ADVERTISEMENT

ಯಾದಗಿರಿ | ವಸತಿ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ: ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:52 IST
Last Updated 9 ಜನವರಿ 2026, 5:52 IST
ಯಾದಗಿರಿಯಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರಿಗೆ ಸಲ್ಲಿಸಿದರು 
ಯಾದಗಿರಿಯಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರಿಗೆ ಸಲ್ಲಿಸಿದರು    

ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳ ಮನೆ ಹಂಚಿಕೆಯ ಅವ್ಯವಹಾರಗಳಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ವಡಗೇರಾ ತಾಲ್ಲೂಕಿನ ಗುರುಸುಣಿಗಿ ಕ್ರಾಸ್ ಸಮೀಪ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಯಿಂದಾಗಿ ಯಾದಗಿರಿ– ಶಹಾಪುರ ನಡುವಿನ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.

ಟಿ.ವಡಗೇರಾ ಸೇರಿದಂತೆ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿಗಳ ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ. ವಸತಿ ರಹಿತ ಅರ್ಹರಿಗೆ ಮನೆಗಳನ್ನು ಕೊಡುವ ಬದಲು ಯೋಗ್ಯವಲ್ಲದ ರೀತಿಯಲ್ಲಿ ಹಂಚಿಕೆ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ಲಪಟಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ವಸತಿ ಯೋಜನೆಗಳ ಅವ್ಯವಹಾರ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ, ತಹಶೀಲ್ದಾರ್‌ಗೆ ಮನವಿ ಮಾಡಿ, ಪ್ರತಿಭಟನೆ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಅವ್ಯವಹಾರದ ಬಗ್ಗೆ ಸಾಕಷ್ಟು ದಾಖಲಾತಿಗಳನ್ನು ನೀಡಿದರೂ ಯಾವ ಕಾಣದ ಕೈಗಳು ತಪ್ಪಿತಸ್ಥರನ್ನು ರಕ್ಷಣೆ ಮಾಡುತ್ತಿವೆ ಎಂದು ಪ್ರಶ್ನಿಸಿದರು.

ಅರ್ಹ ಫಲಾನುಭವಿಗಳಿಗೆ ಲಂಚ ಪಡೆಯದೆ ಮನೆಗಳನ್ನು ನಿರ್ಮಿಸಿಕೊಡಬೇಕು. ಅವ್ಯವಹಾರಗಳಿಗೆ ಕಾರಣರಾದ ಪಿಡಿಒ, ಬಿಲ್ ಕಲೆಕ್ಟರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾ ಮಾಡಬೇಕು. ಜೊತೆಗೆ ಕ್ರಿಮಿನಲ್ ಪ್ರಕರಣವೂ ದಾಖಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಯೊಂದು ಗ್ರಾಮದಲ್ಲಿ ಚರಂಡಿ ನೀರು ಸರಿಯಾಗಿ ಹರಿದು ಹೋಗದೆ ನಿಂತಲ್ಲಿ ನಿಂತು ಗಬ್ಬು ನಾರುತ್ತಿದೆ. ಸೊಳ್ಳೆಗಳ ಕಾಟದಿಂದ ಜನ, ಜಾನುವಾರುಗಳಿಗೆ ರೋಗ ಹಬ್ಬಿ ನರಳುವುದನ್ನು ತಪ್ಪಿಸಬೇಕು. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರಿಗೆ ಮುಖಂಡರು ಸಲ್ಲಿಸಿದರು. 

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ, ಜಿಲ್ಲಾ ಅಧ್ಯಕ್ಷ ಶರಣು ವಿ. ಮಂದರವಾಡ, ಮಲ್ಕಣ್ಣ ಎಸ್.ಚಿಂತಿ, ಪ್ರಭಾಕರ ರೆಡ್ಡಿ ಕೊಂಗಂಡಿ, ಭೀಮಣ್ಣ ನಾಯಕ, ಮಲ್ಲಣ್ಣ ನೀಲಹಳ್ಳಿ, ಭೀಮರಾಯ ಎಲ್ಹೇರಿ, ಬಾಲಾಜಿ ಟಿ. ವಡಗೇರಾ, ಫಕೀರ್ ಅಹಮದ್ ಮರಡಿ, ಭೀಮರಾಯ ಹಾಲಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿ– ಶಹಾಪುರ ರಸ್ತೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯ ಪ್ರತಿಭಟನೆಯಿಂದಾಗಿ ಸಾಲುಗಟ್ಟಿ ನಿಂತ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.