ADVERTISEMENT

ನಾರಾಯಣಪುರ: ಬಸವಸಾಗರ ಜಲಾಶಯಕ್ಕೆ ಪ್ರವಾಸಿಗರ ದಂಡು

ನಾರಾಯಣಪುರ ಜಲಾಶಯದಿಂದ ನದಿಗೆ 63 ಸಾವಿರ ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 16:31 IST
Last Updated 6 ಆಗಸ್ಟ್ 2023, 16:31 IST
ನಾರಾಯಣಪುರದ ಬಸವಸಾಗರ ವೀಕ್ಷಣೆಗೆ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಮೋಜಿನಲ್ಲಿ ತೊಡಗಿರುವ ನೋಟ
ನಾರಾಯಣಪುರದ ಬಸವಸಾಗರ ವೀಕ್ಷಣೆಗೆ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಮೋಜಿನಲ್ಲಿ ತೊಡಗಿರುವ ನೋಟ   

ನಾರಾಯಣಪುರ: ಆಲಮಟ್ಟಿಯ ಜಲಾಶಯದಿಂದ ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಿದ ಬೆನ್ನಲ್ಲೆ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿ ಪಾತ್ರಕ್ಕೆ ಬಿಡುವ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಬೆನ್ನಲ್ಲೆ ‌ಜಲಾಶಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಆಲಮಟ್ಟಿ ಶಾಸ್ತ್ರಿ ಜಲಾಶಯದಿಂದ ಭಾನುವಾರ ಸಂಜೆ 70 ಸಾವಿರ ಕ್ಯುಸೆಕ್‌ನಷ್ಟು ನೀರು ಬಸವಸಾಗರಕ್ಕೆ ಹರಿಬಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಣೆಕಟ್ಟಿನ 20 ಕ್ರಸ್ಟ್‌ಗೇಟ್‌ಗಳನ್ನು ತೆರದು 63 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ ಎಂದು ಜಲಾಶಯಗಳ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ ಗರಿಷ್ಠ ಎತ್ತರ 491.75 ಮೀಟರ್‌ ಇದ್ದು, ಸದ್ಯ ಶೇ 93.09ರಷ್ಟು ಭರ್ತಿಯಾಗಿದೆ. ಜಲಾಶಯದಲ್ಲಿ 31.01 ಟಿಎಂಸಿ ಅಡಿಗಳಷ್ಟು ನೀರಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ಹೇಳಿವೆ.

ADVERTISEMENT

ಪ್ರವಾಸಿಗರ ದಂಡು:

ಕ್ರಸ್ಟ್‌ ಗೇಟ್‌ಗಳ ಮೂಲಕ ಅಪಾರ ಪ್ರಮಾಣದಲ್ಲಿ ನೀರನ್ನು ಕೃಷ್ಣಾ ನದಿಗೆ ಹರಿಬಿಡುವ ದೃಶ್ಯ ವೀಕ್ಷಿಸಲು ರಜಾ ದಿನವಾದ ಭಾನುವಾರ ಸಹಸ್ರಾರು ಪ್ರವಾಸಿಗರು ತಂಡೋಪ ತಂಡವಾಗಿ ಬಸವಸಾಗರ ಜಲಾಶಯ ಭೇಟಿ ನೀಡಿದರು.

ಕ್ರಸ್ಟ್‌ಗೇಟ್‌ಗಳ ಮೂಲಕ ಹೊಮ್ಮುವ ಜಲಧಾರೆ ಸೌಂದರ್ಯ ಕಣ್ತುಂಬಿಕೊಂಡು ಸಂಭ್ರಮಿಸಿದರು.

ಜಲಾಶಯ ಭಾಗದಲ್ಲಿ ಹಲವರು ತಳ್ಳುಗಾಡಿಗಳಲ್ಲಿ ಕುರಕಲು ತಿನಿಸು, ನೀರಿನ ಬಾಟಲ್, ಸ್ವೀಟ್ ಕಾರ್ನ್‌, ಶೇಂಗಾ ಹಾಗೂ ಭಜಿ ಸೇರಿ ಇತರೆ ತಿನಿಸುಗಳ ವಹಿವಾಟು ಜೋರಾಗಿತ್ತು.

‘ಈ ಸಂದರ್ಭದಲ್ಲಿ ಜಲಾಶಯ ನೋಡಲು ಸಾವಿರಾರು ಜನರು ಬರುತ್ತಾರೆ. ಬಸವಸಾಗರ ಮುಂಭಾಗದಲ್ಲಿ ಆಕರ್ಷಕ ಉದ್ಯಾನ ನಿರ್ಮಿಸಿದರೆ, ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯ ಜೊತೆಗೆ ಪ್ರವಾಸೋದ್ಯಮಕ್ಕೆ ಬಲ ಸಿಕ್ಕಂತಾಗುತ್ತದೆ’ ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.