
ಯಾದಗಿರಿ: ಕಳೆದ ಎರಡು ವರ್ಷ ದರ ಕುಸಿತದಿಂದ ಕೈಸುಟ್ಟುಕೊಂಡಿದ್ದ ಕಲ್ಲಂಗಡಿ ಬೆಳೆಗಾರರು ಈ ಬಾರಿ ಉತ್ತಮ ಗಳಿಕೆ ಕಂಡಿದ್ದಾರೆ.
ಅತಿಯಾದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಇಳುವರಿಯಲ್ಲಿ ಶೇ 50ರಷ್ಟು ಕುಸಿತವಾಗಿದೆ. ಸಹಜವಾಗಿ ಪೂರೈಕೆ ಕಡಿಮೆಯಾಗಿ ಬೇಡಿಕೆ ವೃದ್ಧಿಯಾಗಿ ದೂರದ ದೆಹಲಿ, ಮುಂಬೈ, ಹೈದರಾಬಾದ್‌ನಿಂದ ವರ್ತಕರು ಜಮೀನುಗಳಿಗೆ ಬಂದು ಕಟಾವು ಮಾಡಿಕೊಂಡು ಹೋಗಿದ್ದಾರೆ.
ಹತ್ತಿಕುಣಿ, ಅರಕೇರ (ಬಿ), ವರ್ಕನಳ್ಳಿ, ಅಶೋಕ ನಗರ, ಮುಂಡರಗಿ, ಬಳಿಚಕ್ರ, ಮಾಧ್ವಾರ, ಕಣೇಕಲ್, ಯಲ್ಹೇರಿ ತಾಂಡಾ, ಗೌಡಗೇರಾ ತಾಂಡಾ ವ್ಯಾಪ್ತಿ ಸೇರಿ ಇತರೆಡೆಗಳಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ ಬಂದಿದೆ.
ಅಲ್ಪವಧಿಯ ಬೆಳೆಯಾದ ಕಲ್ಲಂಗಡಿ ಮೂರು ಹಂತದಲ್ಲಿ ಕಟಾವಿಗೆ ಬರುತ್ತದೆ. ಮೊದಲ ಹಂತದಲ್ಲಿನ ಹಣ್ಣುಗಳು 3 ಕೆ.ಜಿ.ಯಿಂದ 6 ಕೆ.ಜೆ.ವರೆಗೆ ಇವೆ. ಇವುಗಳಿಗೆ ಮೆಟ್ರೊ ನಗರಗಳಲ್ಲಿ ಬಹು ಬೇಡಿಕೆ ಇದೆ. ಹೀಗಾಗಿ, ವರ್ತಕರು ತಾವೇ ಲಾರಿಯೊಂದಿಗೆ ಕಲ್ಲಂಗಡಿ ಬೆಳೆದ ಜಮೀನುಗಳನ್ನು ಅಲೆದು, ಉತ್ತಮ ಗಾತ್ರದ ಹಣ್ಣುಗಳನ್ನು ಖರೀದಿಸಿದ್ದಾರೆ.
ಹೊರ ರಾಜ್ಯಗಳ ಬೇಡಿಕೆ ಲಾಭವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ರೈತರು ಪ್ರತಿ ಕೆ.ಜಿ.ಗೆ ಗರಿಷ್ಠ ₹ 27ರಂತೆ ಮಾರಾಟ ಮಾಡಿದ್ದಾರೆ. ಮೊದಲ ಕಟಾವಿನಲ್ಲಿ ಮಾಡಿದ್ದ ಖರ್ಚು ಸೇರಿ ಗರಿಷ್ಠ ಲಾಭಾಂಶವನ್ನೂ ಜೇಬಿಗೆ ಇಳಿಸಿಕೊಂಡಿದ್ದಾರೆ.
‘ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 200 ಎಕರೆಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿತ್ತು. ಎಕರೆಗೆ 25ರಿಂದ 40 ಟನ್‌ವರೆಗೆ ಇಳುವರಿ ಬಂದಿತ್ತು. ಆದರೆ, ಈ ವರ್ಷ 600 ಎಕರೆಯಲ್ಲಿ ಬಿತ್ತನೆಯಾಗಿದ್ದರೂ ಹವಾಮಾನದಲ್ಲಿನ ವೈಪರೀತ್ಯದಿಂದಾಗಿ ಅರ್ಧಷ್ಟು ಇಳುವರಿ ಕುಸಿದಿದೆ. ಪೂರೈಕೆಯೂ ಕಡಿಮೆಯಾಗಿ ಬೆಲೆಯಲ್ಲಿ ಏರುಮುಖವಾಗಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ನೌಕರ ಬೀರಲಿಂಗ ಪೂಜಾರಿ.
‘ತೋಟಗಾರಿಕೆ ಇಲಾಖೆಯ ಹನಿ ನೀರವಾರಿ, ಮಲ್ಚಿಂಗ್, ಪರಾಗಸ್ಪರ್ಶಕ್ಕಾಗಿ ಜೇನು ಪೆಟ್ಟಿಗೆಯಂತಹ ಯೋಜನೆಗಳ ಲಾಭ ಪಡೆದು ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಹೈದರಾಬಾದ್ ಮೆಟ್ರೊ ಸಿಟಿ ಸಮೀಪದಲ್ಲಿ ಇರುವುದು ಮಾರುಕಟ್ಟೆ ವ್ಯವಸ್ಥೆಗೂ ವರವಾಗಿದೆ. ಮುಂಬೈ ಹಾಗೂ ದೆಹಲಿಗೂ ಜಿಲ್ಲೆಯ ಕಲ್ಲಂಗಡಿ ರವಾನೆ ಆಗುತ್ತಿದೆ. ಗುಣಮಟ್ಟದ ಕಲ್ಲಂಗಡಿ ಬೇಡಿಕೆ ಬಂದಿದ್ದು, ದರವೂ ಹೆಚ್ಚಾಗಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ’ ಎಂದರು.
ಬೆಳೆಗಾರರಿಗೆ ಮಲ್ಚಿಂಗ್ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಡುವುದರಿಂದ ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಕೊಡುವ ಕಲ್ಲಂಗಡಿ ಬೆಳೆಯತ್ತ ರೈತರು ಒಲವು ತೋರುತ್ತಿದ್ದಾರೆ– ರಾಘವೇಂದ್ರ, ತೋಟಗಾರಿಕೆ ಉಪನಿರ್ದೇಶಕ
3 ಎಕರೆಯಲ್ಲಿ ₹ 15 ಲಕ್ಷ ಗಳಿಕೆ!
ಕಣೇಕಲ್ ಗ್ರಾಮದ ಮಲ್ಲರೆಡ್ಡಿ ಅವರು 3 ಎಕರೆಯಲ್ಲಿ ಕಲ್ಲಂಗಡಿ ಬೆಳೆದು ಎರಡು ಹಂತದ ಕಟ್ಟಾವಿನಿಂದ ₹ 14 ಲಕ್ಷ ಜೇಬಿಗೆ ಇಳಿಸಿಕೊಂಡಿದ್ದು ಕೊನೆಯ ಹಂತದ ಕಟಾವಿನಲ್ಲಿ ಕನಿಷ್ಠ ₹ 1 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.
‘ಪ್ರತಿ ಎಕರೆಗೆ ಸುಮಾರು ₹ 80 ಸಾವಿರ ಖರ್ಚು ಮಾಡಿದ್ದೇನೆ. ಮನೆಯವರೇ ಕಳೆ ಕಿತ್ತು ಔಷಧಿ ಸಿಂಪರಣೆ ಮಾಡಿದ್ದರಿಂದ ಕೂಲಿ ನಿರ್ವಹಣೆಯ ಖರ್ಚಿನ ಹೊರೆಯಾಗಿಲ್ಲ. ಮೊದಲ ಕಟಾವಿನಲ್ಲಿ ಪ್ರತಿ ಕೆ.ಜಿ. ಕಲ್ಲಂಗಡಿಯು ₹ 20ಯಂತೆ 55 ಟನ್ ಮಾರಾಟವಾಗಿ ₹11 ಲಕ್ಷದಷ್ಟು ಆದಾಯ ಬಂದಿತ್ತು. ಈಗ ಎರಡನೇ ಹಂತದಲ್ಲಿ 25 ಟನ್‌ನಷ್ಟು ಸಣ್ಣ ಗಾತ್ರದ ಹಣ್ಣುಗಳು ಒಂದು ಕೆ.ಜಿ.ಗೆ ₹ 11 ಖರೀದಿಯಾಗುತ್ತಿವೆ. ಕನಿಷ್ಠ ₹ 3 ಲಕ್ಷವಾದರು ಲಾಭ ಬರಬಹುದು. ಕೊನೆಯ ಕಟಾವಿನಲ್ಲಿ ₹ 1 ಲಕ್ಷ ಕೈ ಸೇರಬಹುದು’ ಎನ್ನುತ್ತಾರೆ ಮಲ್ಲರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.