
ಯಾದಗಿರಿ: ಸರ್ಕಾರಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧಿ ಸರಬರಾಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲ ವೃಂದ ಸಂಘಗಳ ಜಿಲ್ಲಾ ಘಟಕಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಸಂಘಗಳ ಮುಖಂಡರು, ಸದಸ್ಯರು ಬೇಡಿಕೆಗಳ ಬಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ಮಾಡಿದರು.
ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಗಳಿಗೆ ಒಮ್ಮೆ ತಿದ್ದುಪಡಿ ಮಾಡಲು ಸರ್ಕಾರಿ ಆದೇಶವಿದೆ. ಆದರೂ ಅದನ್ನು ಉಲ್ಲಂಘಿಸಿ 1973ರಿಂದ ಇಲ್ಲಿಯವರೆಗೆ ಇಲಾಖೆಯ ವೃಂದ ಮತ್ತು ನೇಮಕಾತಿಯ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಈ ಬಗ್ಗೆ ಶೀಘ್ರ ತಿದ್ದುಪಡಿಯಾಗಬೇಕು ಎಂದರು.
ಜೇಷ್ಠತಾಪಟ್ಟಿ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಪರಿಷ್ಕರಿಸಬೇಕು ಎಂಬ ನಿಯಮವಿದ್ದರೂ ಸುಮಾರು ವರ್ಷಗಳಿಂದ ಹಾಗೆಯೇ ಉಳಿದಿದೆ. ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಕಳೆದ 5 ವರ್ಷಗಳಿಂದ ಮುಂಬಡ್ತಿಗಳು ನೀಡಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸೇವಾನಿರತ ವೈದ್ಯರು, ಅಧಿಕಾರಿ, ನೌಕರರ ಉನ್ನತ ವ್ಯಾಸಂಗ, ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶ ಕೊಡಬೇಕು. ಇಲಾಖೆಗಳಲ್ಲಿನ ವರ್ಗಾವಣೆ ಕಾಯ್ದೆಯಲ್ಲಿ ನ್ಯೂನತೆಗಳನ್ನು ಸರಿಪಡಿಸದೆ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ಮಾಡಿ ವರ್ಗಾವಣೆ ಮಾಡುತ್ತಿರುವುದನ್ನು ಸರಿಪಡಿಸಬೇಕು ಎಂದರು.
ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುತ್ತಿಗೆ ವೈದ್ಯರ, ನೌಕರರ ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಸೂಕ್ತ ವೇತನ ವೆಚ್ಚಳ ಮಾಡಬೇಕು. ಸರ್ಕಾರಿ ವೈದ್ಯರಿಗೆ ಕರ್ತವ್ಯದ ಅವಧಿಯ ನಂತರ ಖಾಸಗಿ ಸೇವೆಗೆ ಈ ಹಿಂದಿನಂತೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಪ್ರತಿಭಟನೆಯಲ್ಲಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಮಲ್ಲನಗೌಡ ಎಸ್.ಪಾಟೀಲ, ಕಾರ್ಯದರ್ಶಿ ಡಾ.ಯಶವಂತ್ ರಾಠೋಡ, ಕೇಂದ್ರ ಸಂಘದ ಜಿಲ್ಲಾ ಅಧ್ಯಕ್ಷ ಸಾಹೇಬಗೌಡ ಬಿ. ಮಾನೇಗಾರ, ಕಾರ್ಯದರ್ಶಿ ರಂಗರಾವ್ ಕುಲಕರ್ಣಿ ಸೇರಿ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.