ಯಾದಗಿರಿ: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಮಾಹಿತಿಯನ್ನು ಕೋರಿ ಅರ್ಜಿ ಸಲ್ಲಿಸಿದವರ ಬಗ್ಗೆ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ನೋಡಿ, ಅವರಿಗೆ ಮಾಹಿತಿ ಕೊಡಲು ಸತಾಯಿಸಬಾರದು’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಆರ್‌ಟಿಐ ಕುರಿತು ಸಂವಾದ, ಚರ್ಚೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಸಾರ್ವಜನಿಕ ಹಿತಾಸಕ್ತಿಯನ್ನು ಇರಿಸಿಕೊಂಡೇ ಆರ್‌ಟಿಐ ಕಾಯ್ದೆ ಜಾರಿಗೆ ತರಲಾಗಿದ್ದು, 20 ವರ್ಷಗಳನ್ನು ಸಹ ಪೂರೈಸುತ್ತಿದೆ. ಇದರಿಂದ ಸಾಕಷ್ಟು ಬದಲಾವಣೆಯೂ ಆಗಿದೆ. ಹೀಗಾಗಿ, ಅಧಿಕಾರಿಗಳು ಅರ್ಜಿದಾರ ಉದ್ದೇಶವನ್ನು ನೋಡದೆ ಮಾಹಿತಿ ಕೊಡಬೇಕು. ಅಡ್ಡದಾರಿಗೆ ಇಳಿಯಬಾರದು’ ಎಂದರು.
‘ಅಧಿಕಾರಿಗಳು ತಪ್ಪು ಮಾಡದೆ ಇದ್ದರೆ ಮಾಹಿತಿ ಕೊಡಲು ಏಕೆ ಹೆದರಿಕೊಳ್ಳಬೇಕು? ಇದರಲ್ಲಿ ಬ್ಲಾಕ್‌ಮೇಲ್ ಮಾಡುವ ಪ್ರಶ್ನೆಯೇ ಇಲ್ಲ. ನೈಜ ಅರ್ಜಿದಾರನಿಗೆ ಸಕಾಲಕ್ಕೆ ಮಾಹಿತಿ ಸಿಗಬೇಕು. ಆರ್‌ಟಿಐ ಕಾಯ್ದೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ಜನಸ್ನೇಹಿಯೂ ಆಗಬೇಕು. ಇದಕ್ಕೆ ನಾಗರಿಕರೂ ಸಹಕಾರ ಕೊಡಬೇಕು. ಅಧಿಕಾರಿಗಳು ಮತ್ತು ಅರ್ಜಿದಾರರು ಜತೆಯಾಗಿ ಸಾಗುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.
ಮತ್ತೊಬ್ಬ ಆಯುಕ್ತ ಡಾ. ಹರೀಶ್ ಕುಮಾರ್ ಮಾತನಾಡಿ, ‘ಆಯೋಗವು ಎಂಟು ತಿಂಗಳ ಅವಧಿಯಲ್ಲಿ ಸುಮಾರು 15 ಸಾವಿರ ಪ್ರಕರಣಗಳ ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಪ್ರಸ್ತುತ 40,040 ಅರ್ಜಿಗಳ ವಿಚಾರಣೆಗೆ ಬಾಕಿ ಇದೆ. ನಿತ್ಯ ಸುಮಾರು 2,500 ಅರ್ಜಿಗಳು ಬರುತ್ತಿವೆ. ಅರ್ಜಿದಾರರನಿಗೆ ಎರಡು ಹಂತಗಳಲ್ಲಿ ತಾನು ಕೇಳಿದ ಮಾಹಿತಿ ಸಿಗದೆ ಇದ್ದಾಗ ಆಯೋಗಕ್ಕೆ ಲಿಖಿತವಾಗಿ ದೂರು ನೀಡಬಹುದು’ ಎಂದರು.
‘ಆಯೋಗದಲ್ಲಿ ವಿಚಾರಣೆ ನಡೆಸಿ, ಮಾಹಿತಿ ನೀಡುವಲ್ಲಿ ತಪ್ಪು ಮಾಡಿದ್ದು ಸಾಬೀತಾದರೆ ಅಧಿಕಾರಿಗಳಿಂದ ₹ 25 ಸಾವಿರದಿಂದ ₹ 1 ಲಕ್ಷದ ವರೆಗೆ ದಂಡ ಕೊಡಿಸಿದ ಉದಾಹರಣೆಗಳಿವೆ. ಕಾಲಕಾಲಕ್ಕೆ ಜನರು ಜಾಗೃತರಾಗಿ ಸಾರ್ವಜನಿಕ ಹಿತಾಸಕ್ತಿಗಾಗಿ ಇರುವ ಕಾಯ್ದೆಗಳ ಬಗ್ಗೆ ಅರಿತು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಆರ್‌ಟಿಐ ಕಾಯ್ಕೆಯ ಕುರಿತು ಆಗಾಗ ಆಯೋಗವು ಜಿಲ್ಲಾ ಮಟ್ಟದಲ್ಲಿ ಅಧಿಕಾರಿ, ಸಾರ್ವಜನಿಕರೊಂದಿಗೆ ಸಂವಾದಗಳನ್ನು ಏರ್ಪಡಿಸುವ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಗೂ ಸಹ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ, ತ್ವರಿತವಾಗಿ ಇತ್ಯರ್ಥ ಮಾಡುವಂತೆ ಸೂಚನೆ ಕೊಡಲಾಗಿದೆ’ ಎಂದರು.
ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಒಂದು ವಾರದಲ್ಲಿ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಕಾಯಂ ಆಯುಕ್ತರ ನೇಮಕವಾಗಲಿದ್ದು ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ
-ಬದ್ರುದ್ದೀನ್ ಕೆ. ರಾಜ್ಯ ಮಾಹಿತಿ ಆಯುಕ್ತ
‘ಜಿಲ್ಲೆಯಲ್ಲಿ 723 ಪ್ರಕರಣ ಬಾಕಿ: ಗ್ರಾಮೀಣಾಭಿವೃದ್ಧಿಯದ್ದೇ ಹೆಚ್ಚು’
‘ಜಿಲ್ಲೆಯಲ್ಲಿ 723 ಪ್ರಕರಣಗಳ ಅರ್ಜಿಗಳ ಬಾಕಿ ಇದ್ದು ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯದ್ದೇ ಅತ್ಯಧಿಕ 280 ಅರ್ಜಿಗಳು ಉಳಿಸಿಕೊಂಡಿವೆ’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ತಿಳಿಸಿದರು. ‘ಗ್ರಾಮೀಣ ಭಾಗದಲ್ಲಿ ಜಾಗೃತರಾದ ಜನರು ತಮ್ಮ ಪಂಚಾಯಿತಿಗಳಲ್ಲಿನ ಆಗು–ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಉತ್ಸಾಹಕರಾಗಿದ್ದಾರೆ. ಹೀಗಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿದ್ದು ತ್ವರಿತವಾಗಿ ಅವುಗಳ ವಿಲೇವಾರಿ ಮಾಡಬೇಕು’ ಎಂದರು. ‘ಕಂದಾಯ ಇಲಾಖೆಯಲ್ಲಿ 77 ನಗರಾಭಿವೃದ್ಧಿ ಇಲಾಖೆಯಲ್ಲಿ 65 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 51 ಜಲಸಂಪನ್ಮೂಲ ಇಲಾಖೆಯಲ್ಲಿ 49 ಸಮಾಜ ಕಲ್ಯಾಣ ಇಲಾಖೆಯಲ್ಲಿ 46 ಪಿಡಬ್ಲ್ಯುಡಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ 35 ಅರಣ್ಯ ಪರಿಸರ ಇಲಾಖೆಯಲ್ಲಿ 32 ಮೊದಲಾದ ಇಲಾಖೆಗಳು ಸೇರಿ ಒಟ್ಟು 723 ಅರ್ಜಿಗಳನ್ನು ಇತ್ಯರ್ಥ ಮಾಡಬೇಕಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.