ಯಂಕಣ್ಣ ಹುದ್ದಾರ
ಸುರಪುರ: ಅದು 1925-60ರ ಕಾಲ. ತಾಲ್ಲೂಕಿನ ಆಲ್ದಾಳ, ಪೇಠ ಅಮ್ಮಾಪುರ, ಜಾಲಿಬೆಂಚಿ, ವಾಗಣಗೇರಿ, ತಳವಾರಗೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನಪದ ಉಚ್ಛ್ರಾಯ ಹಂತದಲ್ಲಿತ್ತು.
ಜನಪದದ ಮುಂದುವರಿದ ಭಾಗಗಳಾದ ಗೀಗೀ ಪದ, ತತ್ವಪದ, ರಿವಾಯತ್, ಮೊಹರಂ ಪದ, ದುಂದುಮೆ, ಬಯಲಾಟ, ಭಜನೆ, ಲಾವಣಿ ಪದಗಳು ಎಲ್ಲೆಲ್ಲೂ ರಿಂಗಣಿಸುತ್ತಿದ್ದವು.
ಪ್ರತಿ ಮನೆಯಲ್ಲಿಯೂ ಒಬ್ಬರಾದರೂ ಜನಪದಕ್ಕೆ ಮನಸೋತು ಕಲಿಯುತ್ತಿದ್ದರು. ಪ್ರತಿನಿತ್ಯ ಭಜನೆ, ಹಾಡಿನ ಸ್ಪರ್ಧೆಗಳು, ವರ್ಷಕ್ಕೆರಡು ಬಾರಿ ಬಯಲಾಟ ಪ್ರದರ್ಶನ ಸಾಮಾನ್ಯವಾಗಿತ್ತು. ಅಂತೆಯೇ ಈಗಲೂ ಈ ಭಾಗದಲ್ಲಿ ಜನಪದರು ಹೇರಳವಾಗಿದ್ದಾರೆ.
ಅವರಲ್ಲಿ ಆಲ್ದಾಳ ಗ್ರಾಮದ ಯಂಕಣ್ಣ ಹುದ್ದಾರ ಮೇರು ಸಾಧನೆ ಮಾಡಿದ್ದರು. ತಿಪ್ಪಣ್ಣ, ಭೀಮವ್ವ ತಂದೆ–ತಾಯಿ. ಬಹುಕಾಲ ಮಕ್ಕಳಿರಲಿಲ್ಲ. ಮನೆ ದೇವರು ತಿರುಮಲ ವೆಂಕಟೇಶ್ವರಿಗೆ ಹರಕೆ ಹೊತ್ತು 1905ರಲ್ಲಿ ಸಂತಾನ ಪಡೆಯುತ್ತಾರೆ. ಮಗನಿಗೆ ಯಂಕಣ್ಣ ಎಂದು ನಾಮಕರಣ ಮಾಡುತ್ತಾರೆ.
ತಿಪ್ಪಣ್ಣ ಸ್ಥಿತಿವಂತರು. ನ್ಯಾಯ ಹೇಳುವವರು. ಹೀಗಾಗಿ ಮಗನಿಗೆ ಚೆನ್ನಾಗಿ ಓದಿಸಿ ದೊಡ್ಡ ವ್ಯಕ್ತಿ ಮಾಡಬೇಕೆನ್ನುವ ಆಸೆ. ಆದರೆ ಚಿಕ್ಕಂದಿನಲ್ಲಿಯೇ ಯಂಕಣ್ಣನಿಗೆ ಭಜನೆಯ ಆಸಕ್ತಿ.
ಬಯಲಾಟ, ಭಜನೆ, ಮೊಹರಂ ಇತರ ಕಾರ್ಯಕ್ರಮಗಳಲ್ಲಿ ತಲ್ಲೀನರಾಗಿ ಭಾಗವಹಿಸುತ್ತಿದ್ದರು. ತಾವೂ ಕಲಿತು ಹಾಡತೊಡಗಿದರು. ತಂದೆಗೆ ಏನೂ ತೋಚಲಿಲ್ಲ. ಮಗ ಬೇರೆಯೇ ಹಾದಿ ಹಿಡಿಯುತ್ತಿದ್ದಾನೆ ಎಂಬ ಆತಂಕ. ಹಿರಿಯರ ಅಭಿಪ್ರಾಯ ಪಡೆದು ಕೊನೆಗೂ ಮಗನ ಆಸೆಗೆ ಬೆಂಬಲವಾಗಿ ನಿಂತರು.
ಭಾಗಣ್ಣ ವಿದ್ಯಾಗುರು. 5ನೇ ತರಗತಿವರೆಗೆ ಹಾಗೂ ಹೀಗೂ ಕಲಿತ ಯಂಕಣ್ಣ, ಬಿ.ಬಿ. ಇಂಗಳಿಗಿಯ ಮಲ್ಲ ಹಸನಸಾಬ ಹತ್ತಿರ ಜನಪದ ಹಾಡುಗಳ ಅಭ್ಯಾಸ ಮಾಡಿದರು. ಲಾಲ ಅಹ್ಮದ್ ಅವರ ಹತ್ತಿರ ಹಾಡುಗಾರಿಕೆ ಕಲಿತರು. ಲಿಂಗಪ್ಪ ಕಿಲ್ಲೇದಾರ ಅವರಲ್ಲಿ ಗುರುಬೋಧೆ ಪಡೆದರು. ಸತತ ಅಭ್ಯಾಸ ಮಾಡಿ ಜನಪದದ ಆಳ, ಅಗಲ ಅರಿತು ಸುಶ್ರಾವ್ಯವಾಗಿ ಹಾಡುವುದನ್ನು ಕರಗತ ಮಾಡಿಕೊಂಡರು. ‘ಆಲ್ದಾಳ ಈಶ’, ಗುರು ಲಿಂಗೇಶ’ ಕಾವ್ಯನಾಮದಲ್ಲಿ ಮೇರು ಸಾಹಿತ್ಯ ರಚಿಸಿದರು.
ಎಲಿಬೀಡಿ ಕಟ್ಟ ನಮ್ಮವ್ವ
ಈ ಕಲಿಯುಗದ ಜನರ
ನಲಿ ತಿಳಿದು ನಲಗ ಮಾಡವ್ವ ||ಪ||
ಕಾಮ, ಕ್ರೋಧ, ಕೊಬ್ಬೇರಿದ ಎಲಿಯೋ
ಜಮಾಸಿ ಜೋಡಿಸಿ ತುಂಬು ಕತ್ತರಿಸಿ ಒಗಿಯೋ
ತಾಮಸವೆಂಬುವ ಕೊಬ್ರಿ, ಕಸಕಸಿ
ವ್ಯಾಮೋಹವೆಂಬ ಯಾಲಕ್ಕಿ ಕೂಡಿಸಿ
ಯೋಚನೆಯೆಂಬುವ ಕಾಚು ಸುಣ್ಣ, ಸೋಪು ಅಡಕಿ
ಜರ್ದಾ ಪುಡಿ ಅರಾಕ್ ಲೇಪಿಸಿ ||1||
ಇಂತಹ 100ಕ್ಕೂ ಹೆಚ್ಚು ತತ್ವಪದಗಳು, 200ಕ್ಕೂ ಹೆಚ್ಚು ಗೀಗಿ ಪದಗಳು, 150ಕ್ಕೂ ಹೆಚ್ಚು ಮೊಹರಂ ಪದಗಳು, 50ಕ್ಕೂ ಹೆಚ್ಚು ಲಾವಣಿ ಪದಗಳು, ಬಯಲಾಟ ರಚಿಸಿ ಜನಪದವನ್ನು ಶ್ರೀಮಂತಗೊಳಿಸಿದ್ದಾರೆ. ಇವರು ರಚಿಸಿದ ಹಾಡುಗಳು ಪ್ರಸಿದ್ಧಿ ಪಡೆದಿವೆ.
ನೀತಿ ಬೋಧನೆ, ಸಮಾಜದ ಅಂಕುಡೊಂಕು ತಿದ್ದುವುದು, ಕೆಟ್ಟ ಚಟಗಳನ್ನು ಬಿಡಿಸುವುದು, ವೀರಗೀತೆ, ಅಧ್ಯಾತ್ಮ, ಇತಿಹಾಸದ ಪ್ರಸ್ತುತಿ, ಸಮಾರಂಭಗಳಲ್ಲಿ ನಡೆಯುವ ಪದ್ಧತಿಗಳು ಇತರ ಸಮಾಜ ಅಭಿವೃದ್ಧಿಯ ಪೂರಕ ವಿಷಯಗಳು ಯಂಕಣ್ಣ ಅವರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿವೆ.
‘ಪತ್ನಿ, ಇಬ್ಬರು ಪುತ್ರರು, ಪುತ್ರಿಯ ಸಂಸಾರ ಹೊಂದಿದ್ದ ಯಂಕಣ್ಣ ಅವರನ್ನೂ ಜನಪದ ಲೋಕದ ಭಾಗವಾಗಿಸಿದ್ದ. 1970ರಲ್ಲಿ ಹಾಡುತ್ತಲೇ ಇಹಲೋಕ ತ್ಯಜಿಸಿದ. ಆಲ್ದಾಳದಲ್ಲಿ ಗದ್ದುಗೆ ಇದ್ದು ಪ್ರತಿ ವರ್ಷ ಜುಲೈ 5 ರಂದು ಅವರ ಪುಣ್ಯ ತಿಥಿ ಆಚರಿಸಲಾಗುತ್ತದೆ’ ಎಂದು ಅವರ ಮೊಮ್ಮಗ ಕೇಮಣ್ಣ ಹೇಳುತ್ತಾರೆ.
ಯಂಕಣ್ಣ ಹುದ್ದಾರ ಜನಪದದ ಅನನ್ಯ ಸಂಪತ್ತು. ಇಂತಹ ಹಲವು ಕಲಾವಿದರು ಸುರಪುರ ತಾಲ್ಲೂಕಿನಲ್ಲಿ ಇದ್ದಾರೆ. ಅವರ ಬಗ್ಗೆ ಸಂಶೋಧನೆ ನಡೆಯಬೇಕುಹನುಮಂತ ಚಂದಲಾಪುರ ‘ಅಮ್ಮಾಪುರ ಪರಿಸರದ ಜನಪದ ಸಾಹಿತ್ಯ’ ವಿಷಯದ ಬಗ್ಗೆ ಪಿಎಚ್‍ಡಿ ಪಡೆದವರು
ಹಸ್ತ ಪ್ರತಿಯಲ್ಲಿರುವ ಯಂಕಣ್ಣ ಹುದ್ದಾರ ಅವರ ಸಾಹಿತ್ಯವನ್ನು ಪ್ರಕಟಿಸಬೇಕು. ಸಾಹಿತ್ಯವನ್ನು ಪಠ್ಯಕ್ರಮವನ್ನಾಗಿಸಬೇಕುಕನಕಪ್ಪ ವಾಗಣಗೇರಿ ಸಾಹಿತಿ
ಮಲ್ಲ ಹಸನಸಾಬ ಅವರ ಹತ್ತಿರ ನಾಗೇಶಿ ಪಂಥದ ಹಾಡುಗಾರಿಕೆಯನ್ನು ಆಮೂಲಾಗ್ರವಾಗಿ ಕಲಿತ ಯಂಕಣ್ಣ ಅದರ ಪ್ರಬಲ ಪ್ರತಿಪಾದಕರಾಗಿ ಬೆಳೆದರು. ನಾಗೇಶಿ ಮತ್ತು ಹರದೇಶಿ ಎರಡು ಜನಪದ ಹಾಡುಗಾರಿಕೆ ವಿಧಾನಗಳು. ನಾಗೇಶಿ ಆದಿಶಕ್ತಿಯೇ ಹೆಚ್ಚು ಎಂದು ಪ್ರತಿಪಾದಿಸಿದರೆ ಹರದೇಶಿ ಪರಮಾತ್ಮನೇ ಶ್ರೇಷ್ಠ ಎಂದು ವಾದಿಸುತ್ತದೆ. ಎರಡು ಪಂಥಗಳ ಕಲಾವಿದರು ಕಾರ್ಯಕ್ರಮದಲ್ಲಿ ಸವಾಲು ಜವಾಬು ರೀತಿ ಎದುರು ಬದುರಾಗಿ ಕುಳಿತು ಹಾಡುತ್ತಾರೆ. ಬೆಳಗಿನವರೆಗೂ ಸ್ಪರ್ಧೆ ನಡೆಯುತ್ತದೆ. ಕೊನೆಗೂ ಒಬ್ಬರು ಸೋಲು ಒಪ್ಪಿಕೊಳ್ಳುತ್ತಾರೆ. ಈ ಸ್ಪರ್ಧೆ ಹೆಚ್ಚು ಜನಪ್ರಿಯ. ಅದ್ಭುತ ಕಂಠ ಹೊಂದಿದ್ದ ಯಂಕಣ್ಣ ಜೀವನದುದ್ದಕ್ಕೂ ಎಂದು ಸೋಲಲಿಲ್ಲ. ಅವರ ಎದುರು ಹಾಡಲು ಹರದೇಶಿ ಪಂಥದವರು ಹೆದರುವಂತಾಗಿತ್ತು. ಹೀಗಾಗಿ ಯಂಕಣ್ಣ ಮನೆ ಮಾತಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.