ADVERTISEMENT

‘ಸುರಪುರದ ಇತಿಹಾಸಕ್ಕೆ ಅಪಚಾರ; ಪ್ರಧಾನಿಗೆ ಪತ್ರ- ಡಾ. ರಾಜಾ ಕೃಷ್ಣಪ್ಪನಾಯಕ

ಸುರಪುರ ಸಂಸ್ಥಾನದ ವಂಶಸ್ಥ ಡಾ. ರಾಜಾ ಕೃಷ್ಣಪ್ಪನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 4:53 IST
Last Updated 12 ಜೂನ್ 2022, 4:53 IST
ಸುರಪುರದ ಅರಮನೆಯಲ್ಲಿ ಶನಿವಾರ ರಾಜ ವಂಶಸ್ಥ ಡಾ. ರಾಜಾ ಕೃಷ್ಣಪ್ಪನಾಯಕ ಮಾತನಾಡಿದರು. ಸಂಶೋಧಕ ಭಾಸ್ಕರರಾವ್ ಮುಡಬೋಳ, ಸಂಸ್ಥಾನದ ವಶಂಸ್ಥರು ವಂಶಸ್ಥರು ಇದ್ದರು
ಸುರಪುರದ ಅರಮನೆಯಲ್ಲಿ ಶನಿವಾರ ರಾಜ ವಂಶಸ್ಥ ಡಾ. ರಾಜಾ ಕೃಷ್ಣಪ್ಪನಾಯಕ ಮಾತನಾಡಿದರು. ಸಂಶೋಧಕ ಭಾಸ್ಕರರಾವ್ ಮುಡಬೋಳ, ಸಂಸ್ಥಾನದ ವಶಂಸ್ಥರು ವಂಶಸ್ಥರು ಇದ್ದರು   

ಸುರಪುರ: ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಸುರಪುರದ ಗೋಸಲ ಸಂಸ್ಥಾನದ ನಾಲ್ವಡಿ ರಾಜಾ ವೆಂಕಟಪ್ಪನಾಯಕರ ಇತಿಹಾಸವನ್ನು ಪಠ್ಯ ಪುಸ್ತಕದಿಂದ ಕೈಬಿಟ್ಟಿರುವ ಸರ್ಕಾರ ಇಡೀ ದೇಶಕ್ಕೆ ಅಪಚಾರವೆಸಗಿದೆ’ ಎಂದು ಸುರಪುರ ಸಂಸ್ಥಾನದ ವಂಶಸ್ಥ ಡಾ. ರಾಜಾ ಕೃಷ್ಣಪ್ಪನಾಯಕ ಆಕ್ರೋಶ ವ್ಯಕ್ತಪಡಿಸಿದರು.

‘ಸುರಪುರ ಇತಿಹಾಸದ ಬಗ್ಗೆ ಪರಿಜ್ಞಾನವಿಲ್ಲದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಈ ನಿರ್ಣಯ ಕೈಗೊಂಡು ಇತಿಹಾಸಕ್ಕೆ ದ್ರೋಹ ಬಗೆದಿದೆ. ಕೂಡಲೇ ತಪ್ಪು ಸರಿಪಡಿಸಿಕೊಂಡು ಪಠ್ಯವನ್ನು ಮುಂದುವರಿಸಬೇಕು. ಈಗಾಗಲೇ ಮುಖ್ಯಮಂತ್ರಿಗೆ ಈ ಸಂಬಂಧ ಪತ್ರ ಬರೆಯಲಾಗಿದೆ. ಪ್ರಧಾನಮಂತ್ರಿಗೂ ಬರೆಯಲಾಗುವುದು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೊಘಲ್ ಸಾಮ್ರಾಟ ಔರಂಗಜೇಬ್‌ಗೆ ಯುದ್ಧದಲ್ಲಿ ಹಿಮ್ಮಟ್ಟಿಸಿ ದಕ್ಷಿಣ ಭಾರತದಲ್ಲಿನ ಕಂಚಿ, ಕಾಮಾಕ್ಷಿ, ಮದುರೈ, ಶ್ರೀಶೈಲ, ತಿರುಪತಿ ಇನ್ನಿತರ ದೇವಾಲಯಗಳನ್ನು ಸಂರಕ್ಷಿಸಿದ ಕೀರ್ತಿ ಸುರಪುರ ಸಂಸ್ಥಾನದ ಅರಸರಿಗೆ ಸಲ್ಲುತ್ತದೆ. ಪ್ರತಿ ತರಗತಿಗೂ ಇಲ್ಲಿಯ ಇತಿಹಾಸ ಅವಶ್ಯಕ. ಈ ಇತಿಹಾಸದ ಬಗ್ಗೆ ಕೆಣಕಿದರೆ ಇಲ್ಲಿಯ ವತನದಾರ, ಜಹಗೀರದಾರ್ ಮನೆತನಗಳು ಮತ್ತು ಸಮಸ್ತ ಜನರಿಂದ ಬೃಹತ್ ಪ್ರತಿರೋಧ ಎದುರಿಸಬೇಕಾಗುತ್ತದೆ. ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ಸುರಪುರ ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ ಮಾತನಾಡಿ, ‘ಇಲ್ಲಿನ ಇತಿಹಾಸ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಹೊಂದಿದೆ. ಲಂಡನ್‍ನ ಕಲಾ ಗ್ಯಾಲರಿಯಲ್ಲಿ 60 ರಿಂದ 70 ಗರುಡಾದ್ರಿ
ಚಿತ್ರಕಲೆಗಳಿವೆ. ಹಲವು ದೇಶಗಳಲ್ಲಿ ಇಲ್ಲಿಯ ಇತಿಹಾಸ ಚಿರಪರಿಚಿತ. ಯಾವ ಕಾರಣಕ್ಕೆ ಇತಿಹಾಸ ಕೈಬಿಡಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದರು.

‘1705ರಲ್ಲಿ ಔರಂಗಜೇಬನ ಕೊನೆಯ ಯುದ್ಧ ಆಗಿದ್ದು ವಾಗಣಗೇರಾದಲ್ಲಿ. 6 ತಿಂಗಳವಾದರೂ ಆತನಿಗೆ ವಾಗಣಗೇರಾ ಕೋಟೆ ಗೆಲ್ಲಲು ಸಾಧ್ಯವಾಗಲಿಲ್ಲ. ತಿರುಪತಿಯ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದ ಪ್ರಥಮ ಪೂಜೆ ಸಲ್ಲುತ್ತದೆ. ಇಂತಹ ಭವ್ಯ ಇತಿಹಾಸವುಳ್ಳ ವಿಷಯವನ್ನು ಇನ್ನಷ್ಟು ವಿಸ್ತಾರವಾಗಿ ಪಠ್ಯದಲ್ಲಿ ಸೇರಿಸಬೇಕು. ಈ ವರ್ಷವು ಬರಗೂರ ರಾಮಚಂದ್ರಪ್ಪ ಸಮಿತಿಯವರ ಪುಸ್ತಕಗಳನ್ನೇ ಪೂರೈಸಬೇಕು’ ಎಂದರು.

ಪ್ರಮುಖರಾದ ರಾಜಾ ಸೀತಾರಾಮನಾಯಕ, ರಾಜಾ ಲಕ್ಷ್ಮೀನಾರಾಯಣನಾಯಕ, ದೊಡ್ಡಪ್ಪ ನಿಷ್ಠಿ, ಗಣೇಶ ಜಹಗೀರದಾರ್, ಸುನೀಲ ಸರಪಟ್ಟಣಶೆಟ್ಟಿ, ದಿನೇಶ ಮಂತ್ರಿ, ಬಸವರಾಜ ನಿಷ್ಠಿದೇಶಮುಖ, ಬಸವರಾಜ ಜಮದ್ರಖಾನಿ, ಸೈಯದ್ ಅಹ್ಮದ್ ಪಾಶಾ, ಶ್ರೀಹರಿರಾವ ಆದೋನಿ, ಶಿವಕುಮಾರ ಮಸ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.