ADVERTISEMENT

ಯೋಗಿ ಮಾದರಿ ಸರ್ಕಾರ ನಡೆಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:53 IST
Last Updated 23 ಫೆಬ್ರುವರಿ 2026, 6:53 IST
ಗುರುಮಠಕಲ್‌ ಪಟ್ಟಣದಲ್ಲಿ ಶನಿವಾರ ಶಿವಾಜಿ ಜಯಂತ್ಯುತ್ಸವದಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ಗುರುಮಠಕಲ್‌ ಪಟ್ಟಣದಲ್ಲಿ ಶನಿವಾರ ಶಿವಾಜಿ ಜಯಂತ್ಯುತ್ಸವದಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು   

ಗುರುಮಠಕಲ್‌: ‘ಬಿಜೆಪಿ ಮತ್ತೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಜೆಸಿಬಿ ಪಕ್ಷದ ಮೂಲಕ ಸ್ಪಷ್ಟ ಬಹುಮತದೊಡನೆ ಅಧಿಕಾರಕ್ಕೆ ಬರುವೆ. ಯೋಗಿ ಆದಿತ್ಯನಾಥ ಮಾದರಿ ಸರ್ಕಾರ ನಡೆಸುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದಲ್ಲಿ ಹಿಂದೂ ಯುವ ಘರ್ಜನೆ ಸಮತಿ ವತಿಯಿಂದ ಶನಿವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಹಿಂದೂ ಕಾರ್ಯಕರ್ತರ ಕಷ್ಟಗಳು ಹೇಳಲಾಗದು. ಹಿಂದೂಗಳ ಉತ್ಸವಗಳ ಮೇಲೆ ಕಲ್ಲು ತೂರುವ ಕೆಲವಾಗುತ್ತಿದೆ. ಹಿಂದೂ ಕಾರ್ಯಕ್ರಮ ಆಯೋಜಿಸಲು ಹಲವು ಷರತ್ತುಗಳನ್ನು ಸರ್ಕಾರ ವಿಧಿಸುತ್ತಿದೆ’ ಎಂದರು.

ADVERTISEMENT

‘ನಾನು ಅಧಿಕಾರಕ್ಕೆ ಬರುತ್ತಲೇ ಹಿಂದೂ ಕಾರ್ಯಕರ್ತರ ಮೇಲಿನ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ. ನನ್ನ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಮತ ಯಾಚಿಸಿಲ್ಲ, ಮುಂದೆಯೂ ಕೇಳುವುದಿಲ್ಲ’ ಎಂದರು.

‘ಡಾ. ಅಂಬೇಡ್ಕರ್ ಅವರು ತಮ್ಮ ಪುಸ್ತಕದಲ್ಲಿ ಪಾಪುಲೇಶನ್‌ ಎಕ್ಸ್‌ಚೇಂಜ್‌ ಮಾಡುವಂತೆ ಹೇಳಿದ್ದರು. ಆದರೆ ಅದು ಆಗಲಿಲ್ಲ. ಪಟೇಲ್‌, ಅಂಬೇಡ್ಕರ್,‍ ನೇತಾಜಿ ಅವರಲ್ಲಿ ಒಬ್ಬರು ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಆದರೆ ನೆಹರು ಪ್ರಧಾನಿ ಆದರು’ ಎಂದರು.

‘ಅಂಬೇಡ್ಕರ್‌ ಅವರು ದೇಶದ ನಾಯಕ. ಆದರೆ, ಕೆಲವರು ಅವರನ್ನು ಕೇವಲ ‘ದಲಿತ ನಾಯಕ’ ಎನ್ನುವ ಸ್ಥಿತಿಗೆ ತರುವ ಮೂಲಕ ತಮ್ಮ ಕುಟುಂಬ ರಾಜಕೀಯದಲ್ಲಿ ತೊಡಗಿದ್ದರು. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹನೀಯರ ಪುತ್ಥಳಿಗಳನ್ನು ಪಟ್ಟಣದ ಮಧ್ಯಭಾಗದಲ್ಲಿ ಒಂದೆಡೆಯೇ ಸ್ಥಾಪಿಸೋಣ’ ಎಂದರು.

‘ಕಂದಕೂರ ಕುಟುಂಬದವರು ಶಾಸಕರಾದ ನಂತರ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಮತ್ತು ಡಾ.ಬಾಬೂಜಿ ಮೂರ್ತಿಗಳು ನಿರ್ಮಾಣಗೊಂಡವು. ಗುರುಮಠಕಲ್‌ನಲ್ಲಿ ಸುದೀರ್ಘ ಅಧಿಕಾರದಲ್ಲಿದ್ದವರು ಯಾಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಶಿವಾಜಿ ಮಹಾರಾಜ, ಮಹಾರಾಣ ಪ್ರತಾಪ ಅವರಂತಹ ಹಲವು ಮಹನೀಯರ ಹೋರಾಟದ ಕಾರಣಕ್ಕೆ ಮತ್ತು ನಮ್ಮ ಪೂರ್ವಿಕರ ಧೈರ್ಯದ ಫಲವಾಗಿ ನಾವಿಂದು ಹಿಂದೂಗಳಾಗಿ ಉಳಿದಿದ್ದೇವೆ’ ಎಂದರು.

‘ಎಸ್‌ಐಆರ್ ಮೂಲಕ ಅಕ್ರಮ ವಲಸಿಗ ರೊಹಿಂಗ್ಯಾಗಳನ್ನು ಗುರುತಿಸುವ ಕೆಲಸವಾಗುತ್ತಿದೆ. ಅವರ ಪರವಾಗಿ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಾಡಿದರು. ಆದರೆ, ಕೋರ್ಟ್‌ ಅವರಿಗೆ ಮುಖಭಂಗಮಾಡಿದೆ’ ಎಂದರು.

‘ಸಿಎಂ ಸಿದ್ದರಾಮಯ್ಯ ಅವರಿಗೂ ಮತ್ತು ಸಭಾಪತಿ ಯು.ಟಿ.ಖಾದರ್ ಅವರನ್ನು ನಾನು ಖಾರವಾಗಿಯೇ ಪ್ರಶ್ನಿಸಿದ್ದೇನೆ. ಈಗಲೂ ಮತ್ತೆ ನನ್ನ ವಿರುದ್ಧ ಪ್ರಕರಣ ದಾಖಲಾಗಬಹುದು. ಅದಕ್ಕೆ ಬೆದರುವ ವ್ಯಕ್ತಿ ನಾನಲ್ಲ’ ಎಂದರು.

ಹೈದ್ರಾಬಾದ್‌ನ ಅಮೋಘ ದೇಶಪತಿ ಮಾತನಾಡಿ, ‘ನಮ್ಮ ಪೂರ್ವಿಕರು ಎದೆಕೊಟ್ಟು ಹೋರಾಡಿದ ಮತ್ತು ಸ್ವಾಭಿಮಾನಿಗಳಾಗಿ ಜೀವಿಸಿದ ಕಾರಣ ನಾವಿನ್ನೂ ಉಳಿದಿದ್ದೇವೆ. ನಾವೀಗ ಹಿಂದುತ್ವದ ಘರ್ಜನೆ ಮಾಡದಿದ್ದರೆ ಪಶ್ಚಿಮ ಬಂಗಾಳ, ಕಾಶ್ಮೀರದ ಸ್ಥಿತಿ ನಮಗೂ ಬರಲಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಹಿಂದುತ್ವದ ಕೆಲಸ ಮಾಡುವ ಕಾರ್ಯಕರ್ತರ ಬೆಂಬಲ ಮತ್ತು ಸಹಕಾರಕ್ಕೆ ನಾನೂ ನಿಲ್ಲುವೆ. ನಿಮ್ಮೊಡನೆ ಸತತ ಸಂಪರ್ಕದಲ್ಲಿರುವೆ’ ಎಂದರು.

ಸಂಸದ ಡಾ.ಉಮೇಶ ಜಾದವ್‌ ಸೇರಿದಂತೆ ಹಿಂದೂ ಯುವ ಘರ್ಜನೆ ಸಮಿತಿಯವರು ಉಪಸ್ಥಿತರಿದ್ದರು.

ಈಗಿನ ನಿಮ್ಮ ಸಂಸದ ಎಲ್ಲಿಯಾದರೂ ಕಾಣುವರೇ?. ಸ್ವಪಕ್ಷಿಯರಿಂದಾಗಿ ಡಾ.ಜಾದವ್‌ ಸೋತರು. ಮುಂದಿನ ಚುನಾವಣೆಯಲ್ಲಿ ಅವರು ಮತ್ತೆ ಆಯ್ಕೆಯಾಗುವರು.
– ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.