ADVERTISEMENT

ಯಾದಗಿರಿ: ಅರ್ಧ ದಾರಿಯಲ್ಲೇ ಇಳಿಸಿದ ಬಸ್ ನಿರ್ವಾಹಕ!

ಎರಡೂವರೆ ಕಿ.ಮೀ ನಡೆದು ಕೃಷ್ಣಾ ನದಿ ತೀರದ ಸಂಗಮ ಗ್ರಾಮ ತಲುಪಿದ ವೃದ್ಧ ದಂಪತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 8:07 IST
Last Updated 14 ಫೆಬ್ರುವರಿ 2026, 8:07 IST
ವಡಗೇರಾ ತಾಲ್ಲೂಕಿನ ಗುಂಡ್ಲೂರ ಗ್ರಾಮದಿಂದ ಸಂಗಮಕ್ಕೆ ನಡೆದುಕೊಂಡು ಹೋಗುತ್ತಿರುವ ವೃದ್ದ ದಂಪತಿಗಳು
ವಡಗೇರಾ ತಾಲ್ಲೂಕಿನ ಗುಂಡ್ಲೂರ ಗ್ರಾಮದಿಂದ ಸಂಗಮಕ್ಕೆ ನಡೆದುಕೊಂಡು ಹೋಗುತ್ತಿರುವ ವೃದ್ದ ದಂಪತಿಗಳು   

ವಡಗೇರಾ: ವಡಗೇರಾ ತಾಲ್ಲೂಕಿನ ಸಂಗಮ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಹತ್ತಿದ್ದ ವೃದ್ಧ ದಂಪತಿಯನ್ನು ಕೆಕೆಆರ್‌ಟಿಸಿಯ ಬಸ್‌ ನಿರ್ವಾಹಕ ದಾರಿಯ ಮಧ್ಯದಲ್ಲಿ ಇಳಿಸಿದ ಆರೋಪ ಕೇಳಿಬಂದಿದೆ. ಮಾರ್ಗ ಮಧ್ಯದಲ್ಲಿ ಇಳಿದ ವೃದ್ಧ ದಂಪತಿ ಎರಡೂವರೆ ಕಿ.ಮೀ. ನಡೆದುಕೊಂಡು ಹೋಗಿ ಕೃಷ್ಣಾ ನದಿ ತೀರದ ಸಂಗಮ ಗ್ರಾಮ ತಲುಪಿದ್ದಾರೆ.

ವಯೋಸಹಜ ಮೊಳಕಾಲು ನೋವು ಇರುವ ದಂಪತಿ ಕೈಯಲ್ಲಿ ಬ್ಯಾಗ್‌ ಹಿಡಿದು ನಿಧಾನವಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಸ್ ನಿರ್ವಾಹಕನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.   

ಫೆಬ್ರುವರಿ 9ರಂದು ಕಲಬುರಗಿ ಮೂಲದ ಸಂಗಮೇಶ ಹಾಗೂ ಅನ್ನಪೂರ್ಣ ವೃದ್ಧ ದಂಪತಿ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಕೃಷ್ಣಾ ನದಿ ತೀರ ಗ್ರಾಮ ಸಂಗಮಗೆ ತೆರಳು ಕಾದು ಕುಳುತ್ತಿದ್ದರು. ಯಾದಗಿರಿ- ಸಂಗಮ ನಾಮಫಲಕದ ಬಸ್ (ಕೆಎ 33 ಎಫ್ 365) ನೋಡಿದ ದಂಪತಿ, ಹತ್ತುವ ಮೊದಲು ಸಂಗಮಕ್ಕೆ ಹೋಗುವ ಬಗ್ಗೆ ನಿರ್ವಾಹಕನಿಗೆ ಕೇಳಿ ಖಚಿತಪಡಿಸಿಕೊಂಡ ಬಳಿಕ ಬಸ್‌ ಹತ್ತಿದರು.

ADVERTISEMENT

ಬಸ್ ನಿರ್ವಾಹಕ ನೇರವಾಗಿ ಸಂಗಮ ಗ್ರಾಮಕ್ಕೆ ಟಿಕೆಟ್ ನೀಡುವ ಬದಲು ಅದಕ್ಕೂ ಮುಂಚಿತವಾಗಿ ಬರುವ ಗೂಂಡ್ಲೂರ ಗ್ರಾಮದ ಟಿಕೆಟ್ ನೀಡಿದ್ದರು. ಮಾರ್ಗ ಮಧ್ಯದಲ್ಲಿ ಏಳೆಂಟು ಜನರು ಸಂಗಮಕ್ಕೆ ಹೋಗುವವರು ಹತ್ತಿದರೆ ನಮ್ಮಗೆ ಗುಂಡ್ಲೂರ ಗ್ರಾಮದಿಂದ ಸಂಗಮವರೆಗೆ ಮತ್ತೊಂದು ಟಿಕೆಟ್ ಕೊಡುವ ಉದ್ದೇಶ ಇರಿಸಿಕೊಂಡಿದ್ದರು. ಆದರೆ, ಬಸ್‌ನಲ್ಲಿ ನಾವು ಇಬ್ಬರೇ ಇದ್ದ ಕಾರಣ ಗುಂಡ್ಲೂರಿನಲ್ಲಿ ನಮ್ಮನ್ನು ಇಳಿಸಿದ್ದಾರೆ. ಸಹ ಪ್ರಯಾಣಿಕರ ಮನವಿಗೂ ನಿರ್ವಾಹಕ ಕಿವಿಗೊಡಲಿಲ್ಲ’ ಎಂದು ವೃದ್ಧ ದಂಪತಿ ದೂರಿದ್ದಾರೆ.

‘ಗುಂಡ್ಲೂರಿನಲ್ಲಿ ಬಸ್‌ನಿಂದ ಇಳಿಯಲು ನಿರ್ವಾಹಕ ಹೇಳುತ್ತಿದ್ದಂತೆ ಪ್ರಶ್ನಿಸಿದೆವು. ‘ನಿಮ್ಮಬ್ಬರಿಗಾಗಿ ಸಂಗಮವರೆಗೆ ಬಸ್‌ ತೆಗೆದುಕೊಂಡು ಹೋಗಲು ಆಗುವುದಿಲ್ಲ. ನಾಲ್ಕೂದು ಪ್ರಯಾಣಿಕರು ಇದ್ದರೆ ಮಾತ್ರ ಬಸ್‌ ತೆಗೆದುಕೊಂಡು ಹೋಗುತ್ತೇವೆ’ ಎಂದು ನಿರ್ವಾಹಕ ಹೇಳಿದ. ನನಗು, ನನ್ನ ಪತಿಗೆ ಮೋಳ ಕಾಲು ನೋವಿದೆ, ನಡೆಯಲು ಆಗುವುದಿಲ್ಲ ಎಂದರೂ ಕೇಳದೆ ಬಸ್‌ನಿಂದ ಇಳಿಸಿದರು’ ಎಂದು ವೃದ್ಧ ಮಹಿಳೆ ಅನ್ನಪೂರ್ಣ ಅಳಲು ತೋಡಿಕೊಂಡಿದ್ದಾರೆ.

ಬಸ್‌ನಲ್ಲಿ ಒಬ್ಬ ಪ್ರಯಾಣಿಕ ಇದ್ದರೂ ಅವರಿಗೆ ಟಿಕೆಟ್ ಕೊಟ್ಟು ನಿಗದಿತ ಸ್ಥಳಕ್ಕೆ ಕರೆದೊಯ್ಯುವುದು ಸಾರಿಗೆ ನಿಯಮವಿದೆ. ಬಸ್‌ ನಿರ್ವಾಹಕ ಸಾರಿಗೆ ನಿಯಮವನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎನ್ನುತ್ತಾರೆ ಸಾರ್ವಜನಿಕರು.

ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೇನೆ. ಸೋಮವಾರ ಕಚೇರಿಗೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದು ವಿಚಾರಣೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು
– ರವಿಂದ್ರ ದಿಗ್ಗಿ, ಡಿಟಿಒ ಯಾದಗಿರಿ
ವೃದ್ಧ ದಂಪತಿಗಳನ್ನು ಅವಮಾನಿಸಿ ಬಸ್ಸಿನಿಂದ ಇಳಿಸಿದ ತಪ್ಪಿತಸ್ಥ ಸಾರಿಗೆ ಇಲಾಖೆಯ ಚಾಲಕ ನಿರ್ವಾಹಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸುಕ್ಷೇತ್ರ ಸಂಗಮಕ್ಕೆ ಪ್ರತಿನಿತ್ಯ ಬಸ್ ಸೌಲಭ್ಯ ಒದಗಿಸಬೇಕು
– ಮಂಜುನಾಥ್ ರೆಡ್ಡಿ, ಚೆನ್ನೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘದ