ್ ಪ್ರಯಾಣ ಕೊಟ್ಟು ದುಸ್ಥಿತಿ ರಸ್ತೆಗಳನ್ನು ಇರಿಸಿ, ಬಸ್ ಬಾರದಂತೆ ಮಾಡಿ ಒಣ ಜಂಭ ಪ್ರದರ್ಶನ ಮಾಡುತ್ತಿದೆ ಎಂದರು.
ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ ಮಾತನಾಡಿ, ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಎಸಗುತ್ತಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಯ ಪದವೇ ಕಾಣೆಯಾಗಿದೆ. ಜನರು ಹಾಳಾಗಿರುವ ರಸ್ತೆಗಳ ಬದಲು ಬೇರೆ ದಾರಿಯಲ್ಲಿ ಸುತ್ತಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಅಧಿಕಾರಿಯೊಬ್ಬರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಪ್ರಮುಖರಾದ ಪ್ರಭುರಾಯ ಮಲಗೊಂಡ, ಶಿವುಕುಮಾರ ಕೊಂಕಲ್, ಶರಣಗೌಡ ಹುಬ್ಬಳ್ಳಿ, ಗೋವಿಂದಪ್ಪ ಕೊಂಚೆಟ್ಟಿ, ನಿಂಗಣ್ಣಗೌಡ ಪೊಲೀಸ್ ಪಾಟೀಲ, ಕಲ್ಲಪ್ಪ ಖಾನಾಪುರ, ಶಿವಾನಂದ ಗೋಲಗೇರಿ, ಖಾದರ್ ಜಮಾದಾರ್, ಬಸವರಾಜ ಅನವಾರ, ಗುರುನಾಥ ಕಶೇಟ್ಟಿ, ಬಸವರಾಜ ಹುಡೇದ್, ಸಾಯಬಣ್ಣ ಹಲಗಿ, ಮಂಜುನಾಥ ಕಂಚಗಾರ, ವೆಂಕಟೇಶ ಕಶೇಟ್ಟಿ, ವಿರೇಶ ಕಂಬಾರ, ರವಿ ಪಾಲ್ಕಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.