ADVERTISEMENT

ಸೈದಾಪುರ: ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ತಲುಪದ ನೋಟ್‌ಪುಸ್ತಕ, ಸಮವಸ್ತ್ರ

ಮಲ್ಲಿಕಾರ್ಜುನ ಅರಿಕೇರಕರ್
Published 29 ಆಗಸ್ಟ್ 2023, 6:42 IST
Last Updated 29 ಆಗಸ್ಟ್ 2023, 6:42 IST
ಸೈದಾಪುರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ವಸತಿ ನಿಲಯದ ಹೊರನೋಟ
ಸೈದಾಪುರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ವಸತಿ ನಿಲಯದ ಹೊರನೋಟ   

ಸೈದಾಪುರ: 2023–24ನೇ ಸಾಲಿನ ಶಾಲೆಗಳು ಪ್ರಾರಂಭಗೊಂಡು ಮೂರು ತಿಂಗಳು ಕಳೆಯುತ್ತ ಬಂದರೂ ಸರ್ಕಾರ ವಸತಿನಿಲಯದ ಮಕ್ಕಳಿಗೆ ಅಗತ್ಯ ಪರಿಕರಗಳಾದ ನೋಟ್ ಪುಸ್ತಕ, ಸಮವಸ್ತ್ರ ಸೇರಿದಂತೆ ಇತರೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿಲ್ಲ.

ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಮತ್ತು ಬಾಲಕರ ಹಾಗೂ ಹಿಂದುಳಿದ ವರ್ಗ ವಸತಿ ನಿಲಯಗಳು, ಅದೇ ರೀತಿ ಕಡೇಚೂರು, ಬಳಿಚಕ್ರ, ಲಿಂಗೇರಿ, ಮಾಧ್ವಾರ, ಮಲ್ಹಾರ ಗ್ರಾಮಗಳಲ್ಲಿನ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಅಗತ್ಯ ಸಾಮಗ್ರಿ ನೀಡದ ಕಾರಣ ಶೈಕ್ಷಣಿಕ ಚಟುವಟಿಕೆ ಹಿನ್ನಡೆಯಾಗಿದೆ.

ಮೊದಲನೇ ಅವಧಿಯ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ನಿತ್ಯ ಮಕ್ಕಳ ವಿದ್ಯಾಭ್ಯಸಕ್ಕೆ ಅಗತ್ಯವಾಗಿ ಬೇಕಾಗುವ ಸ್ಟೇಷನರಿ ವಸ್ತುಗಳನ್ನು ಇಲ್ಲಿಯವರೆಗೂ ವಿತರಿಸಿಲ್ಲ. ಇದರಿಂದ ಶಾಲೆಯಲ್ಲಿ ಶಿಕ್ಷಕರು ಪಾಠ ಬೋಧನೆ ಸಮಯದಲ್ಲಿ ಹೇಳಿದ ಮಾಹಿತಿಯನ್ನು ಹೇಗೆ ಬರೆದಿಟ್ಟುಕೊಳ್ಳುವುದು ಎಂಬುದು ತಿಳಿಯದಂತಾಗಿದೆ. ಅಲ್ಲದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ಸಿದ್ಧತೆಗಾಗಿ ಪ್ರತಿಯೊಂದನ್ನು ಬರೆದುಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ನೋಟ್‌ಬುಕ್‌ ವಿತರಿಸದ ಕಾರಣ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.

ADVERTISEMENT

ಅಲ್ಲದೇ ನಿತ್ಯ ಸಮವಸ್ತ್ರವಿಲ್ಲದೆ ಶಾಲೆಗೆ ಹೋಗಲು ಮುಜುಗರ ಉಂಟಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಶಾಲಾಉಡುಪು ಧರಿಸಿ ತರಗತಿಗೆ ಹಾಜರಾಗುತ್ತಾರೆ. ಆದರೆ ಹಾಸ್ಟೆಲ್‍ನಲ್ಲಿರುವ ನಾವುಗಳು ಸಮವಸ್ತ್ರವಿಲ್ಲದೆ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಹೋಗುತ್ತಿರುವುದರಿಂದ ಪ್ರತ್ಯೇಕವಾಗಿ ಕಾಣುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಸದಾಶಿವರೆಡ್ಡಿಗೌಡ ಕೊಂಡಾಪುರ ಶಿಕ್ಷಣ ಪ್ರೇಮಿ
ಪ್ರೇಮಸಿಂಗ್ ರಾಠೋಡ ಸೈದಾಪುರ ಪಾಲಕರು
ವಸತಿನಿಲಯದಲ್ಲಿರುವ ಬಡಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಶೈಕ್ಷಣಿಕ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಸದಾಶಿವರೆಡ್ಡಿಗೌಡ ಕೊಂಡಾಪುರ ಶಿಕ್ಷಣ ಪ್ರೇಮಿ
ಬಡಮಕ್ಕಳ ಕಲಿಕೆಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಸರ್ಕಾರ ವಸತಿನಿಲಯಗಳ ಮೂಲಕ ಒದಗಿಸುತ್ತದೆ ಎಂದು ಮಕ್ಕಳನ್ನು ಸೇರಿಸಿದ್ದೇವೆ. ಆದರೆ ಪರೀಕ್ಷೆ ಸಮೀಪಿಸಿದರೂ ಇನ್ನೂ ವಿತರಿಸಿಲ್ಲ.
ಪ್ರೇಮಸಿಂಗ್ ರಾಠೋಡ ಸೈದಾಪುರ ಪಾಲಕರು
ಮೂರು ತಿಂಗಳಾದರೂ ಸಮವಸ್ತ್ರ ನೋಟ್‍ಪುಸ್ತಕಗಳನ್ನು ನೀಡಿಲ್ಲ. ಇದರಿಂದ ತರಗತಿಯಲ್ಲಿ ಶಿಕ್ಷಕರು ಹೇಳುವ ಪಾಠದ ಪ್ರೆಶ್ನೋತ್ತರಗಳನ್ನು ಬರೆದುಕೊಳ್ಳಲು ಆಗುತ್ತಿಲ್ಲ.
ಲಕ್ಷ್ಮಿ ಹತ್ತನೇ ತರಗತಿ ವಿದ್ಯಾರ್ಥಿನಿ
ಸ್ಟೇಷನರಿ ವಸ್ತುಗಳಿಗೆ ಎಂಎಸ್‌ಐಎಲ್ ಮೈಸೂರು ಸಂಸ್ಥೆಗೆ ಹಾಗೂ ಸಮವಸ್ತ್ರಗಳಿಗೆ ಕೆಎಚ್‌ಡಿಎಲ್ ಬೆಂಗಳೂರು ಅವರಿಗೆ ಮಕ್ಕಳ ದಾಖಲಾತಿ ಪ್ರಕಾರ ಬೇಡಿಕೆ ಸಲ್ಲಿಸಿದ್ದೇವೆ. ಈ ವಾರದಲ್ಲಿ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಬಂದ ತಕ್ಷಣ ವಿದ್ಯಾರ್ಥಿಗಳಿಗೆ ಕೊಡುತ್ತೇವೆ.
ಗಂಗಾಧರ ದೊಡ್ಡಮನಿ ಉಪನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಾದಗಿರಿ
ಶೂ ಕಿಟ್ ತಡವಾಗಿ ವಿತರಣೆ
ವಿದ್ಯಾರ್ಥಿಗಳಿಗೆ ಬೇಕಾದ ದೈನಂದಿನ ಸಾಮಗ್ರಿಗಳಾದ ಶೂ ಸಾಬೂನು ಕೊಬ್ಬರಿಎಣ್ಣೆ ಟೂತ್‍ಪೇಸ್ಟ್‌ ಸೇರಿದಂತೆ ಇತರೆ ವಸ್ತುಗಳನ್ನು ಕಳೆದ ಎರಡು ಮೂರು ದಿನಗಳ ಅಂತರದಲ್ಲಿ ವಿತರಿಸಲಾಗಿದೆ. ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಉಳಿಯಲು ಹಿಂಜರಿಯುತ್ತಾರೆ ಎಂದು ಪಾಲಕರು ಮತ್ತು ಶಿಕ್ಷಣಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.