ಯರಗೋಳ ವ್ಯಾಪ್ತಿಯ ಚಿಂತಕುಂಟ ಗ್ರಾಮದಲ್ಲಿ ಮಳೆಯಿಂದಾಗಿ ಭೀಮಣ್ಣ ರಾಮಣ್ಣ ಅವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಗ್ರಾಮ ಲೆಕ್ಕಾಧಿಕಾರಿ ಅಪೂರ್ವ ಇದ್ದರು
ಯರಗೋಳ: ಕಳೆದ ಹತ್ತು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಗೆ ಬಹುತೇಕ ಗ್ರಾಮದ ರಸ್ತೆಗಳು ಚರಂಡಿಗಳಂತಾಗಿವೆ. ಮನೆ ಗೋಡೆಗಳು ಕುಸಿದುಬಿದ್ದವೆ. ಅಪಾರ ಪ್ರಮಾಣದಲ್ಲಿ ಹೆಸರು, ಹತ್ತಿ ಬೆಳೆ ನಷ್ಟವಾಗಿದೆ.
ಹೊನಗೇರಾ ಗ್ರಾಮದಲ್ಲಿ ನರಸಪ್ಪ ನಿಂಗಪ್ಪ ಅವರ ಮನೆಯ ಚಾವಣಿ ಕುಸಿದಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಶಕುಂತಲಾ ಮಾಹಿತಿ ನೀಡಿದರು.
ಚಿಂತಕುಂಟಾ ಗ್ರಾಮದಲ್ಲಿ ಭೀಮಣ್ಣ ರಾಮಣ್ಣ ಅವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಅಪೂರ್ವ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ.
‘ವಡ್ನಳ್ಳಿ ಗ್ರಾಮದಲ್ಲಿ ದೇವಕೆಮ್ಮ ಅವರಿಗೆ ಸೇರಿದ ಮನೆ ಚಾವಣಿ ಕುಸಿದಿರುವ ವರದಿ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಅಂಶ ತಿಳಿದುಕೊಳ್ಳಬೇಕಾಗಿದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ರಾಧಿಕಾ ಹೇಳಿದರು.
‘ಯಡ್ಡಳ್ಳಿ ಗ್ರಾಮದ ಶಾರದಾ ದೇವೀಂದ್ರಪ್ಪ ಅವರ ಮನೆ ಗೋಡೆ ಕುಸಿದಿದೆ’ ಎಂದು ಗ್ರಾಮ ಲೆಕ್ಕಾಧಿಕಾರಿ ದೇವಿಕಾ ಮಾಹಿತಿ ನೀಡಿದರು.
‘ಮಳೆಯಿಂದಾಗಿ ಹೊಲದಲ್ಲಿ ಬೆಳೆದ ಮುಂಗಾರಿನ ಬಂಗಾರದಂತಹ ಹೆಸರು ನೆಲದ ಪಾಲಾಗಿದೆ. ಹತ್ತಿ ಬೆಳೆ ಕೊಳೆಯುತ್ತಿದೆ. ಜಿಲ್ಲಾಡಳಿತ ತಕ್ಷಣವೇ ನಷ್ಟವಾದ ಬೆಳೆಯ ಸರ್ವೆ ಕಾರ್ಯ ಮಾಡಬೇಕು’ ಎಂದು ಹತ್ತಿಕುಣಿ ಗ್ರಾಮದ ಕೃಷಿಕ ವೈಜನಾಥ್ ಪಾಟೀಲ ಒತ್ತಾಯಿಸಿದರು.
ತಡವಾಗಿ ರಜೆಯ ಮಾಹಿತಿ: ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಶಾಲಾ, ಕಾಲೇಜುಗಳಿಗೆ 2 ದಿನಗಳ ರಜೆ ಘೋಷಣೆ ಮಾಡಿದ ಮಾಹಿತಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಬೇಗ ತುಲುಪಿರಲಿಲ್ಲ. ವಿದ್ಯಾರ್ಥಿಗಳು ಎಂದಿನಂತೆ ಕೊಡೆ ಹಿಡಿದು, ರೇನ್‌ಕೋಟ್ ಧರಿಸಿ ಶಾಲೆಗಳಿಗೆ ತಲುಪಲು ಬಸ್, ಆಟೊ ಸೇರಿ ಇತರೆ ವಾಹನಗಳನ್ನು ಹತ್ತಿದರು.. ಶಾಲೆ–ಕಾಲೇಜಿಗೆ ಹೋದ ಮೇಲೆ ರಜೆ ಘೋಷಣೆ ಮಾಡಿರುವುದು ಗೊತ್ತಾಗಿ ವಾಪಸ್ ಮನೆಗೆ ಮರಳಿದರು. ಇದರಿಂದಾಗಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ 17 ಮನೆಗಳ ಬಿದ್ದ ಮಾಹಿತಿ ಲಭ್ಯವಾಗಿದೆ. ಮಳೆ ನಿಂತ ಮೇಲೆ ಎಷ್ಟು ಮನೆಗಳು ಬಿದ್ದಿವೆ ಅನ್ನುವ ನಿಖರ ಮಾಹಿತಿ ಲಭ್ಯವಾಗುತ್ತದೆರಾಜಶೇಖರ್ ಪಾಟೀಲ, ಕಂದಾಯ ನಿರೀಕ್ಷಕ ಹತ್ತಿಕುಣಿ
ಕಂದಾಯ ನಿರೀಕ್ಷಕರು ಮತ್ತು ಕೃಷಿ ಇಲಾಖೆಯಿಂದ ಮಳೆ ನಿಂತ ಮೇಲೆ ಬೆಳೆ ನಷ್ಟದ ಜಂಟಿ ಸರ್ವೆ ಕಾರ್ಯ ನಡೆಸಲಾಗುತ್ತದೆನರೇಶ್ ಹತ್ತಿಕುಣಿ, ಕೃಷಿ ಕೇಂದ್ರದ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.