
ಯಾದಗಿರಿ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಹಿ ಸಂಗ್ರಹ ಹಾಗೂ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದರು.
‘ಫೆಬ್ರುವರಿ 7ರಂದು ಕನ್ಯಾಕುಮಾರಿಯಿಂದ ರೈತ ಜಾಗೃತಿ ಯಾತ್ರೆ ಆರಂಭವಾಗಲಿದ್ದು ಕೇರಳ, ಪುದುಚೇರಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಮೂಲಕ ಸಾಗಲಿದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಫೆ.10ಕ್ಕೆ ಚಾಮರಾಜನಗರ, 11ರಂದು ಮೈಸೂರು, ಮಂಡ್ಯ, ರಾಮನಗರಕ್ಕೆ ಬರಲಿದೆ. 12ರಂದು ಬೆಂಗಳೂರು, ಚಿಕ್ಕಬಳ್ಳಾಪುರ ಮೂಲಕ ಆಂಧ್ರಪ್ರದೇಶಕ್ಕೆ ಹೋಗಲಿದೆ. ರಾಜ್ಯದ ಎಲ್ಲಾ ರೈತ ಸಂಘಟನೆಗಳ ಮುಖಂಡರು, ರೈತರು ಸ್ವಯಂ ಪ್ರೇರಿತವಾಗಿ ಬೆಂಬಲಿಸಿ ಸಹಿ ಮಾಡಬೇಕು’ ಎಂದು ಕೋರಿದರು.
‘40 ದಿನಗಳ ಯಾತ್ರೆಯು ಕಾಶ್ಮೀರ ತಲುಪಿದ ಬಳಿಕ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಹಕ್ಕೊತ್ತಾಯಗಳ ಸಹಿ ಸಂಗ್ರಹ ಪ್ರತಿಯನ್ನು ಸಲ್ಲಿಸಲಾಗುವುದು. ಮಾರ್ಚ್ 19ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು’ ಎಂದರು.
‘ಎಂಎಸ್‌ಪಿ ಖಾತರಿ ಕಾನೂನು ಇಲ್ಲದಕ್ಕೆ ದೇಶದ ರೈತರು ವರ್ಷಕ್ಕೆ ₹ 15 ಲಕ್ಷ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ, ರೈತರಲ್ಲಿ ಜಾಗೃತಿ ಮೂಡಿಸಿ, ಸರ್ಕಾರವನ್ನು ಎಚ್ಚರಿಸಲು ಈ ಯಾತ್ರೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಶಿವಶರಣಪ್ಪ, ಯಲ್ಲಪ್ಪ ಮಲ್ಲಿಬಾವಿ, ಕೊಟ್ರೇಶ್ ಚೌದರಿ, ಬಸವರೆಡ್ಡಿ ಪಾಟೀಲ, ಬಸವರಾಜ ದಳಪತಿ, ವೆಂಕಟರಾಮರೆಡ್ಡಿ, ಚಂದ್ರಶೇಖರ್ ಸಾಹುಕಾರ್, ದೇವೇಂದ್ರಪ್ಪ ಚಂದಲಾಪುರ್, ಅಶೋಕ ಚೌದರಿ, ಚಾಂದ್ ಹುಸೇನ್ ಚನ್ನಬಲಾಪುರ, ಶ್ಯಾಮಪ್ಪ ಚಂಡಿಕೆರಿ, ಹನುಮಂತ ವೆಂಕಟಾಪುರ, ಕೊಟ್ರಪ್ಪ ಚಿಲ್ಲರ್ ಸೇರಿ ಇತರರು ಉಪಸ್ಥಿತರಿದ್ದರು.
ಸಭೆ; ಪದಾಧಿಕಾರಿಗಳ ಆಯ್ಕೆ
ಜಾಗೃತಿ ಯಾತ್ರೆ ಹಾಗೂ ಸಹಿ ಸಂಗ್ರಹದ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಯಲ್ಲಪ್ಪ ನಾಯಕ ಗೌರವಾಧ್ಯಕ್ಷರಾಗಿ ಶಿವ ಶರಣಪ್ಪ ಅಯ್ಯಳ ಪ್ರಧಾನ ಕಾರ್ಯದರ್ಶಿಯಾಗಿ ಬಸವ ರೆಡ್ಡಿ ಪಾಟೀಲ ಜಿಲ್ಲಾ ಸಂಚಾಲಕರಾಗಿ ಬಸವರಾಜ್ ದಳಪತಿ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.