
ಯಾದಗಿರಿ: ರಾಜ್ಯದ 30ನೇ ಜಿಲ್ಲೆಯಾದ ಯಾದಗಿರಿಗೆ 16 ವರ್ಷಗಳು ಕಳೆದಿವೆ. ಇದುವರೆಗೂ ಜಿಲ್ಲೆ ಕೇಂದ್ರದ ನಗರಕ್ಕೆ ವ್ಯವಸ್ಥಿತವಾದ ಒಳಚರಂಡಿ ಜಾಲ ನಿರ್ಮಾಣ ಮಾಡದೆ ಕೂಗಳತೆ ದೂರದಲ್ಲಿರುವ ಇಲ್ಲಿನ ಜೀವನದಿ ಭೀಮೆಯ ಒಡಲಿಗೆ ಕೊಳಚೆ ನೀರು ಹರಿಸುತ್ತಿರುವುದು ದಶಕಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಯಾದಗಿರಿ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಾಲು-ಸಾಲು ಸಮಸ್ಯೆಗಳು ಎದ್ದು ಕಾಣುತ್ತಿವೆ. ಪ್ರತಿ ಬಾರಿ ರಾಜ್ಯ ಬಜೆಟ್ ಮಂಡನೆಗೂ ಮುನ್ನ ನಿರೀಕ್ಷೆಗಳ ಭಾರ ಹೊತ್ತುಕೊಂಡು ಚಾತಕ ಪಕ್ಷಿಗಳಂತೆ ಕಾಯುವುದು ಸ್ಥಳೀಯರಿಗೆ ಅಭ್ಯಾಸವಾಗಿದೆ. ಪರಿಹಾರ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.
ಯಥೇಚ್ಛ ಜಾನುವಾರು, ಕುರಿಗಳಿದ್ದರು ಹೈನುಗಾರಿಕೆ ಉತ್ತೇಜನೆ ನೀಡುವ ಯೋಜನೆಳು ಬರುತ್ತಿಲ್ಲ. ಭೀಮಾ ಮತ್ತು ಕೃಷ್ಣಾ ನದಿಗಳ ಜೊತೆಗೆ 340 ಕೆರೆಗಳಿಂದಾಗಿ ಒಳನಾಡು ಮೀನುಗಾರಿಕೆಗೆ ಹೇರಳ ಅವಕಾಶಗಳಿದ್ದರೂ ಆರ್ಥಿಕ ಮತ್ತು ಮಾರುಕಟ್ಟೆಯ ಬೆಂಬಲವಿಲ್ಲ. ಶೈಕ್ಷಣಿಕವಾಗಿ ಹಿಂದುಳಿದಿದ್ದು, ಉನ್ನತ ಶಿಕ್ಷಣಕ್ಕಾಗಿ ನೆರೆಯ ಜಿಲ್ಲೆಗಳ ವಿಶ್ವವಿದ್ಯಾಲಯಗಳನ್ನು ಆಶ್ರಯಿಸುವ ಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದು. ವಿಶ್ವವಿದ್ಯಾಲಯ ಇರಲಿ, ಸ್ನಾತಕೋತ್ತರ ಅಧ್ಯಯನ ಕೇಂದ್ರವೂ ಸ್ಥಾಪನೆ ಮಾಡಲು ಆಗುತ್ತಿಲ್ಲ ಎಂಬುದರ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶವಿದೆ.
ವಡಿಗೇರಾ ತಾಲ್ಲೂಕಿನ ಎರಡೂ ಬದಿಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳ ಒಡಲು ಇದ್ದರೂ ಕೃಷಿಗೆ ನೀರಿನ ಬರವಿದೆ. ಕೃಷ್ಣ ಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಕಾಲುವೆಯ ನೀರು ಈ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ಇಂದಿಗೂ ಸಿಗುತ್ತಿಲ್ಲ.
ಕೆಬಿಜೆಎನ್‌ಎಲ್ ಏತ ನೀರಾವರಿ ಯೋಜನೆಯಡಿ ಯಾದಗಿರಿ ಭೀಮಾ ಫ್ಲ್ಯಾಂಕ್ ಯೋಜನೆಗೆ ₹ 3,779 ಕೋಟಿ ಅನುದಾನ 2024ರಲ್ಲಿ ಘೋಷಣೆಯಾಗಿತ್ತು. ಇದುವರೆಗೂ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಕಂದಳ್ಳಿ, ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳಿಗೆ ದುರಸ್ತಿಯ ಗ್ಯಾರಂಟಿ ಸಿಗುತ್ತಿಲ್ಲ. ಸೌದಗಾರ, ಹತ್ತಿಕುಣಿ ಜಲಾಶಯಗಳಿಗೆ ಕಾಯಕಲ್ಪ ಬೇಕಿದೆ.
ಜಿಲ್ಲೆಯ ಆರ್ಥಿಕ ಸದೃಢತೆ ನಿರ್ಧರಿಸುವುದು ಅಲ್ಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಚಟುವಟಿಕೆಗಳು. ಇರುವ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಂಪನೆಗಳು ಬಂದಿಲ್ಲ. ನಗರದ ಸಮೀಪದಲ್ಲೇ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುವಂತೆ ಕೋರುತ್ತಿರುವ ಉದ್ಯಮಿಗಳ ಬೇಡಿಕೆಗಳಿಗೆ ಸ್ಪಂದನೆಯೂ ಸಿಕ್ಕಿಲ್ಲ. ಕೈಗಾರಿಕೆಗಳಿಲ್ಲದೇ ಜನರು ನಗರಗಳಿಗೆ ಗುಳೆ ಹೋಗುವುದು ತಪ್ಪುತ್ತಿಲ್ಲ.
ಕೃಷ್ಣೆ–ಭೀಮೆ ಸೇರುವ ಸಂಗಮ, ಮೈಲಾಪುರ, ಹತ್ತಿಕುಣಿ, ನಗರದಲ್ಲಿನ ಐತಿಹಾಸಿಕ ಕೋಟೆಯಂತಹ ತಾಣಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಗೆ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಡಗೇರಾ ತಾಲ್ಲೂಕಾದರೂ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಕಚೇರಿಗಳು ತೆರೆದಿಲ್ಲ, ತಾಂತ್ರಿಕ ಶಿಕ್ಷಣಕ್ಕೆ ಯಾದಗಿರಿಯನ್ನೇ ಅವಲಂಬಿಸುವಂತೆ ಆಗಿದೆ.
‘ಕ್ಷೇತ್ರದ ಅಭಿವೃದ್ಧಿಗೆ ₹ 585 ಕೋಟಿ ಅನುದಾನಕ್ಕೆ ಮನವಿ’
‘ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯನ್ನು ಇರಿಸಿಕೊಂಡು 2026-27ನೇ ಸಾಲಿನ ಬಜೆಟ್‌ನಲ್ಲಿ ₹ 584.28 ಕೋಟಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ’ ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ‘ಪ್ರಜಾವಾಣಿ’ಗೆ ತಿಳಿಸಿದರು. ‘ನಗರದಲ್ಲಿ ಒಳಚರಂಡಿ ಕಾಮಗಾರಿಗಾಗಿ ₹287.70 ಕೋಟಿ ‘ಯಿಮ್ಸ್’ ಆವರಣದಲ್ಲಿ 200 ಬೆಡ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹ 100 ಕೋಟಿ ವಡಗೇರಾದಲ್ಲಿ 50 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ₹ 20.58 ಕೋಟಿ ಜಿಲ್ಲಾ ಕೇಂದ್ರದಲ್ಲಿ 50 ಹಾಸಿಗೆಯ ಆಯುಷ್ ಸಂಯುಕ್ತ ಆಸ್ಪತ್ರೆ ಕಟ್ಟಡಕ್ಕೆ ₹2 ಕೋಟಿ ಆರೋಗ್ಯ ಇಲಾಖೆ ತರಬೇತಿ ಸಭಾಂಗಣ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಕೇಳಿದ್ದೇನೆ’ ಎಂದರು. ‘ವನಮಾರಪಳ್ಳಿ - ರಾಯಚೂರು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಹೊಸ 15 ಸೇತುವೆ ನಿರ್ಮಾಣಕ್ಕೆ ₹ 75 ಕೋಟಿ ದೊರನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿಗಾಗಿ ₹ 25 ಕೋಟಿ ವಿಶೇಷ ಅನುದಾನ ನಗರದಲ್ಲಿ ಜಿಟಿಟಿಸಿ ಕೈಗಾರಿಕಾ ಕಾಲೇಜು ಸ್ಥಾಪನೆಗೆ ₹ 73 ಕೋಟಿ ಬಜೆಟ್‌ನಲ್ಲಿ ಮೀಸಲಿಡುವಂತೆ ಕೋರಿದ್ದೇನೆ. ಮೈಲಾಪುರ ಗುಡ್ಡದಲ್ಲಿ ರೂಪ್ ವೇ ಆರಂಭವಾಗಲಿದೆ’ ಎಂದು ಹೇಳಿದರು.
ಆಸೆಯಾಗಿಯೇ ಉಳಿದ ಆಶನಾಳ ಕೈಗಾರಿಕಾ ಪ್ರದೇಶ ‘
ನಗರ ಸಮೀಪದ ಆಶನಾಳ ಗ್ರಾಮದಲ್ಲಿ ಅತಿ ಸಣ್ಣ ಸಣ್ಣ ಕೈಗಾರಿಕೆಗಳಿಗಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡುವಂತೆ ನೂರಾರು ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ. ಸರ್ವೆ ಬಿಟ್ಟರೆ ಬೇರೆಯಾವುದೇ ಪ್ರಗತಿಯಾಗಿಲ್ಲ’ ಎಂದು ಜಿಲ್ಲಾ ರೈಸ್ ಮಿಲ್ ಸಂಘದ ಅಧ್ಯಕ್ಷ ಹನುಮಾನದಾಸ್ ಮುಂದಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶ ದೂರದಲ್ಲಿದೆ. ನಗರದ ಸುತ್ತ 10–12 ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕೆ ಪ್ರದೇಶ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿ ಉದ್ಯಮ ಸ್ಥಾಪನೆಗೆ ಅರ್ಜಿಗಳು ಸಲ್ಲಿಕೆ ಮಾಡಿದ್ದೇವೆ. ಇದುವರೆಗೂ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆಗಳಿಗೆ ಪೂರಕವಾಗುವ ರಿಂಗ್ ರಸ್ತೆಯೂ ನಿರ್ಮಾಣ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಟ್ಟಡಗಳು ಕಟ್ಟಿ ವಲಸೆಹೋದ ಎಂಜಿನಿಯರ್‌ಗಳು’
‘ವಡಗೇರಾ ತಾಲ್ಲೂಕು ವ್ಯಾಪ್ತಿಯಲ್ಲಿ ಕೆಬಿಜೆಎನ್ಎಲ್ ಕಾಲುವೆ ನಿರ್ಮಾಣ ಸಂಬಂಧ 3–4 ದಶಕಗಳ ಹಿಂದೆಯೇ ವಡಗೇರಾದಲ್ಲಿ ಕಚೇರಿಗಳ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಸರಿಯಾಗಿ ಕಾಮಗಾರಿಗಳು ನಡೆಯದೆ ಬಂದಂತಹ ಎಂಜಿನಿಯರ್‌ಗಳು ದೋರನಹಳ್ಳಿ ಕ್ಯಾಂಪ್‌ನ ಕಚೇರಿಗಳಿಗೆ ವಲಸೆ ಹೋದರು. ನೀರಾವರಿ ಯೋಜನೆ ಬ್ರಿಡ್ಜ್ ಕಂ ಬ್ಯಾರೇಜ್‌ಗಳತ್ತ ಯಾರೂ ಗಮನ ಹರಿಸುತ್ತಿಲ್ಲ. ಈ ಬಜೆಟ್‌ನಲ್ಲಿಯಾದರೂ ಒಂದಿಷ್ಟು ಅನುದಾನ ಸಿಗಲಿ’ ಎನ್ನುತ್ತಾರೆ ರೈತ ಶಿವಕುಮಾರ ಕೊಂಕಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.