ಯಾದಗಿರಿ: ಜಿಲ್ಲೆಯಲ್ಲಿ ಕರವಸೂಲಾತಿಗೆ ಹಮ್ಮಿಕೊಂಡಿದ್ದ ಒಂದೇ ದಿನದಲ್ಲಿ ಕೋಟಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆಗಸ್ಟ್ 12ರ ಒಂದೇ ದಿನ ₹ 1.46 ಕೋಟಿ ದಾಖಲೆಯ ತೆರಿಗೆ ಸಂಗ್ರಹವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರಡಿಯಾ ತಿಳಿಸಿದ್ದಾರೆ.
ಕಾಯಕವನ್ನು ಮಾಡುವಾಗ ಮನಸ್ಸು ಶುದ್ಧವಾಗಿರಬೇಕು. ಯಾವುದೇ ದುರುದ್ದೇಶ ಇಲ್ಲದೆ, ಭಕ್ತಿಯಿಂದ ಮಾಡಿದ ಕೆಲಸಕ್ಕೆ ಯಶಸ್ಸು ಸಿಗುವುದು ಖಚಿತ. ನಿಷ್ಠೆ ಮತ್ತು ಭಕ್ತಿಯಿಂದ ಕೆಲಸ ನಿರ್ವಹಿಸಿದ್ದರಿಂದಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳು ಒಂದೇ ದಿನ ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಲು ಜಿ.ಪಂ ಹಾಗೂ ತಾ.ಪಂ. ಅಧಿಕಾರಿಗಳ ಅಧಿಕಾರಿಗಳ ನೇತೃತ್ವದಲ್ಲಿ ಅಭಿಯಾನ ಪ್ರಾರಂಭಿಸಲಾಗಿತ್ತು. ಗ್ರಾಮ ಪಂಚಾಯಿತಿ ಪಿಡಿಒಗಳು, ಕಾರ್ಯದರ್ಶಿಗಳು, ಎನ್ಆರ್‌ಎಲ್ಎಂ ಸಿಬ್ಬಂದಿ, ಗ್ರಂಥಾಲಯ ಮೇಲ್ವಿಚಾರಕರು ಸೇರಿ ಎಲ್ಲರೂ ಮನೆ ಮನೆಗೆ ಭೇಟಿ ನೀಡಿದರು. ಸಾರ್ವಜನಿಕರ ಮನವೊಲಿಸಿ ತೆರಿಗೆ ವಸೂಲಿಯನ್ನು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂದಿದ್ದಾರೆ.
ಆಗಸ್ಟ್ 10ರಂದು ಯಾದಗಿರಿ ಜಿಲ್ಲೆ ರಾಜ್ಯದ ಕರವಸೂಲಾತಿ ಪ್ರಗತಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿತ್ತು. 12ರಂದು ನಡೆದ ಕರವಸೂಲಾತಿ ಅಭಿಯಾನದಿಂದಾಗಿ ರಾಜ್ಯದಲ್ಲಿ 20ನೇ ಸ್ಥಾನಕ್ಕೆ ಬಂದಿದೆ. ಜಿಲ್ಲೆಯಲ್ಲಿ ₹ 18.74 ಕೋಟಿ ಚಾಲ್ತಿ ಬೇಡಿಕೆಯಲ್ಲಿ ಆ.12ರಂದು ಒಟ್ಟು ₹ 4.35 ( ಶೇ 23.22ರಷ್ಟು) ಕೋಟಿ ತೆರಿಗೆ ವಸೂಲಿ ಮಾಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ತೆರಿಗೆ ಪಾವತಿಯಿಂದ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ಅನುಕೂಲವಾಗುತ್ತದೆ. ತೆರಿಗೆ ವಸೂಲಿ ಮಾಡಲು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಾಬಂಧನ ಹಬ್ಬದ ಪ್ರತೀಕವಾಗಿ ರಾಖಿ ಕಟ್ಟಿ, ಸಹೋದರರಿಗೆ ಕಾಣಿಕೆಯಾಗಿ ತೆರಿಗೆ ಪಾವತಿಸುವಂತೆ ಮನವೊಲಿಸಿದ್ದು ವಿಶೇಷವಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.