
ಯಾದಗಿರಿ: ಸಾವಿರಾರು ಕಿ.ಮೀ ಬೈಕ್‌ನಲ್ಲಿ ಓಡಾಡಿ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ತೆರಳುತ್ತಿದ್ದವರನ್ನು ಗುರಿಯಾಗಿಸಿಕೊಂಡು ಹಣ ಕದಿಯುತ್ತಿದ್ದ ಜಾಲವನ್ನು ಯಾದಗಿರಿ ನಗರ ಠಾಣೆಯ ಪೊಲೀಸರು ಭೇದಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾದ ಸಂದೀಪ್ ವೆಂಕಟೇಶ (19) ಹಾಗೂ ಶಂಕರ್ ಲಕ್ಷ್ಮಣ (39) ಬಂಧಿತ ಆರೋಪಿಗಳು. ಸುಮಾರು 16 ಮಂದಿ ಇರುವ ಆರೋಪಿಗಳ ಗುಂಪು ರಾಜ್ಯದ ಅನ್ಯ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿಯೂ ಕಳ್ಳತನದ ಕೃತ್ಯಗಳು ಎಸಗಿದ್ದು ವಿಚಾರಣೆಯಿಂದ ಗೊತ್ತಾಗಿದೆ.
ಬಂಧಿತ ಆರೋಪಿಗಳಿಂದ ₹8.20 ಲಕ್ಷನಗದು, ₹4.35 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಚಕ್ರ ಮೂಲದ ಶರಣಪ್ಪ ಹೊನ್ನಪ್ಪ ಅವರ ಕಾರಿನಲ್ಲಿ ಇರಿಸಿದ್ದ ₹9.50 ಲಕ್ಷ ನಗದು ಹಾಗೂ 29 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಕೃತ್ಯ ನಡೆದ ಸ್ಥಳ ಹಾಗೂ ಪ್ರಮುಖ ವೃತ್ತಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಳ್ಳತನ ಹಾಗೂ ಪರಾರಿ ಆಗುತ್ತಿದ್ದ ದೃಶ್ಯಗಳನ್ನು ಆಧಾರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿವೆ.
ಭದ್ರಾವತಿಯಲ್ಲಿ ಒಂದೇ ಕಡೆಯಲ್ಲಿ 16 ಮಂದಿ ವಾಸವಾಗಿದ್ದು, ಬ್ಯಾಂಕ್ ಎಟಿಎಂ ಕೇಂದ್ರಗಳಿಂದ ಹೆಚ್ಚಿನ ಹಣ ಡ್ರಾ ಮಾಡಿಕೊಂಡು ಹೋಗುವವರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಹಣವನ್ನು ಕಸಿದುಕೊಂಡು ಹೋಗದೆ, ಮೈಮರೆತಿದ್ದಾಗ ಹಣವನ್ನು ಎಗರಿಸಿ ಪರಾರಿ ಆಗುತ್ತಿದ್ದರು. ಎರಡ್ಮೂರು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು, ಮೊದಲ ಬಾರಿಗೆ ಯಾದಗಿರಿಯಲ್ಲಿ ಸಿಕ್ಕು ಬಿದ್ದಿದ್ದಾರೆ. ಬೇರೆ ಕಡೆಗಳಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದು, ಅನ್ಯ ಠಾಣೆಯ ಅಧಿಕಾರಿಗಳು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿವೆ.
ಡಿವೈಎಸ್‌ಪಿ ಸುರೇಶ್ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುನಿಲ್ ವಿ.ಮೂಲಿಮನಿ, ಪಿಎಸ್‌ಐ ಮಂಜನಗೌಡ, ಪಿಐ ರಮೇಶ, ಎಆರ್‌ಎಸ್‌ಐ ಸುರೇಶ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಮೋನಪ್ಪ, ವಿಷ್ಣು, ಸೈದಪ್ಪ, ಕಾನ್‌ಸ್ಟೆಬಲ್‌ಗಳಾದ ದಾವಲ್‌ಸಾಬ್, ಸಂಗನಗೌಡ, ಗೋವಿಂದ, ವೆಂಕಟೇಶ, ಗುಂಡಮ್ಮ, ಸುಮಾ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಬ್ಯಾಂಕ್ ಎಟಿಎಂಗಳಿಂದ ಹಣ ಡ್ರಾ ಮಾಡಿಕೊಂಡವರು ಜಾಗೃತರಾಗಿ ನೇರವಾಗಿ ಮನೆ ಕಚೇರಿಗೆ ಹೋಗಬೇಕುಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಬೈಕ್‌ನಲ್ಲಿ 3000 ಕಿ.ಮೀ. ಪ್ರಯಾಣಿಸಿ ಕಳ್ಳತನ’
‘ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮಧ್ಯಪ್ರದೇಶ ಭಾಗದಲ್ಲಿ 2500 ಕಿ.ಮೀ.ನಿಂದ 3000 ಕಿ.ಮೀ. ಬೈಕ್‌ನಲ್ಲಿ ತೆರಳಿ ಕಳ್ಳತನ ಮಾಡಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ. ‘ಕೃತ್ಯ ಎಸಗುವ ಮುನ್ನ ಮೂರ್ನಾಲ್ಕ ಜನರ ತಂಡ ಎಟಿಎಂ ಬ್ಯಾಂಕ್‌ಗಳಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವವರ ಮೇಲೆ ನಿಗಾ ಇರಿಸುತ್ತಿತ್ತು. ಒಬ್ಬ ಗ್ರಾಹಕರ ಸೋಗಿನಲ್ಲಿ ಬ್ಯಾಂಕ್ ಎಟಿಎಂ ಒಳಗಿದ್ದು ಯಾರೆಲ್ಲ ದುಡ್ಡು ಡ್ರಾ ಮಾಡಿಕೊಂಡಿದ್ದಾರೆ ಎಂಬುದನ್ನು ಗುರುತಿಸಿ ಹೊರಗಿದ್ದವರಿಗೆ ತಿಳಿಸುತ್ತಿದ್ದ. ಹಣ ಇದ್ದವನನ್ನು ಹಿಂಬಾಲಿಸಿ ಮಾರ್ಗ ಮಧ್ಯದಲ್ಲಿ ಆತ ಮೈಮರೆತಿದ್ದ ಗಳಿಗೆಯಲ್ಲಿ ಕಾರಿನ ಗ್ಲಾಸ್ ಒಡೆದು ಇಲ್ಲವೆ ಗಮನವನ್ನು ಬೇರೆಡೆ ಸೆಳೆದು ಹಣವನ್ನು ಕದ್ದೊಯ್ಯುತ್ತಿದ್ದರು’ ಎಂದು ಕೃತ್ಯದ ವಿಧಾನ ತಿಳಿಸಿದರು. ‘ಕದ್ದ ಹಣದಲ್ಲಿ ಐಷರಾಮಿ ಜೀವನ ಮಾಡುತ್ತಿದ್ದು ಮನೆಗೆ ಹೋಗದೆ ಹೋಟೆಲ್ ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ನಕಲಿ ಆಧಾರ್ ಕಾರ್ಡ್ ತೊರಿಸಿ ರಾಂಗ್ ಮೊಬೈಲ್ ನಂಬರ್ ಕೊಡುತ್ತಿದ್ದರು. ಕೃತ್ಯ ಎಸಗುವ ವೇಳೆ ಮೊಬೈಲ್ ಬಳಸುವುದಿಲ್ಲ. ಕೀ ಪ್ಯಾಡ್ ಮೊಬೈಲ್ ಬಳಸುತ್ತಿದ್ದು ತಮ್ಮ ನಡುವಿನ ಸಂವಹನಕ್ಕೆ ಪ್ರತ್ಯೇಕ ಸಿಮ್ ಕಾರ್ಡ್ ಉಪಯೋಗಿಸಿ ಬಳಿಕ ಜೇಬಿನಲ್ಲಿ ಇರಿಸಿಕೊಳ್ಳುತ್ತಿದ್ದರು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.