ADVERTISEMENT

ಮೋಟಾರ್‌ ಇನ್‌ಸ್ಪೆಕ್ಟರ್‌: ಸಿಗದ ನೇಮಕ ಪತ್ರ

ಫಲಿತಾಂಶಕ್ಕಾಗಿ ಕಾಯುತ್ತಿರುವ‌ ಅಭ್ಯರ್ಥಿಗಳಿಗೆ ವಯೋಮಿತಿ ಆತಂಕ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:05 IST
Last Updated 14 ಮಾರ್ಚ್ 2019, 20:05 IST
KPSC
KPSC   

ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಸಾರಿಗೆ ಇಲಾಖೆಯ ಮೋಟಾರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ (ಗ್ರೂಪ್‌ ಸಿ) ಅರ್ಜಿ ಆಹ್ವಾನಿಸಿ ಮೂರು ವರ್ಷ ಕಳೆದರೂ ಅಭ್ಯರ್ಥಿಗಳಿಗೆ ನೇಮಕಾತಿ ಭಾಗ್ಯ ಇನ್ನೂ ಸಿಕ್ಕಿಲ್ಲ. ನೇಮಕಾತಿ ಜವಾಬ್ದಾರಿ ಹೊತ್ತಿರುವ ಕೆಪಿಎಸ್‌ಸಿ ವಿಳಂಬ ಧೋರಣೆಯಿಂದಾಗಿ ಉದ್ಯೋಗಕ್ಕಾಗಿ ಕಾಯುತ್ತಿರುವ ಆಕಾಂಕ್ಷಿಗಳು ಕಂಗಾಲಾಗಿದ್ದಾರೆ.

ಅಭ್ಯರ್ಥಿಗಳ ವಯೋಮಿತಿ ಮೀರುತ್ತಿರುವ ಪರಿಣಾಮ ಪರೀಕ್ಷೆ ಎದುರಿಸಿ ದಾಖಲಾತಿ ಪರಿಶೀಲನೆಗೆ (ನೇರ ನೇಮಕಾತಿ ಹುದ್ದೆ) ಒಳಪಟ್ಟವರು ಉದ್ಯೋಗ ಕೈ ತಪ್ಪುವ ಭೀತಿಗೊಳಗಾಗಿದ್ದಾರೆ.

ಸಾರಿಗೆ ಇಲಾಖೆ 150ಮೋಟಾರ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ 2016ರ ಫೆ.24ರಂದು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. 2016ರ ಜೂನ್‌ 26ರಂದು ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಅದೇ ವರ್ಷ ಅಕ್ಟೋಬರ್‌ 7ರಂದು ಹಾಗೂ 2017ರ ಜೂನ್‌ 30ರಂದು ಮೊದಲ ಮತ್ತು ಎರಡನೇ ಹಂತದಲ್ಲಿ 504 ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ನಡೆಸಲಾಗಿದೆ. ಕೆಪಿಎಸ್‌ಸಿ ಮತ್ತೆ 2018ರ ಡಿಸೆಂಬರ್‌ 17ರಿಂದ 28ರವರೆಗೂ ಮೂರನೇ ಹಂತದ 1,543 ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಮುಗಿಸಿದೆ. ಮೊದಲೆರಡು ಹಂತದಲ್ಲಿ ಅಭ್ಯರ್ಥಿಗಳು ಆಯ್ಕೆ ಆಗದ ಕಾರಣ, ಮೂರನೇ ಹಂತದಲ್ಲಿ ಉಳಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗಿತ್ತು.

ADVERTISEMENT

‘ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕವೂ ಫಲಿತಾಂಶ ಪ್ರಕಟಿಸಿಲ್ಲ. ಈ ಕುರಿತು ಆಯೋಗದ ಅಧಿಕಾರಿಗಳನ್ನು ವಿಚಾರಿಸಿದರೆ, ಇನ್ನೂ ವೈದ್ಯಕೀಯ ವರದಿ ಬಂದಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಯೋಗಕ್ಕೆ ವರದಿ ಸಲ್ಲಿಸದೆ, ನಮ್ಮ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ’ ಎಂದು ಅಭ್ಯರ್ಥಿಗಳು ದೂರಿದರು.

‘ಇಲಾಖೆಯಲ್ಲಿ 11ವರ್ಷದಿಂದ ಇಷ್ಟೂ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಅರ್ಜಿ ಆಹ್ವಾನಿಸಿದ ಬಳಿಕ ಒಂದು ವರ್ಷದಲ್ಲಿ ಮುಗಿಸಬೇಕಾದ ನೇಮಕಾತಿ ಪ್ರಕ್ರಿಯೆಯನ್ನು ಕುಂಟು ನೆಪಗಳನ್ನು ಹೇಳುತ್ತಾ ಮೂರು ವರ್ಷ ಮುಗಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಕಾರಣ’ ಎಂದು ಆರೋಪಿಸಿದರು.

ಎಸಿಬಿ ತನಿಖೆ
ಉತ್ತರ ಕರ್ನಾಟಕದ ಅಭ್ಯರ್ಥಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಲಾಗಿದೆ ಎಂದು ಆಕಾಂಕ್ಷಿಯೊಬ್ಬರು ಎಸಿಬಿಗೆ ದೂರು ಕೊಟ್ಟಿದ್ದರು.‌ ಇದನ್ನು ತನಿಖೆ ನಡೆಸಿದ ಪೊಲೀಸರು, ಅದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಫಲಿತಾಂಶ ಪ್ರಕಟಿಸಲು ತಡ ಮಾಡುತ್ತಿರುವುದು ಏಕೆ? ಎಂದು ಅಭ್ಯರ್ಥಿಯೊಬ್ಬರು ಪ್ರಶ್ನಿಸಿದರು.

1:2ರ ಅನುಪಾತದಲ್ಲಿ ಆಯ್ಕೆ
ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) (ಗ್ರೂಪ್‌ ಎ) 11 ಹುದ್ದೆಗಳಿಗೆ ಮತ್ತು 150ಮೋಟಾರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಒಂದೇ ಬಾರಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆರ್‌ಟಿಒಗೆ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ನೇಮಕಾತಿ ಪೂರ್ಣಗೊಳಿಸಿದ್ದು, ನಿರೀಕ್ಷಕ ಹುದ್ದೆಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಿರೀಕ್ಷರ ಹುದ್ದೆಗೆ 1:2ರ ಅನುಪಾತದಲ್ಲಿ 3 ಹಂತದಲ್ಲಿ ದಾಖಲಾತಿ ಪರಿಶೀಲನೆಗೆ ಕರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.