ADVERTISEMENT

ಯಾದಗಿರಿಯಲ್ಲಿ 45.04 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 19 ಮೇ 2023, 15:39 IST
Last Updated 19 ಮೇ 2023, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   REUTERS/JON NAZCA

ಯಾದಗಿರಿ/ಕಲಬುರಗಿ: ಪ್ರಸಕ್ತ ಬೇಸಿಗೆಯಲ್ಲಿ ಅತಿ ಹೆಚ್ಚಿನ ತಾಪಮಾನ 45.04 ಡಿಗ್ರಿ ಸೆಲ್ಸಿಯಸ್‌ ಶುಕ್ರವಾರ ಯಾದಗಿರಿ ಹೋಬಳಿ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ರಾಜ್ಯದ ಸಾಮಾನ್ಯ ಉಷ್ಣಾಂಶಕ್ಕಿಂತ 1.6 ರಿಂದ 3.0 ಡಿಗ್ರಿ ಸೆಲ್ಸಿಯಸ್‌ವರೆಗೆ ಅಧಿಕ ತಾಪಮಾನ ಇದೆ. ಕಲಬುರಗಿ, ಬಳ್ಳಾರಿ, ಕೊ‌ಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 43 ರಿಂದ 43.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಸ್‌ಎನ್‌ಡಿಎಂಸಿ) ಅನ್ವಯ ರಾಯಚೂರಿನ 23, ಕಲಬುರಗಿಯ 11, ಯಾದಗಿರಿಯ 9, ಬಳ್ಳಾರಿಯ 4, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 3 ಹಾಗೂ ಗದಗದ ಒಂದು ಪ್ರದೇಶದಲ್ಲಿ ಅಧಿಕ ತಾಪಮಾನ ದಾಖಲಾಗಿದೆ. ಮುಂದಿನ 5 ದಿನ ಇದೇ ರೀತಿ ವಾತಾವರಣ ಇರಲಿದೆ.

ADVERTISEMENT

‘ಉತ್ತರ ಭಾರತದಿಂದ ಯಥೇಚ್ಛವಾಗಿ ಬಿಸಿಗಾಳಿ ಬೀಸುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ಮುಂಗಾರು ಮಾರುತ ಪ್ರವೇಶ ಆಗಲಿದೆ. ಬೇಸಿಗೆಯ ಬಿಸಿಲು ಮಳೆಗಾಲಕ್ಕೆ ಹೊರಳುವುದರಿಂದ ವಾತಾವರಣದಲ್ಲಿ ಉಷ್ಣಾಂಶದ ಪ್ರಮಾಣ ಅಧಿಕವಾಗುತ್ತದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಅಧಿಕ ಉಷ್ಣಾಂಶದಿಂದ ಬಳಲುವವರ ಆರೋಗ್ಯ ರಕ್ಷಣೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ತಿಳವಳಿಕೆ ಮೂಡಿಸಲಾಗಿದೆ. ಬಿಸಿಲಿನಿಂದ ಪ್ರಜ್ಞೆ ಹೋದವರನ್ನು ತಂಪಾದ ನೀರು ಕುಡಿಸಿ, ಮೈಮೇಲೆ ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆ ಹಾಕುವಂತೆ ತಿಳಿ ಹೇಳಲಾಗಿದೆ’ ಎಂದು ಕಲಬುರಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.