ADVERTISEMENT

ತುರ್ಕಲದೊಡ್ಡಿ: ಮುಸ್ಲಿಂ ಮಹಿಳೆಯರಿಂದ ಶವ ಸಂಸ್ಕಾರ

ವಿವಾದಿತ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಅಡ್ಡಿ; ಖಬರಸ್ತಾನಕ್ಕೇ ಬಂದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 18:06 IST
Last Updated 7 ಡಿಸೆಂಬರ್ 2019, 18:06 IST

ಸೈದಾಪುರ (ಯಾದಗಿರಿ ಜಿಲ್ಲೆ): ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರು ಶವ ಸಂಸ್ಕಾರಕ್ಕಾಗಿ ಎಂದೂ ಸ್ಮಶಾನದ ಹಾದಿ ಹಿಡಿದವರಲ್ಲ. ಆದರೆ, ಸಮೀಪದ ತುರ್ಕಲದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಮುಸ್ಲಿಂ ಮಹಿಳೆಯರೇ ವ್ಯಕ್ತಿಯೊಬ್ಬರ ಶವಸಂಸ್ಕಾರ ಮಾಡಿದ್ದಾರೆ.

ತುರ್ಕಲದೊಡ್ಡಿ ಗ್ರಾಮದಲ್ಲಿ ಖಬರಸ್ತಾನದಸ್ಥಳ ಕುರಿತು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಹುದಿನಗಳಿಂದ ವಿವಾದ ಇದೆ. ಶುಕ್ರವಾರ ಮೃತಪಟ್ಟ ಈ ಗ್ರಾಮದ ಖಾನಸಾಬ್ (55) ಅವರ ಅಂತ್ಯ ಸಂಸ್ಕಾರವನ್ನು ಈ ವಿವಾದಿತ ಸ್ಥಳದಲ್ಲಿ ನೆರವೇರಿಸಲು ಮುಸ್ಲಿಂ ಸಮುದಾಯದವರು ತೀರ್ಮಾನಿಸಿ, ಅದಕ್ಕೆ ತಯಾರಿ ಮಾಡಿದ್ದರು.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು, ‘ಈ ಜಾಗದಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ’ ಎಂದು ಹೇಳಿ ಅಂತ್ಯಸಂಸ್ಕಾರ ತಡೆಯಲು ಯತ್ನಿಸಿದರು. ಆಗ ಗ್ರಾಮದ ಮುಸ್ಲಿಮರು ಮತ್ತು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ADVERTISEMENT

ಈ ಸಂದರ್ಭ ಮುಸ್ಲಿಂ ಮಹಿಳೆಯರೇ ಶವವನ್ನು ಹೊತ್ತುಕೊಂಡು ಹೋಗಿ, ವಿವಾದಿತ ಖಬರಸ್ತಾನದಲ್ಲಿಯೇ ಗುಂಡಿ ತೋಡಿ ಅಂತ್ಯಸಂಸ್ಕಾರ ನೆರವೇರಿಸಿದರು.

‘ಖಬರಸ್ತಾನ ಇರುವ ಜಾಗದ ಬಗ್ಗೆ ವಿವಾದ ಇದೆ.ಅದರ ಪಕ್ಕದಲ್ಲಿಯೇ ಸರ್ಕಾರಿ ಗೈರಾಣಿ ಭೂಮಿ ಇದ್ದು, ಈ ಹಿಂದೆ ಇಬ್ಬರ ಅಂತ್ಯ ಸಂಸ್ಕಾರ ಅಲ್ಲಿ ಮಾಡಲಾಗಿದೆ. ಆದರೆ, ಶುಕ್ರವಾರ ಮತ್ತೆ ವಿವಾದಿತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದೇವೆ’ ಎಂದು ಸೈದಾಪುರ ಪಿಎಸ್‌ಐ ಎನ್‌.ವೈ.ಗುಂಡೂರಾವ್ಪ್ರತಿಕ್ರಿಯಿಸಿದರು.

‘ಖಬರಸ್ತಾನಕ್ಕಾಗಿ ಬೇರೆಡೆ ಸ್ಥಳ ಒದಗಿಸಿ ಕೊಡಲಾಗುವುದು’ ಎಂದು ಗುರುಮಠಕಲ್‌ ತಹಶೀಲ್ದಾರ್‌ಶ್ರೀಧರ್ ಆಚಾರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.