
ಯಾದಗಿರಿ: ಅಭಿವೃದ್ಧಿ ಯೋಜನೆಗಳು ಕೈಗೊಳ್ಳಲು ಜೀವಾಳವಾಗಿರುವ ‘ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025’ (ಡಿಎಚ್‌ಡಿಆರ್) ಹಾಗೂ ‘ಸಮಗ್ರ ಸುಸ್ಥಿರ ಅಭಿವೃದ್ಧಿ-2031’ ವರದಿಗಳು ತಯಾರಿಕೆಗೆ ದತ್ತಾಂಶ ಸಲ್ಲಿಸಲು ಕೆಲ ಇಲಾಖೆಗಳು ವಿಳಂಬ ಧೋರಣೆ ತಳೆದಿವೆ.
ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ (ಸಿಯುಕೆ) ತಂಡ ಈ ಎರಡೂ ವರದಿಗಳನ್ನು ಸಿದ್ಧಪಡಿಸುವ ಹೊಣೆ ಹೊತ್ತಿದೆ. ಈ ಅಭಿವೃದ್ಧಿ ಸೂಚ್ಯಂಕಗಳ ವರದಿ ಆಧಾರದ ಮೇಲೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಇಂತಹ ವರದಿಗಳ ತಯಾರಿಕೆಯಲ್ಲಿ ಸರಿಯಾಗಿ ಸಹಕಾರ ನೀಡದೆ ಇರುವುದಕ್ಕೆ ಸಿಯುಕೆ ತಂಡವು ಬೇಸರ ವ್ಯಕ್ತಪಡಿಸಿದೆ.
‘ವರದಿ ತಯಾರಿಕೆಯ ಕಾರ್ಯವನ್ನು ಜನವರಿ 29ರಿಂದ ಆರಂಭಿಸಿ, ಸಬಂಧಪಟ್ಟ ಇಲಾಖೆಗಳಿಗೆ ಇ–ಮೇಲ್ ಸಹ ಮಾಡಿಲಾಗಿತ್ತು. ಜಿಲ್ಲೆಗೆ ಬಂದು ಎರಡು ಬಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯೂ ನಡೆಸಿ, ಸಕಾಲಕ್ಕೆ ನಿಖರ ದತ್ತಾಂಶ ಒಳಗೊಂಡಿರುವ ಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವಂತೆ ತಿಳಿಸಿದ್ದೆವು. ಫೆಬ್ರುವರಿ 15ರ ವರೆಗೆ ಗಡುವು ಸಹ ನೀಡಲಾಗಿತ್ತು. ಆದರೆ, ಬಹುತೇಕ ಇಲಾಖೆಗಳು ಮಾಹಿತಿ ಹಂಚಿಕೊಳ್ಳುತ್ತಿಲ್ಲ’ ಎಂದು ತಂಡದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲಾಖೆಗಳು ನೀಡಿದ ದತ್ತಾಂಶಗಳ ಮಾಹಿತಿಯನ್ನು ಕ್ರೋಡೀಕರಣ ಮಾಡಿ, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಅಂಕಿಅಂಶಗಳ ಸಹಿತ ಟೇಬಲ್, ಚಾರ್ಟ್, ಮ್ಯಾಪ್‌ಗಳನ್ನು ಹಾಕಿ ಪ್ರಸ್ತುತಪಡಿಸಿ ರಾಜ್ಯ ಯೋಜನಾ ನಿರ್ದೇಶಕರಿಗೆ ಜೂನ್ ತಿಂಗಳಲ್ಲಿ ಸಲ್ಲಿಕೆ ಮಾಡಬೇಕಿದೆ. ಪ್ರತಿ ವಾರ, ತಿಂಗಳು ನಿರ್ದಿಷ್ಟ ಮಾಹಿತಿ ಕಲೆಹಾಕುವಂತೆ ಗುರಿ ನಿಗದಿಪಡಿಸಿದ್ದಾರೆ. ಇಲಾಖೆಗಳಿಂದ ಸರಿಯಾದ ದತ್ತಾಂಶ ಬಾರದೆ ಇದ್ದರೆ ವರದಿ ತಯಾರಿಕೆಗೆ ಅಡ್ಡಿಯಾಗಿ ವಿಳಂಬವೂ ಆಗುತ್ತದೆ’ ಎಂದರು.
‘ಕೊಟ್ಟ ಗಡುವು ಮೀರಿದ್ದರೂ ಸರಿಯಾಗಿ ಸ್ಪಂದನೆ ಸಿಗದೆ ಇದ್ದಾಗ ಜಿಲ್ಲಾ ಪಂಚಾಯಿತಿ ಸಿಇಒ, ಮುಖ್ಯ ಯೋಜನಾ ಅಧಿಕಾರಿ ಗಮನಕ್ಕೆ ತರಲಾಯಿತು. ಎಲ್ಲ ಅಧಿಕಾರಿಗಳಿಗೆ ಮಾಹಿತಿ ಕೊಡುವಂತೆ ಆದೇಶ ಹೊರಡಿಸಿದ ಬಳಿಕ ದತ್ತಾಂಶವನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಅರ್ಧಂಬರ್ಧ ಕೊಟ್ಟಿದ್ದರೆ, ಇನ್ನು ಕೆಲವರ ಬೇರೆ ಕೆಲಸಗಳಿವೆ ಎನ್ನುತ್ತಿದ್ದಾರೆ. ಆದ್ಯತೆಯ ಮೇಲೆ ನಮಗೂ ದತ್ತಾಂಶ ಕೊಡುವಂತೆ ಕೋರುತ್ತಿದ್ದೇವೆ’ ಎಂದು ಹೇಳಿದರು.
16 ವರ್ಷಗಳ ಬಳಿಕ ತಯಾರಿಕೆ: 2014ರಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ತಯಾರಿಸಲಾಗಿತ್ತು. ಆ ವರದಿಯಲ್ಲಿನ ಸೂಚ್ಯಂಕಗಳನ್ನು ಆಧಾರದ ಮೇಲೆ ಯಾದಗಿರಿಗೆ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಸೇರುವಂತೆ ಆಯಿತು. 16 ವರ್ಷಗಳ ಬಳಿಕ ಮಾನವ ಅಭಿವೃದ್ಧಿ ವರದಿಯನ್ನು ತಯಾರಿಸಲಾಗುತ್ತಿದೆ. ಈ ಅವಧಿಯಲ್ಲಿ ಸರ್ಕಾರಗಳು ಜಾರಿಗೆ ತಂದ ಹಲವು ಯೋಜನಗಳು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಜೀವನಮಟ್ಟದಲ್ಲಿ ಆಗಿರುವ ಬದಲಾವಣೆ ಮತ್ತು ಸುಧಾರಣೆಗಳ ಬಗ್ಗೆ ಪರಿಶೀಲಿಸಿ ಇದು ಸಹಾಯಕವಾಗಲಿದೆ ಎನುತ್ತಾರೆ ಅಧಿಕಾರಿಗಳು.
ವರದಿ ತಯಾರಿಕೆಯಲ್ಲಿ 116 ಸೂಚ್ಯಂಕಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಜನರ ಜೀವನ ಮಟ್ಟ, ಶಿಕ್ಷಣ, ಆರೋಗ್ಯ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಕೌಶಲಾಭಿವೃದ್ಧಿ, ಕೈಗಾರಿಕೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ, ಪೌಷ್ಟಿಕ ಆಹಾರ ಲಭ್ಯತೆ, ಆದಾಯ, ತಾಯಿ– ಶಿಶು ಮರಣ, ರಸ್ತೆ ಮತ್ತು ಸಂಪರ್ಕ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬ್ಯಾಂಕಿಂಗ್ ಸೇರಿದಂತೆ ಇತರೆ ಅಂಕಿ ಅಂಶಗಳನ್ನು ವರದಿಗೆ ಪರಿಗಣಿಸಲಾಗುತ್ತದೆ.
‘ಮಾಹಿತಿ ಕೊಡುವಂತೆ ಸೂಚನೆ’
‘ವರದಿ ತಯಾರಿಕೆ ಸಂಬಂಧ ತರಬೇತಿ ಕಾರ್ಯಾಗಾರ ಮಾಡಿ ಸಿಯುಕೆ ತಂಡಕ್ಕೆ ದತ್ತಾಂಶದ ಮಾಹಿತಿ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ಸಲ್ಲಿಕೆಯೂ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಕುಮಲಯ್ಯ (ಪ್ರಭಾರ) ‘ಪ್ರಜಾವಾಣಿ’ಗೆ ತಿಳಿಸಿದರು.
‘2014ರ ಬಳಿಕ ಈಗ ಡಿಎಚ್‌ಡಿಆರ್ ಸಿದ್ಧಪಡಿಸಲಾಗುತ್ತಿದೆ. ಯುಎನ್‌ಒ ತೀರ್ಮಾನದಂತೆ ಸಮಗ್ರ ಸುಸ್ಥಿರ ಅಭಿವೃದ್ಧಿ-2031 ವರದಿಯೂ ತಯರಾಗುತ್ತಿದೆ. ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ನೇತೃತ್ವದ ತಂಡ ಈ ಎರಡೂ ವರದಿಗಳನ್ನು ಸಿದ್ಧಪಡಿಸುತ್ತಿದೆ. ಸಮನ್ವಯಕರು ಸಹಾಯಕ ಸಮನ್ವಯಕರು ಹಾಗೂ ಡೇಟಾ ಎಂಟ್ರಿ ಆಪರೇಟರ್ ಒಬ್ಬರನ್ನು ಕೊಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.