
ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ 15 ದಿನಗಳಲ್ಲಿ ಮೂಲಸೌಕರ್ಯ ಒದಗಿಸುವಂತೆ ನಮ್ಮ ಕರ್ನಾಟಕ ಸೇವೆ ಮುಖಂಡರು ಬುಧವಾರ ಪಂಚಾಯಿತಿ ಪಿಡಿಒಗೆ ಮನವಿ ಸಲ್ಲಿಸಿದ್ದು, ವಿಳಂಬ ಮಾಡಿದರೆ ಪಂಚಾಯಿತಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ 330, ಪ್ರೌಢಶಾಲೆಯಲ್ಲಿ 320 ವಿದ್ಯಾರ್ಥಿಗಳಿದ್ದಾರೆ. ಎರಡೂ ಶಾಲೆಗಳಿಗೆ ಒಂದೇ ಶೌಚಾಲಯ ಇದೆ. ಬಾಲಕಿಯರು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಎರಡ್ಮೂರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು, ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.
ಶಾಲೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಶೌಚಾಲಯ ಅರ್ಧಕ್ಕೆ ನಿಂತಿದೆ. ನರೇಗಾ ಜಿಪಿಎಸ್ ಫೋಟೊಗಳನ್ನು ತೆಗೆದು ಬಿಲ್ ಎತ್ತಲಾಗಿದ್ದು, ಮಕ್ಕಳಿಗೆ ಶೌಚಾಲಯ ಭಾಗ್ಯ ಇಲ್ಲವಾಗಿದೆ. ಶಾಲೆಗೆ ಕಾಂಪೌಂಡ್ ಇಲ್ಲ, ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ವಿಜ್ಞಾನ ಪ್ರಯೋಗಾಲಯದ ಪರಿಕರಗಳು ಕಳುವಾಗಿದ್ದರೂ ಇದುವರೆಗೆ ಪತ್ತೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಈ ವೇಳೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಚನ್ನಬಸವ ಕನಕ, ಪ್ರಮುಖರಾದ ನರೇಂದ್ರ ಎಸ್. ಸೂರ್ಯವಂಶಿ, ರೆಡ್ಡೆಪ್ಪ ಬಡ್ಡಿ, ಜಗ್ಗಣ್ಣ, ಭೀಮಶಾ ಶಂಕ್ರಡಿಗಿ, ವಿಶ್ವಾರಾಧ್ಯ ಮಾನೇಗಾರ, ಬಸು ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.