ADVERTISEMENT

ಏರೋಸ್ಪೇಸ್ ಎಂಜಿನಿಯರಿಂಗ್‌ಗೆ ಬೇಡಿಕೆ ಇದೆಯೇ?: ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಪ್ರದೀಪ್ ಕುಮಾರ್ ವಿ.
Published 23 ಡಿಸೆಂಬರ್ 2024, 0:30 IST
Last Updated 23 ಡಿಸೆಂಬರ್ 2024, 0:30 IST
   

ಏರೋಸ್ಪೇಸ್ ಎಂಜಿನಿಯರಿಂಗ್‌ಗೆ ಬೇಡಿಕೆ ಇದೆಯೇ?

ಕವಿತ, ಬಾಳೆಕುಂದ್ರಿ ಕುರ್ದ್

ನನ್ನ ಮಗನಿಗೆ ಗಣಿತ ಹಾಗೂ ಕಂಪ್ಯೂಟರ್ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿದೆ. ಹಾಗಾಗಿ, ಯಾವ ವಿಭಾಗದಲ್ಲಿ ಉನ್ನತ ಶಿಕ್ಷಣ ಮಾಡಬಹುದು?

ADVERTISEMENT

ಈಗ ಎಂಜಿನಿಯರಿಂಗ್‌ನಲ್ಲಿ 55ಕ್ಕೂ ಹೆಚ್ಚಿನ ವಿಭಾಗಗಳಿವೆ. ಗಣಿತ ಮತ್ತು ಕಂಪ್ಯೂಟರ್ ವಿಷಯಗಳಲ್ಲಿ ಸ್ವಾಭಾವಿಕ ಪ್ರತಿಭೆ ಮತ್ತು ಹೆಚ್ಚಿನ ಆಸಕ್ತಿಯಿದ್ದರೆ, ಎಂಜಿನಿಯರಿಂಗ್ (ಗಣಿತ ಮತ್ತು ಕಂಪ್ಯೂಟಿಂಗ್) ಮಾಡಬಹುದು. ಈ ಕೋರ್ಸ್‌ನಲ್ಲಿ ಮುಂಬರುವ ತಂತ್ರಜ್ಞಾನಗಳ ಕುರಿತ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯಗಳಂಥ ಪ್ರಮುಖವಾದ ವಿಷಯಗಳನ್ನು ಕಲಿಸಲಾಗುತ್ತದೆ. ಪ್ರಸ್ತುತ, ಈ ಕೋರ್ಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಎಂ.ಎಸ್. ರಾಮಯ್ಯವಿಶ್ವವಿದ್ಯಾಲಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಭ್ಯವಿದೆ. ಅಥವಾ, ನಾಲ್ಕು ವರ್ಷದ ಬಿ.ಎಸ್ಸಿ (ಗಣಿತ) ಮಾಡಿ ನೇರವಾಗಿ ಪಿ.ಎಚ್.ಡಿ (ಗಣಿತ) ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ:

ಪ್ರಜ್ವಲ್, ಮೈಸೂರು.

ನಾನು ಎಂಬಿಎ (ಹಣಕಾಸು ನಿರ್ವಹಣೆ) ಮಾಡುತ್ತಿದ್ದು, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದೇ? ಇಲ್ಲದಿದ್ದರೆ, ಹಣಕಾಸು ನಿರ್ವಹಣೆ ಕ್ಷೇತ್ರದಲ್ಲಿನ ಅವಕಾಶಗಳೇನು?

ಎಂಬಿಎ (ಹಣಕಾಸು ನಿರ್ವಹಣೆ) ನಂತರ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ, ಹಣಕಾಸು, ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಬಂಡವಾಳ ಹೂಡಿಕೆ, ಸ್ಟಾಕ್ ಮಾರ್ಕೆಟ್, ಮ್ಯೂಚುಯಲ್ ಫಂಡ್ಸ್ ಇತ್ಯಾದಿ ಸೇರಿದಂತೆ ಅರ್ಥವ್ಯವಸ್ಥೆಯ ಸರ್ಕಾರಿ ಮತ್ತು ಕಾರ್ಪೊರೇಟ್ ಕ್ಷೇತ್ರದ ಎಲ್ಲಾ ಸಂಸ್ಥೆಗಳ ಹಣಕಾಸು ವಿಭಾಗದಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಎಂಬಿಎ ಪದವಿಯ ಜೊತೆಗೆ ನಿಷ್ಠೆ, ಪ್ರಾಮಾಣಿಕತೆ, ಸಂವಹನ, ಅಂತರ್‌ವೈಯಕ್ತಿಕ ಕೌಶಲ, ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಹಣಕಾಸು ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಮೋಕ್ಷಿತ, ಹಾಸನ.

ಸರ್, ನಾನು ಪಿಯುಸಿ ನಂತರ ಏರೋಸ್ಪೇಸ್ ಎಂಜಿನಿಯರಿಂಗ್ ಮಾಡುವ ಆಸೆಯಿದೆ. ಈ ಕ್ಷೇತ್ರಕ್ಕೆ ಬೇಡಿಕೆಯಿದೆಯೇ?

ವಿಮಾನಗಳು, ಹೆಲಿಕಾಪ್ಟರ್‌ಗಳು, ಬಾಹ್ಯಾಕಾಶ ನೌಕೆಗಳು, ಬಾಹ್ಯಾಕಾಶ ನಿಲ್ದಾಣಗಳು, ಉಡಾವಣಾ ವಾಹನಗಳು, ರಾಕೆಟ್‌ಗಳು, ವಾಯುಯಾನ, ಮಿಲಿಟರಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಏರೋಸ್ಪೇಸ್ ಎಂಜಿನಿಯರ್‌ಗಳು ಕಾರ್ಯ ನಿರ್ವಹಿಸಬಹುದು.

ಇನ್ನೂ ಹೆಚ್ಚಿನ ಪರಿಸರಸ್ನೇಹಿ ಇಂಧನಗಳನ್ನು ಬಳಸಬಹುದಾದ ದಕ್ಷ ಎಂಜಿನ್‌ಗಳ ಉತ್ಪಾದನೆ ಮತ್ತು ಬಳಕೆ, ಮುಂತಾದ ಕ್ಷೇತ್ರಗಳಲ್ಲೂ ಅವಕಾಶವಿರುತ್ತದೆ. ಹಾಗಾಗಿ, ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಬೇಡಿಕೆಯನ್ನು ನಿರೀಕ್ಷಿಸಬಹುದು.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ವಿಶ್ಲೇಷಾತ್ಮಕ ಕೌಶಲ, ವಿಮರ್ಶಾತ್ಮಕ ಚಿಂತನೆ, ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಸ್ವಾಭಾವಿಕ ಪ್ರತಿಭೆ ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ಕೃಷ್ಟವಾದ ಫಲಿತಾಂಶವಿರಬೇಕು.

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.