ADVERTISEMENT

ಸಮುದಾಯ ಗೋದಾಮು ಕಾಮಗಾರಿಯಲ್ಲಿ ಅವ್ಯವಹಾರ: ಉಮೇಶ ಮುದ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:13 IST
Last Updated 29 ಡಿಸೆಂಬರ್ 2025, 6:13 IST
ಉಮೇಶ ಮುದ್ನಾಳ
ಉಮೇಶ ಮುದ್ನಾಳ   

ಯಾದಗಿರಿ: ‘ತಾಲ್ಲೂಕಿನ ಮುದ್ನಾಳ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ₹ 18.64 ಲಕ್ಷ ವೆಚ್ಚದಲ್ಲಿನ ಸಮುದಾಯ ಗೋದಾಮು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಆರೋಪಿಸಿದರು.

‘ಗೋದಾಮು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸದೆ ಅನುದಾನನ್ನು ಕೆಲವು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವ್ಯವಹಾರ ಎಸಗಿದ ಬಗ್ಗೆ ದಾಖಲೆಗಳ ಸಮೇತ ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಿಗೆ ದೂರು ನೀಡಿದರೂ ಇದುವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅವ್ಯವಹಾರದಲ್ಲಿ ಭಾಗಿಯಾಗಿ ಹಣ ಲಪಟಾಯಿಸಿದ ಅಧಿಕಾರಿಗಳಿಂದಲೇ ಹಣವನ್ನು ಹಿಂಪಡೆದು ಗೋದಾಮು ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವೂ ತೆಗೆದುಕೊಳ್ಳಬೇಕು. ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು’ ಎಂದರು.

ADVERTISEMENT

‘ಬಡ ರೈತರ ಉಪಯೋಗಕ್ಕೆ ನರೇಗಾ ಯೋಜನೆಯಡಿ ಗೋದಾಮು ಕಟ್ಟಲು ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅಲ್ಪ ಕೆಲಸ ಮಾಡಿ ಒಂದೇ ದಿನದಲ್ಲಿ ನಾಲ್ಕು ಬಿಲ್‌ಗಳನ್ನು ಎತ್ತುವ‌ ಮೂಲಕ‌ ಪಿಡಿಒ ಸೇರಿ ಇತರೆ ಮೇಲಧಿಕಾರಿಗಳು ಅವ್ಯವಹಾರ ಎಸಗಿದ್ದಾರೆ. ಈ ಸಂಬಂಧ ದೂರು ಕೊಡಲಾಗಿದ್ದು, ಅಧಿಕಾರಿಗಳನ್ನು ರಕ್ಷಿಸಿ ಈ ಹಿಂದಿನ ಹಾಗೂ ಹಾಲಿ ಅಧ್ಯಕ್ಷರಿಗೆ ಪ್ರಾದೇಶಿಕ ಆಯುಕ್ತರು ನೋಟಿಸ್ ಕೊಟ್ಟಿದ್ದಾರೆ. ತಪ್ಪು ಎಸಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗಿದೆ’ ಎಂದು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ರವಿ, ಪ್ರಭು, ರಾಜಪ್ಪ, ಭೀಮಾಶಂಕರ, ನಾಗಪ್ಪ, ಮಲ್ಲೇಶಿ, ಶಿವು, ಪವನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.