ADVERTISEMENT

ಉದ್ಯೋಗದ ಹುಡುಕಾಟ, ಇನ್ನಿಲ್ಲ ಪರದಾಟ!

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 19:30 IST
Last Updated 7 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌–19 ಹಾಗೂ ಆರ್ಥಿಕತೆ ಕುಸಿತದಿಂದಾಗಿ ಉದ್ಯೋಗ ಕಳೆದುಕೊಂಡವರು ಹತಾಶೆಯಿಂದ ಕೂರುವ ಅವಶ್ಯಕತೆ ಇಲ್ಲ. ಸತತ ಹುಡುಕಾಟ, ಸ್ನೇಹಿತರ ಜೊತೆಗೆ ನಿರಂತರ ಸಂಪರ್ಕ, ಸಾಮಾಜಿಕ ಜಾಲತಾಣಗಳಲ್ಲಿ ಸಮಾನ ಮನಸ್ಕರ ಗ್ರೂಪ್‌ ಸೇರ್ಪಡೆಯಿಂದ ಅವಕಾಶಗಳ ಬಾಗಿಲು ತೆರೆಯಬಹುದು.

ಕಳೆದ ಆರು ತಿಂಗಳಿಂದ ಕೋವಿಡ್‌–19 ಹಾಗೂ ಕುಸಿದ ಆರ್ಥಿಕತೆಯಿಂದಾಗಿ ಉದ್ಯೋಗ ವಲಯದಲ್ಲಿ ಸಮಸ್ಯೆಗಳು ಎದುರಾಗಿವೆ. ಕೆಲಸ ಕಳೆದುಕೊಂಡವರು ಬೇರೆ ಕೆಲಸ ಹುಡುಕಿಕೊಳ್ಳಲು ಪರದಾಡುವುದು, ಹೊಸದಾಗಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವವರು ನೌಕರಿಗಾಗಿ ಅಲೆಯುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಮುಂದೆ ಪರಿಸ್ಥಿತಿ ಸುಧಾರಿಸಬಹುದು, ನಿಮ್ಮ ಅರ್ಹತೆಗೆ, ಕೌಶಲಕ್ಕೆ ಸರಿಯಾದ ನೌಕರಿ ಗಿಟ್ಟಿಸಬಹುದು. ಆದರೆ ಸದ್ಯಕ್ಕೆ ಖಾಲಿ ಕುಳಿತುಬಿಟ್ಟರೆ ಬದುಕಿನ ಬಂಡಿ ಸಾಗಬೇಕಲ್ಲ, ಹೀಗಾಗಿ ಈ ಉದ್ಯೋಗದ ಹುಡುಕಾಟ ಹೇಗೆ ನಿರಂತರವಾಗಿರಬೇಕು ಎಂಬುದರ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ADVERTISEMENT

1.ಅರ್ಜಿ ಹಾಕುವುದನ್ನು ಬಿಡಬೇಡಿ

ಉದ್ಯೋಗ ಕ್ಷೇತ್ರ ಹೇಗೆ ಬಡವಾಗಿದೆ, ಅವಕಾಶಗಳು ಬೆರಳೆಣಿಕೆಯಲ್ಲಿವೆ ಎಂಬುದರ ಬಗ್ಗೆ ಚಿಂತೆ ಬಿಟ್ಟುಬಿಡಿ. ಅದರ ಬಗ್ಗೆಯೇ ಯೋಚಿಸುವುದು, ಮಾತನಾಡುವುದು ಮಾಡುತ್ತ ಹೋದರೆ ಇನ್ನಷ್ಟು ಅಸಹಾಯಕತೆಯ ಕೂಪಕ್ಕೆ ಬೀಳುವ ಸಾಧ್ಯತೆ ಇರುತ್ತದೆಯೇ ಹೊರತು ಉದ್ಯೋಗದ ಹುಡುಕಾಟದಲ್ಲಿ ಯಶಸ್ಸು ಕಾಣುವುದು ಕಷ್ಟ. ಅದರ ಬದಲು ನಿಮ್ಮ ಗಮನವನ್ನು ಕೆಲಸದ ಹುಡುಕಾಟದತ್ತ ಕೇಂದ್ರೀಕರಿಸಿ. ಎಲ್ಲಿ ಅವಕಾಶಗಳಿವೆಯೋ ಅಲ್ಲಿ ಅರ್ಜಿ ಗುಜರಾಯಿಸುತ್ತ ಹೋಗಿ. ಆರ್ಥಿಕತೆ, ಅದರ ಕುಸಿತ ಎಂಬ ಚಿಂತೆಯನ್ನು ಆರ್ಥಿಕ ತಜ್ಞರಿಗೆ ಬಿಟ್ಟುಬಿಡಿ.

2. ಗ್ರೂಪ್‌ ಸೇರಿಕೊಳ್ಳಿ

ಉದ್ಯೋಗದ ಹುಡುಕಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಗ್ರೂಪ್‌ಗೆ ಸೇರಿಕೊಳ್ಳಿ. ಅಲ್ಲಿರುವ ಇತರ ಸದಸ್ಯರ ಜೊತೆ ನಿಮ್ಮ ಅನಿಸಿಕೆ, ಅವಕಾಶಗಳ ಬಗ್ಗೆ ಭಾವನೆಗಳನ್ನು ಹಂಚಿಕೊಳ್ಳಬಹುದು. ಯಾರಿಗಾದರೂ ಉದ್ಯೋಗ ಸಿಕ್ಕು, ಅವರ ಕಂಪನಿಯಲ್ಲೇ ನಿಮಗೊಂದು ಒಳ್ಳೆಯ ಅವಕಾಶ ಸಿಗಬಹುದು.

3. ನಿರಂತರ ಸಂಪರ್ಕದಲ್ಲಿರಿ

ನಿಮಗೆ ಉದ್ಯೋಗದ ಅವಶ್ಯಕತೆಯಿದೆ, ಹುಡುಕಾಟ ನಡೆಸುತ್ತಿದ್ದೀರಿ ಎಂಬುದು ಅವಮಾನವೇನಲ್ಲ. ಬಹುತೇಕ ಮಂದಿಗೆ ನಿಮ್ಮ ಹಾಗೇ ಕೆಲಸದ ಜರೂರಿದೆ. ಹೀಗಾಗಿ ಈ ವಿಷಯವನ್ನು ನಿಮ್ಮ ಸ್ನೇಹಿತರ ಬಳಿ, ಹಿತೈಷಿಗಳ ಬಳಿ, ಮಾಜಿ ಸಹೋದ್ಯೋಗಿಗಳಲ್ಲಿ ಹೇಳಿಕೊಳ್ಳಿ. ನೀವು ಏನು ಕಲಿತಿದ್ದೀರಿ, ಯಾವ ಹೊಸ ಕೌಶಲ ಪಡೆದಿದ್ದೀರಿ, ಆನ್‌ಲೈನ್‌ನಲ್ಲಿ ಯಾವ ಹೊಸ ಕೋರ್ಸ್‌ ಮಾಡಿದ್ದೀರಿ ಎಂಬುದರ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಳ್ಳಿ. ಬೇರೆ ಕಡೆ ಅವಕಾಶಗಳು ಅಥವಾ ಅವರ ಕಂಪನಿಯಲ್ಲೇ ಉದ್ಯೋಗ ಭರ್ತಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದ್ದಾಗ ಅವರು ನಿಮಗೆ ಹೇಳಿಯೇ ಹೇಳುತ್ತಾರೆ.

4. ಕನಸಿನ ಉದ್ಯೋಗದ ಚಿಂತೆ ಬಿಡಿ

ಇಂದಿನ ಪರಿಸ್ಥಿತಿಯಲ್ಲಿ ಸೂಕ್ತವೆನಿಸಿದ ಕೆಲಸಕ್ಕೆ ಸೇರುವುದು, ಹಣ ಗಳಿಸುವುದು, ಬದುಕಿನ ಬಂಡಿ ಸಾಗಿಸುವುದು ಇವುಗಳಿಗೆ ಮಾತ್ರ ಆದ್ಯತೆ ಕೊಡಿ. ನಿಮ್ಮ ಕನಸಿನ ಉದ್ಯೋಗದ ಬೆನ್ನು ಹತ್ತುವುದು ಸದ್ಯಕ್ಕಂತೂ ಸಾಧ್ಯವಿಲ್ಲ. ಯಾವುದೇ ಉದ್ಯೋಗಕ್ಕೆ ಸೇರಿದರೂ ಹೊಂದಿಕೊಳ್ಳಲು ಕೆಲವು ಸಮಯ ಹಿಡಿಯುತ್ತದೆ. ಅದರ ಬಗ್ಗೆ ಲಕ್ಷ್ಯ ಕೊಡಿ. ಆರ್ಥಿಕತೆ ಸರಿ ಹೋದ ಮೇಲೆ ನಿಮ್ಮ ಕನಸಿನ ಉದ್ಯೋಗದ ಕಡೆ ಗಮನ ಹರಿಸಿ.

5. ಖಾಲಿ ಕೂರಬೇಡಿ

ಕೆಲಸ ಸದ್ಯಕ್ಕೆ ಸಿಗದಿದ್ದರೆ ಸುಮ್ಮನೆ ಮನೆಯಲ್ಲಿ ಕೂರಬೇಡಿ. ಉಚಿತವಾಗಿ, ಸ್ವಯಂ ಸೇವಾ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಬಹುದು. ಇದು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ.

6. ಸಕಾರಾತ್ಮಕ ಚಿಂತನೆ ಇರಲಿ

ಈ ಪರಿಸ್ಥಿತಿ ಇನ್ನೂ ಹತ್ತಾರು ವರ್ಷಗಳ ಕಾಲವೇನೂ ಇರುವುದಿಲ್ಲ. ಮುಂದೊಂದು ದಿನ ಹಿಂದೆ ತಿರುಗಿ ನೋಡಿದಾಗ ಅಂತಹ ದುರಿತ ಕಾಲವೇನೂ ಇರಲಿಲ್ಲ ಎಂದು ನಿಮಗೇ ಅನಿಸದಿರದು. ಹೀಗಾಗಿ ಸಕಾರಾತ್ಮಕ ನಿಲುವು ತಾಳಲು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.