ADVERTISEMENT

ಯಾದಗಿರಿ | ಕೊಚ್ಚಿ ಹೋದ ರಸ್ತೆ, ಗುಂಡಿಗಳಿಂದ ಜನಸಾಮಾನ್ಯರು ಹೈರಾಣು 

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 3:54 IST
Last Updated 22 ಅಕ್ಟೋಬರ್ 2025, 3:54 IST
ಸೈದಾಪುರ ಸಮೀಪದ ಆನೂರು.ಕೆ, ಆನೂರು.ಬಿ ಗ್ರಾಮಗಳಿಂದ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವಾಹದಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿರುವುದು 
ಸೈದಾಪುರ ಸಮೀಪದ ಆನೂರು.ಕೆ, ಆನೂರು.ಬಿ ಗ್ರಾಮಗಳಿಂದ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವಾಹದಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿರುವುದು    

ಆನೂರು.ಕೆ (ಸೈದಾಪುರ): ಕಳೆದ ತಿಂಗಳು ಸುರಿದ ಭಾರಿ ಮಳೆ ಹಾಗೂ ಮಹಾರಾಷ್ಟ್ರದಿಂದ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಪರಿಣಾಮ ಹಿನ್ನೀರಿನ ಅಬ್ಬರಕ್ಕೆ ಅನೇಕ ರಸ್ತೆಗಳು ಕೊಚ್ಚಿ ಹೋಗಿವೆ.

ಸೈದಾಪುರದಿಂದ ವಡಗೇರಾ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಾಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಸಮೀಪದ ಬೆಳಗುಂದಿ, ಆನೂರ.ಕೆ, ಆನೂರ.ಬಿ ಮಾರ್ಗದ ಮೂಲಕ ಕಂದಳ್ಳಿ, ಬಿಳ್ಹಾರ ಸೇರಿದಂತೆ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾದ ಕಾರಣ ವ್ಯಾಪಾರ ವಹಿವಾಟು, ಶೈಕ್ಷಣಿಕ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ತರಳುವ ಜನರು ಪರದಾಡುವಂತಾಗಿದೆ.

ADVERTISEMENT

ಪ್ರವಾಹದ ರಭಸಕ್ಕೆ ಸುಮಾರು 1 ಕಿ.ಮೀ ರಸ್ತೆ ಹಾಳಾಗಿದ್ದು, ದೊಡ್ಡ ತಗ್ಗುಗಳು ನಿರ್ಮಾಣವಾಗಿದೆ. 

ಸಂಕಷ್ಟದಲ್ಲಿ ರೈತರು: ಇನ್ನು ಕೆಲ ದಿನಗಳಲ್ಲೇ ಭತ್ತ ಕಟಾವು ಕಾರ್ಯ ಪ್ರಾರಂಭವಾಗಲಿದೆ. ರೈತರು ಫಸಲು ಮಾರಾಟಕ್ಕೆ ಈ ಬ್ರಿಜ್ ಕಂ ಬ್ಯಾರೇಜ್ ರಸ್ತೆ ಮೂಲಕ ರಾಯಚೂರು ಸೇರಿದಂತೆ ಬೇರೆ ಬೇರೆ ಕಡೆ ಹೋಗುತ್ತಿದ್ದರು. ಆದರೆ ರಸ್ತೆ ಹಾಳಾಗಿದ್ದರಿಂದ ರೈತರು ಭತ್ತದ ಫಸಲು ಸಾಗಿಸಲು ಹತ್ತಿರದ ಮಾರ್ಗಗಳನ್ನು ಹುಡುಕುವ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ.

ರಸ್ತೆ ಗುಂಡಿಮಯ: ಸಾವೂರು ಗ್ರಾಮದಿಂದ ಆನೂರು.ಕೆ ಮತ್ತು ಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 7 ಕೀ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ರಸ್ತೆಯಲ್ಲಿ ಹಾಕಿದ ಡಾಂಬರ್‌ ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ಜಲ್ಲಿಕಲ್ಲು, ತಗ್ಗುಗಳಿಂದ ಕೂಡಿದೆ. ರಾತ್ರಿ ಸಮಯದಲ್ಲಿ ರೋಗಿಗಳು, ವಯೋವೃದ್ಧರು, ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುವಾಗ ನರಕಯಾತನೆ ಅನುಭವಿಸುತ್ತಿದ್ದಾರೆ. ನಿತ್ಯ ಇಲ್ಲಿ ಸಂಚರಿಸುವ ವಾಹನಗಳು ಹಾಳಾಗಿ ಗ್ಯಾರೇಜ್ ಸೇರುತ್ತಿವೆ.

ರಸ್ತೆ ದುರಸ್ತಿಗೆ ಮುಂದಾಗದ ಅಧಿಕಾರಿಗಳು: ಪ್ರವಾಹ ಕಡಿಮೆಯಾಗಿ ಅನೇಕ ದಿನಗಳು ಕಳೆದರೂ ಕೂಡ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಕೊಚ್ಚಿ ಹೋದ ರಸ್ತೆ ದುರಸ್ತಿಗೆ ಮುಂದಾಗದಿರುವುದು ಅವರ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಸ್ಥಳಿಯರು.

ಸೈದಾಪುರ ಸಮೀಪದ ಸಾವೂರು ಗ್ರಾಮದಿಂದ ಆನೂರು.ಕೆ ಮತ್ತು ಆನೂರು.ಬಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಗ್ಗು ಗುಂಡಿಗಳಿಂದ ಕೂಡಿರುವುದು  
ರಸ್ತೆ ಸಂಪರ್ಕ ಕಡಿತಗೊಂಡಿದ್ದು ರೈತರಿಗೆ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶೀಘ್ರ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೊಳಿಸಿ ಅನುಕೂಲ ಮಾಡಬೇಕು
ಫಕೀರಸಾಬ್ ಆನೂರು.ಕೆ ಗ್ರಾಮಸ್ಥ
ಪ್ರವಾಹ ಬಂದು ಹೋಗಿ ಸುಮಾರು ಹದಿನೈದು ದಿನಗಳು ಕಳೆದರೂ ಕೂಡ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಶೀಘ್ರ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು
ಬಸವರಾಜ ಹೊಸಮನಿ ಗ್ರಾ.ಪಂ ಸದಸ್ಯ ಆನೂರು.ಬಿ

ಆರಂಭವಾಗದ ರಸ್ತೆ ದುರಸ್ತಿ ಕಾರ್ಯ

ಆನೂರು.ಬಿ ಗ್ರಾಮದಿಂದ ಆನೂರು.ಕೆ ಗ್ರಾಮದವರೆಗೆ ಹದಗೆಟ್ಟ ರಸ್ತೆ ದುರಸ್ತಿಗೆ ಸುಮಾರು ₹ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೆಲ ದಿನಗಳಲ್ಲಿ ದುರಸ್ತಿ ಕಾರ್ಯ ಆರಂಬವಾಗಲಿದೆ ಎಂದು ಒಂದು ವರ್ಷದ ಹಿಂದೆ ಶಾಸಕರು ಕಾರ್ಯಕ್ರವವೊಂದರಲ್ಲಿ ಹೇಳಿದ್ದರು. ಕಳೆದ ಕೆಲ ದಿನಗಳ ಹಿಂದೆ ಅತಿವೃಷ್ಟಿಯಿಂದ ಬೆಳೆ ಹಾನಿ ವೀಕ್ಷಣೆಗೆ ಬಂದಾಗಲೂ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಆದರೆ ಈವರೆಗೂ ಆರಂಭವಾಗಿಲ್ಲ. ಕೇವಲ ಸುಳ್ಳು ಭರವಸೆ ನೀಡಿ ಜನರನ್ನು ನಂಬಿಸುತ್ತಿದ್ದಾರೆ ಎನ್ನತ್ತಾರೆ ಆನೂರು.ಬಿ ಗ್ರಾಮದ ಬಸವರಾಜ ಹೊಸಮನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.