ADVERTISEMENT

ಯಾದಗಿರಿ | ಮಳೆ–ಬಿಸಿಲು ಜುಗಲ್‌ಬಂದಿ

ಬೆಳಿಗ್ಗೆ ಜೋರು ಮಳೆ, ಮಧ್ಯಾಹ್ನ ಜಿಟಿಜಿಟಿ ಹನಿ, ಸಂಜೆ ಬಿಸಿಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:50 IST
Last Updated 25 ಅಕ್ಟೋಬರ್ 2025, 4:50 IST
ಯಾದಗಿರಿ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಕೊಡೆ ಹಿಡಿದು ಸಾಗಿದ ಮಹಿಳೆಯರು
ಯಾದಗಿರಿ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಕೊಡೆ ಹಿಡಿದು ಸಾಗಿದ ಮಹಿಳೆಯರು   

ಯಾದಗಿರಿ: ಮೋಡ ಮುಸುಕಿದ ವಾತಾವರಣದೊಂದಿಗೆ ಬೆಳಿಗ್ಗೆ ಜೋರಾಗಿ ಆರ್ಭಟಿಸಿದ ಮಳೆ, ಮಧ್ಯಾಹ್ನ ಜಿಟಿಜಿಟಿ ಮಳೆ ಹನಿಗಳ ಜಿನುಗು, ಸಂಜೆ ಆಗುತ್ತಲೇ ತಂಪಾದ ಬಿಸಿಲು...

ಯಾದಗಿರಿ ಜಿಲ್ಲೆಯು ಮಳೆಯಿಂದಾಗಿ ಶುಕ್ರವಾರ ಈ ಮೂರು ದೃಶ್ಯಗಳಿಗೆ ಸಾಕ್ಷಿಯಾಯಿತು.

ತಡರಾತ್ರಿ ಕೆಲ ಹೊತ್ತು ಸುರಿದ ಮಳೆ ಬಿಡುವು ಕೊಟ್ಟಿತ್ತು. ಬೆಳಿಗ್ಗೆ 9.30ರ ಸುಮಾರಿಗೆ ದಟ್ಟ ಮೋಡ ಕವಿದ ವಾತಾವರಣದೊಂದಿಗೆ ಅಬ್ಬರದ ಮಳೆ ಆರಂಭವಾಯಿತು. ಕೆಲ ಗಂಟೆ ಬಳಿಕ ಸೋನೆ ಮಳೆಯ ಸಿಂಚನವಾಯಿತು. ಇದು ಸುಮಾರು ಮಧ್ಯಾಹ್ನ 2.30ರ ವರೆಗೆ ಮುಂದುವರೆಯಿತು. ಸಂಜೆ ಸೂರ್ಯನ ದರ್ಶನದೊಂದಿಗೆ ತಂಪಾದ ಬಿಸಿಲು ಆವರಿಸಿಕೊಂಡಿತು.

ADVERTISEMENT

ಭರ್ಜರಿಯಾಗಿ ಸುರಿದ ಮಳೆಗೆ ನಗರದ ರಸ್ತೆಗಳಲ್ಲಿ ನೀರು ಹರಿಯಿತು. ಗುಂಡಿಗಳಿಂದ ಆವೃತ್ತವಾಗಿರುವ ಮಹಾತ್ಮ ಗಾಂಧಿ ವೃತ್ತದ ರಸ್ತೆಗಳು ಕೆಸರು ಗದ್ದೆಯಂತೆ ಆದವು. ಗಾಂಧಿ ಪ್ರತಿಮೆ ಕಟ್ಟೆಯ ಸುತ್ತಲೂ ಮಳೆಯ ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು.

ಮೈಲಾಪುರ ಅಗಸಿ– ಗಂಜ್ ಸರ್ಕಲ್ ನಡುವಿನ ರಸ್ತೆ ಕಾಮಗಾರಿ, ಶಿವಾಜಿ ವೃತ್ತದ ರಸ್ತೆಯ ವಿಭಜಕ ನಿರ್ಮಾಣ ಕಾಮಗಾರಿಯು ಮಳೆಯಿಂದಾಗಿ ದಿನದ ಕೆಲಸ ಸ್ಥಗಿತಗೊಂಡಿತ್ತು.

ಉಳಿದಂತೆ ಹೊಸ ಬಸ್‌ ನಿಲ್ದಾಣ, ಚಕ್ರಕಟ್ಟಾ, ರೈಲ್ವೆ ಸ್ಟೇಷನ್ ಏರಿಯಾ, ಚಿತ್ತಾಪುರ ರಸ್ತೆ, ಹಳೆ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್‌, ಲಕ್ಷ್ಮಿ ನಗರ, ಕೋಳಿವಾಡ, ಗಂಜ್‌ ಪ್ರದೇಶ, ರಾಜೀವ ಗಾಂಧಿ ನಗರ ಸೇರಿ ಹಲವೆಡೆಯ ರಸ್ತೆಗಳಲ್ಲಿ ಮಳೆಯ ನೀರು ಹರಿದಾಡಿತು.

ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದ ವರ್ತಕರ ದಿನದ ವಹಿವಾಟಿಗೂ ಮಳೆಯು ಕೆಲ ಹೊತ್ತು ಅಡ್ಡಿಪಡಿಸಿತ್ತು. ಎಪಿಎಂಸಿ ಆವರಣವೂ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿನ ವ್ಯಾಪಾರವೂ ಮಂಕಾಗಿತ್ತು. ಜಿಟಿಜಿಟಿ ಮಳೆಯಿಂದಾಗಿ ಜನರು ಸಂಜೆ ವರೆಗೆ ಮನೆಯಿಂದ ಕಾಲಿಡಲು ಹಿಂಜರಿದರು. ನೌಕರರಸ್ಥರು ಮಳೆಯಲ್ಲಿ ಆಸರೆ ಮಾಡಿಕೊಂಡು ದಿನದ ಕೆಲಸ ಕಾರ್ಯಗಳಿಗೆ ಹಾಜರಾಗಿದ್ದು ಕಂಡುಬಂತು.

ಯಾದಗಿರಿ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಸಾಗಿದ ದ್ವಿಚಕ್ರ ವಾಹನ ಸವಾರರು
ಯಾದಗಿರಿ ಸಮೀಪದ ಗದ್ದೆಯೊಂದರಲ್ಲಿ ಮಳೆಯಿಂದಾಗಿ ನೆಲ ಕಚ್ಚಿದ ಭತ್ತದ ಬೆಳೆ

ಕಡೇಚೂರನಲ್ಲಿ ಅತ್ಯಧಿಕ ಮಳೆ

ಜಿಲ್ಲೆಯಲ್ಲಿ ಯಾದಗಿರಿ ತಾಲ್ಲೂಕಿನ ಕಡೇಚೂರನಲ್ಲಿ ಅತ್ಯಧಿಕ 34.5 ಮಿ.ಮೀ. ಮಳೆಯಾಗಿದೆ. ಗುರುಮಠಕಲ್‌ ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ 25 ಮಿ.ಮೀ. ಮಳೆ ಬಿದ್ದಿದೆ. ಶಹಾಪುರ ತಾಲ್ಲೂಕಿನ ತಡಿಬಿಡಿಯಲ್ಲಿ 6 ಮಿ.ಮೀ. ಹೊಸಕೆರೆಯಲ್ಲಿ 3 ಸುರಪುರ ತಾಲ್ಲೂಕಿನ ಯಕ್ತಾಪುರದಲ್ಲಿ 2 ಮಿ.ಮೀ. ಯಾದಗಿರಿ ತಾಲ್ಲೂಕಿನ ಮಲ್ಹಾರ್ 22.5 ಕಿಲ್ಲನಕೇರಾ 14.5 ಗುರುಮಠಕಲ್‌ ಪಟ್ಟಣದಲ್ಲಿ 23  ತಾಲ್ಲೂಕಿನ ಚಂಡ್ರಕಿಯಲ್ಲಿ 17 ವಡಗೇರಾ ತಾಲ್ಲೂಕಿನ ಬಿಳ್ಹಾರದಲ್ಲಿ 13.5 ಉಳ್ಳೆಸೂಗುರದಲ್ಲಿ 8.5 ಕುರಕುಂದಾದಲ್ಲಿ 3.4 ಮತ್ತು ಹುಣಸಗಿ ತಾಲ್ಲೂಕಿನ ಅರಕೇರಾ (ಜೆ)11.5 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ.

ನೆಲ ಕಚ್ಚಿದ ಭತ್ತದ ತೆನೆಗಳು

ಹುಳು ರೋಗಬಾಧೆ ನೆರೆ ಭೀತಿಯ ನಡುವೆ ಬೆಳೆಯನ್ನು ಉಳಿಸಿಕೊಂಡು ಕಟಾವಿನ ಹಂತಕ್ಕೆ ತಂದಿರುವ ಬೆಳೆಗಾರರಿಗೆ ಮಳೆಯು ಮತ್ತೊಂದು ಸಂಕಷ್ಟಕ್ಕೆ ನೂಕಿದೆ. ಮಳೆಗೆ ಸಿಲುಕಿದ ಭತ್ತದ ತೆನೆಗಳು ನೆಲಕಚ್ಚಿವೆ. ಬಹುತೇಕ ಗದ್ದೆಗಳಲ್ಲಿ ಭತ್ತರ ಕಟಾವಿನ ಸಮಯ ಬಂದಿದೆ. ಆದರೆ ಗಾಳಿ ಮಳೆಯ ರಭಸಕ್ಕೆ ಕಟಾವಿನಂಚಿನಲ್ಲಿರುವ ತೆನೆಗಳು ನೆಲಕಚ್ಚಿವೆ. ಭತ್ತ ಬಲಿತಿರುವ ಕಾರಣ ನೀರಲ್ಲಿ ನೆನೆದರೆ ಮೊಳಕೆ ಬರುವ ಸಾಧ್ಯತೆ ಇದೆ. ಜೊತೆಗೆ ಕೆಸರಿನಲ್ಲಿ ಮುಳುಗಿದ್ದ ಭತ್ತದ ಹುಲ್ಲನ್ನು ಯಂತ್ರದ ಸಹಾಯದಿಂದ ಕಟಾವು ಮಾಡುವುದು ಬಲು ಕಷ್ಟ ಎಂದು ಬೆಳೆಗಾರರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.