ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಸಮೀಪದ ದುಗನೂರ್ ಹಟ್ಟಿಯಲ್ಲಿ ಗುರುವಾರ ಬೆಳಿಗ್ಗೆ ಇಬ್ಬರು ಮಕ್ಕಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ತಂದೆಯ ಹಲ್ಲೆಯಿಂದಾಗಿ ಸಾನ್ವಿ ಮತ್ತು ಭಾರ್ಗವ್ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗ ಹೇಮಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೊಲೆಯ ಬಳಿಕ ಮಕ್ಕಳ ತಂದೆ ಶರಣಪ್ಪ ಹಣಮಂತ ಪರಾರಿ ಆಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶರಣಪ್ಪ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಬುಧವಾರ ರಾತ್ರಿಯೂ ಜಗಳವಾಗಿತ್ತು. ಕೋಪಗೊಂಡಿದ್ದ ಶರಣಪ್ಪ ಮಲಗಿದ್ದ ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಕ್ಕಳು ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಠಾಣೆಯ ಪಿಎಸ್‌ಐ ಹನುಮಂತ ಭಂಕಲಗಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
'ತನ್ನ ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳ ತೆಗೆಯುತ್ತಿದ್ದ ಶರಣಪ್ಪ, ಮೂವರು ಮಕ್ಕಳು ತನ್ನವರಲ್ಲ ಎಂದು ವಾದಿಸುತ್ತಿದ್ದ. ಇದರಿಂದ ಬೇಸತ್ತ ಪತ್ನಿಯು ಒಂದೂವರೆ ವರ್ಷ ತವರು ಮನೆಯಲ್ಲಿ ಇದ್ದರು. 15 ದಿನಗಳ ಹಿಂದೆಯಷ್ಟೇ ಗಂಡನ ಮನೆಗೆ ಬಂದಿದ್ದರು. ಗುರುವಾರ ಬೆಳಿಗ್ಗೆ ಮತ್ತೆ ಗಲಾಟೆ ಮಾಡಿದ ಶರಣಪ್ಪ, ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ಬಳಿಕ ಸಮೀಪದ ಬೆಟ್ಟದಲ್ಲಿ ಅವಿತುಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ' ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.