
ಹುಣಸಗಿ: ಇಂದಿನ ಆಧುನಿಕತೆಯ ಭರಾಟೆ ಹಾಗೂ ತರಹೇವಾರಿ ಬಣ್ಣದ ಹಣತೆಗಳ ಮಧ್ಯೆಯೂ ಸಾಂಪ್ರದಾಯಿಕ ಪ್ರಣತಿಗಳ ತಯಾರಿಕೆಯಲ್ಲಿ ಇಲ್ಲಿನ ಕುಂಬಾರರ ಕೆಲ ಕುಟುಂಬಗಳು ತೊಡಗಿಕೊಂಡಿವೆ.
ನವರಾತ್ರಿ ಆರಂಭವಾಗುತ್ತಿದ್ದಂತೆ ಕುಂಬಾರರ ಕುಟುಂಬಗಳು ಜೇಡಿಮಣ್ಣು ತಂದು ಅದನ್ನು ಹದಗೊಳಿಸಿ ತಮ್ಮ ಮನೆಯ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಪ್ರಣತಿಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಇಡೀ ಗ್ರಾಮದಲ್ಲಿಯೇ ಒಂದೇರಡು ಕುಂಬಾರರ ಕುಟುಂಬಗಳಿದ್ದು, ಗ್ರಾಮದ ಜನರಿಗೆ ಇವರು ತಯಾರಿಸಿದ ಮಣ್ಣಿನ ಹಣತೆಗಳನ್ನು ಕೊಡುವುದು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿಯಾಗಿದೆ ಎನ್ನುತ್ತಾರೆ ಹುಣಸಗಿಯ ವಜ್ಜಲ ಗ್ರಾಮದ ನಿಂಗಣ್ಣ ಕುಂಬಾರ.
‘ಇಂದು ಜಗಮಗಿಸುವ ದೀಪಗಳು, ಆಕಾಶ ಬುಟ್ಟಿ, ವಿದ್ಯುತ್ ಅಲಂಕಾರಿಕ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಆದರೂ ಮನೆಗೆ ಎರಡು ಪ್ರಣತಿಗಳನ್ನು ಮಾತ್ರ ನಮ್ಮಿಂದ ಕಡ್ಡಾಯವಾಗಿ ತೆಗೆದುಕೊಳ್ಳುತ್ತಾರೆ. ದೇವರ ಮನೆ ಹಾಗೂ ತಲಬಾಗಿಲು ಬಳಿ ನಮ್ಮ ಪ್ರಣತಿಗಳನ್ನೇ ಬೆಳಿಸುತ್ತಿರವುದು ನಮ್ಮ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿದೆ’ ಎಂದು ಹುಣಸಗಿಯ ಶಾಂತಮ್ಮ ಬಸಲಿಂಗಪ್ಪ ಕುಂಬಾರ ಹೇಳುತ್ತಾರೆ.
‘ದೀಪಾವಳಿ ಹಾಗೂ ಶಿವರಾತ್ರಿ ಹಬ್ಬಕ್ಕೆಂದೇ ನಾವು ಮಣ್ಣಿನ ಹಣತೆಗಳನ್ನು ತಯಾರಿಸಿ ರೈತರು ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಎಲ್ಲರ ಮನೆಗಳಿಗೂ ಮುಂಚೆಯೇ ಮುಟ್ಟಿಸುತ್ತೇವೆ. ಆದರೆ, ಪ್ರತಿ ಮನೆಯಲ್ಲಿಯೂ ಅವುಗಳನ್ನು ಗೌರವದಿಂದ ಪಡೆದುಕೊಂಡು ಉಡಿಯಕ್ಕಿ, ದವಸ ಧಾನ್ಯ ಹಾಗೂ ಕಸುಬಿಗೆ ತಕ್ಕಷ್ಟು ದಕ್ಷಿಣೆ ಕೂಡಾ ನೀಡುತ್ತಾರೆ’ ಎಂದು ಶ್ರೀನಿವಾಸಪುರದ ನಂದಪ್ಪ ಸಿದ್ದಣ್ಣ ಕುಂಬಾರ ಹೇಳಿದರು.
‘ಮಾರುಕಟ್ಟೆಯಲ್ಲಿ ಪ್ರಣತಿಗಳ ಬದಲಿಗೆ ಬಗೆ ಬಗೆಯ ದೀಪಗಳು ಬಂದಿದ್ದರೂ ನಾವು ನಮ್ಮ ಕುಲ ಕಸುಬನ್ನು ಬಿಟ್ಟಿಲ್ಲ. ಆದರೆ, ಯುವ ಜನತೆ ಮಾತ್ರ ಈ ಕಸುಬಿನಲ್ಲಿ ಭವಿಷ್ಯವಿಲ್ಲ ಎಂದು ಪರ್ಯಾಯ ಉದ್ಯೋಗದತ್ತ ಹೆಜ್ಜೆ ಹಾಕಿದ್ದಾರೆ’ ಎಂದು ವಿವರಿಸಿದರು.
ಹುಣಸಗಿ ಪಟ್ಟಣದಲ್ಲಿ ಆರು ಬಗೆಯ ಹಾಗೂ ವಿವಿಧ ವಿನ್ಯಾಸದ ಸುಮಾರು 20 ಸಾವಿರಕ್ಕೂ ಹೆಚ್ಚು ಚಿಕ್ಕ ಹಣತೆ ತರಿಸಲಾಗಿದೆ ಎಂದು ಹುಣಸಗಿಯ ಬಸವರಾಜ ಕುಂಬಾರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.