ವಡಗೇರಾ: ತಾಲ್ಲೂಕಿನ ಮಾಚನೂರು ಗ್ರಾಮದಲ್ಲಿ ಶುಕ್ರವಾರ ಕಾಲುಜಾರಿ ಬಿದ್ದು ಇಬ್ಬರು ಯುವಕರು ನದಿಯಲ್ಲಿ ಕೊಚ್ಚಿಹೋದ ಸ್ಥಳಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಶನಿವಾರ ಬೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶುಕ್ರವಾರ ದನಕ್ಕೆ ನೀರು ಕುಡಿಸಲು ಹೋದಾಗ ಪರಶುರಾಮ ನಾಟೇಕಾರ(ರಾಮು) (17), ಸಿದ್ದಪ್ಪ (21) ಭೀಮಾ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದರು.
‘ಇಬ್ಬರ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ. ಪೋಲೀಸ್ ಹಾಗೂ ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದ್ದಾರೆ. ಶನಿವಾರ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ಆರಂಭ ಮಾಡಿವೆ’ ಎಂದು ಶಾಸಕ ತುನ್ನೂರು ತಿಳಿಸಿದರು.
‘ಭೀಮಾ ನದಿಯಲ್ಲಿ ಮೊಸಳೆಗಳು ಇವೆ ಎಂಬ ಭಯ ಹಾಗೂ ಉದಾಸೀನತೆಯಿಂದ ಶೋಧಕಾರ್ಯ ನಿಲ್ಲಿಸಬಾರದು. ನಿರಂತರವಾಗಿ ಕಾರ್ಯ ಮುಂದುವರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಘಟನಾ ಸ್ಥಳದಿಂದಲೇ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ‘ಸರ್ಕಾರದಿಂದ ಮೃತ ಯುವಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.
ಮೃತ ಕುಟುಂಬದಲ್ಲಿ ಯಾರಾದರೂ ಓದಿದವರು ಇದ್ದರೆ ಅವರು ಕೆಲಸ ಮಾಡಲು ಮುಂದೆ ಬಂದರೆ ‘ಡಿ’ ಗ್ರೂಪ್ ಕೆಲಸವನ್ನು ಗುತ್ತಿಗೆ ಆಧರಾದ ಮೇಲೆ ಕೊಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ, ‘ಮೃತರ ಕುಟುಂಬದಲ್ಲಿ ಓದುವ ಹುಡುಗರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿಸಿ ಕೊಡಲಾಗಿವುದು’ ಎಂದು ತಿಳಿಸಿದರು.
ಶನಿವಾರ ಸಂಜೆ 5 ಗಂಟೆಯಾದರೂ ಯುವಕರ ಸುಳಿವು ಸಿಕ್ಕಿರಲಿಲ್ಲ.
ಎಡಿಸಿ ರಾಮಚಂದ್ರರ, ಡಿಎಸ್‌ಪಿ ಅರುಣಕುಮಾರ ಜಿ. ಕೋಳೂರು, ಎಸಿ ಹಂಪಣ್ಣ ಸಜ್ಜನ್ , ತಹಶೀಲ್ದಾರ್ ಮಂಗಳಾ ಎಂ., ಇಒ ಮಲ್ಲಿಕಾರ್ಜುನ ಸಂಗ್ವಾರ, ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ಮಹೆಬೂಬ ಅಲಿ, ಅಗ್ನಿಶಾಮಕ ದಳದ ಮುಖ್ಯಸ್ಥ ಮನೋಹರ್ ರಾಠೋಡ್ , ಎಸ್‌ಡಿಆರ್‌ಎಫ್ ಅಧಿಕಾರಿ ಅಮರೇಶ ಚವ್ಹಾಣ, ಪಿಡಿಒ ಹಣಮಂತಪ್ಪ ಸ್ಥಳದಲ್ಲಿ ಇದ್ದರು.
‘ಕುಟುಂಬಸ್ಥರಿಗೆ ಗುತ್ತಿಗೆ ಆಧಾರಿತ ‘ಡಿ’ಗ್ರೂಪ್ ಕೆಲಸ ನೀಡಿ’ ಓದುವ ಹುಡುಗರು ಇದ್ದರೆ ಹಾಸ್ಟೆಲ್ ವ್ಯವಸ್ಥೆಯ ಭರವಸೆ
ಭಾವುಕರಾದ ತುನ್ನೂರು ಮೊಮ್ಮಗಗ ಪರಶುರಾಮನ ಸಾವಿನ ಆಘಾತದಿಂದ ಅಜ್ಜ ಸಿದ್ದಪ್ಪ ಕೊರಗುತ್ತಿದ್ದಾರೆ. ನಿದ್ದೆ ಊಟ ಮಾಡದೇ ಅಳುತ್ತಿದ್ದರು. ಆಗ ಶಾಸಕ ತುನ್ನೂರ ಸ್ವಾಂತ್ವನ ಹೇಳಿ ಧೈರ್ಯ ತುಂಬಿದರು. ‘ಯಪ್ಪಾ ನನ್ನ ಮೊಮ್ಮಗ ಇಲ್ಲ’ ಎಂದು ಕಣ್ಣೀರು ಹಾಕಿ ಕಾಲಿಗೆ ನಮಸ್ಕರಿಸುವಾಗ ಶಾಸಕ ತುನ್ನೂರು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.