ಯಾದಗಿರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ ಸಂಗ್ರಹಿಸಲು ಅಭಿವೃದ್ಧಿಪಡಿಸಿದ ಎಪಿಕೆ ಆ್ಯಪ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.
ಗಣತಿದಾರರ ಬಹುತೇಕರ ಮೊಬೈಲ್‌ಗಳಲ್ಲಿ ‘ಎರರ್’ ಸಂದೇಶ ಬಂದಿದೆ. ಕೆಲವರಿಗೆ ಸಮೀಕ್ಷೆಯ ಪರಿಕರವೇ ಕೊಟ್ಟಿಲ್ಲ. ಪರಿಕರ ಪಡೆದು, ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ಕೆಲವರಿಗೆ ಸಮೀಕ್ಷೆಗೆ ಒಳಪಡುವ ಮನೆಗಳ ಪಟ್ಟಿಯೇ ನೀಡಿಲ್ಲ.
ಗುರುಮಠಕಲ್‌ನಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸಮೀಕ್ಷೆಗೆ ನಿಯೋಜಿತ ಸಿಬ್ಬಂದಿ ಲಾಗ್ಇನ್‌ಗಾಗಿ ಚಾತಕಪಕ್ಷಿಯಂತೆ ಕಾದಿದ್ದರು. ಹುಣಸಗಿಯಲ್ಲಿ ಸಮೀಕ್ಷೆಯ ಕಿಟ್‌ಗಳು ಸಂಜೆಯಾದರೂ ಗಣತಿದಾರರ ಕೈಸೇರಲಿಲ್ಲ. ಯಾದಗಿರಿ ತಾಲ್ಲೂಕಿನಲ್ಲಿ ಕೆಲವು ಶಿಕ್ಷಕರ ಮೊಬೈಲ್‌ನಲ್ಲಿ ಎಪಿಕೆ ಆ್ಯಪ್ ಇನ್‌ಸ್ಟಾಲ್ ಸಹ ಆಗಲಿಲ್ಲ. ತಾಂತ್ರಿಕ ಸಿಬ್ಬಂದಿಯ ಸಲಹೆ ಮೇರೆಗೆ ಅಪ್‌ಡೇಟ್ ಮಾಡಲಾದ ಹೊಸ ಎಪಿಕೆ ಆ್ಯಪ್‌ನಲ್ಲಿಯೂ ತಾಂತ್ರಿಕ ದೋಷ ಮುಂದುವರಿದಿತ್ತು ಎನ್ನುತ್ತಾರೆ ಗಣತಿದಾರರು.
‘22 ಶಿಕ್ಷಕರಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನಿಯೋಜನೆ ಮಾಡಿದ್ದಾರೆ. ಆದರೆ, ಮೇಲ್ವಿಚಾರಣೆ ಮಾಡಬೇಕಾದ ಶಿಕ್ಷಕರ ಪಟ್ಟಿಯನ್ನೇ ನೀಡಿಲ್ಲ. ಸಮೀಕ್ಷೆಗಾಗಿ ಅಭಿವೃದ್ಧಿಪಡಿಸಲಾದ ಎಪಿಕೆ ಆ್ಯಪ್ ಹಳೇ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್ ಆಗುತ್ತಿಲ್ಲ’ ಎಂದು ಮೇಲ್ವಿಚಾರಕರೊಬ್ಬರು ಮಾಹಿತಿ ನೀಡಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆ್ಯಪ್‌ನ ತಾಂತ್ರಿಕ ತಂಡದ ಸಿಬ್ಬಂದಿ ರಾಘವೇಂದ್ರ ಕುಲಕರ್ಣಿ, ‘ತಾಂತ್ರಿಕ ದೋಷವನ್ನು ಸರಿಪಡಿಸಲು ರಚಿಸಲಾದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ಹಳೇ ಆ್ಯಪ್ ಬದಲು ಹೊಸ ಆ್ಯಪ್ ಬಳಸುವಂತೆ ಮಾಸ್ಟರ್ ತರಬೇತುದಾರರ ಮೂಲಕ ಶಿಕ್ಷಕರಿಗೆ ತಿಳಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.