ADVERTISEMENT

ಸಹಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಮಾರ್ಗದರ್ಶಿ

ಪ್ರಾಥಮಿಕ ಶಾಲಾ ಸಹಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ

ಕೆ.ಎಚ್.ಮಂಜುನಾಥ್
Published 23 ಮಾರ್ಚ್ 2022, 19:30 IST
Last Updated 23 ಮಾರ್ಚ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಾಥಮಿಕ ಶಾಲಾ ಸಹ ಶಿಕ್ಷಕರ ನೇಮಕಾತಿಗಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಈ ನೇಮಕಾತಿ ನಡೆಯಲಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 22 ಕೊನೆ ದಿನ.ಮೇ 21 ಮತ್ತು 22ರಂದು ಪರೀಕ್ಷೆ ನಡೆಯಲಿದೆ. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯ.

ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಪತ್ರಿಕೆಗಳಿವೆ. ಅವುಗಳು ಹೀಗಿವೆ;

ಪತ್ರಿಕೆ-1(ಸಾಮಾನ್ಯ ಪತ್ರಿಕೆ)

ADVERTISEMENT

ಈ ಪತ್ರಿಕೆಯಲ್ಲಿ 150 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ 1 ಅಂಕ. ಈ ಪತ್ರಿಕೆಯಲ್ಲಿ ಏಳು ವಿಷಯಗಳಿವೆ. ಅದರಲ್ಲಿ, ಕನ್ನಡ ಭಾಷೆ ಕುರಿತು 25, ಇಂಗ್ಲಿಷ್‌ ಕುರಿತು 25 ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 25 ಪ್ರಶ್ನೆಗಳಿರುತ್ತವೆ. ಮಗುವಿನ ಬೆಳವಣಿಗೆ ಮತ್ತು ಬೋಧನಾ ಸಾಮರ್ಥ್ಯದ 50 ಪ್ರಶ್ನೆಗಳು, ಆರೋಗ್ಯ ಮತ್ತು ಮೌಲಿಕ ಶಿಕ್ಷಣಕ್ಕೆ ಸಂಬಂಧಿಸಿದ

15 ಪ್ರಶ್ನೆಗಳು ಹಾಗೂ ಕಂಪ್ಯೂಟರ್ ಸಾಕ್ಷರತೆಗೆ ಸಂಬಂಧಿಸಿದ 10 ಪ್ರಶ್ನೆಗಳು ಇರುತ್ತವೆ.

ಸಾಮಾನ್ಯ ಕನ್ನಡ:ಈ ಪತ್ರಿಕೆಯಲ್ಲಿ ಕನ್ನಡ ವರ್ಣಮಾಲೆ, ದ್ವಿರುಕ್ತಿ, ಜೋಡು ನುಡಿ, ನುಡಿಗಟ್ಟು, ಅನ್ಯಭಾಷೆ ಪದಗಳು, ಗ್ರಾಂಥಿಕ ರೂಪ, ವಾಕ್ಯದ ಪ್ರಕಾರಗಳು, ಚಿಹ್ನೆಗಳು, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಸಾಮಾನ್ಯ ಇಂಗ್ಲಿಷ್:ಈ ಪತ್ರಿಕೆಯಲ್ಲಿ Passage, Question Tag, pronunciation, Article, Dectionary Order, Prefics, ಬಿಟ್ಟ ಸ್ಥಳ ಭರ್ತಿ ಮಾಡುವುದು ಸೇರಿದಂತೆ ವಿವಿಧ ಪ್ರಶ್ನೆಗಳಿರುತ್ತವೆ.

ಸಾಮಾನ್ಯ ಜ್ಞಾನ:ಇದರಲ್ಲಿ ಪ್ರಚಲಿತ ವಿದ್ಯಮಾನಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿದ್ಯಮಾನಗಳು/ ಘಟನಾವಳಿಗಳ ಕುರಿತ ಪ್ರಶ್ನೆಗಳಿರುತ್ತವೆ.

ಮಗುವಿನ ಬೆಳವಣಿಗೆ ಹಾಗೂ ಬೋಧನಾ ಶಾಸ್ತ್ರ:ಈ ವಿಭಾಗದಲ್ಲಿ ಕಲಿಕಾ ಸಿದ್ಧಾಂತಗಳು, ಪಿಯಾಜೆಯವರ ಜ್ಞಾನಾತ್ಮಕ ವಿಕಾಸ ಸಿದ್ಧಾಂತ, ಮಕ್ಕಳ ಶಿಕ್ಷಣ, ವ್ಯಕ್ತಿತ್ವ ಪರೀಕ್ಷೆಗಳು, ಸಮಗ್ರ ಮೌಲ್ಯಮಾಪನ, ಬಾಲ್ಯಾವಸ್ಥೆ, ವ್ಯಕ್ತಿತ್ವ, ದ್ವಂದ್ವಗಳು/ ಘರ್ಷಣೆಗಳು... ಇಂಥ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಆರೋಗ್ಯ ಮತ್ತು ಮೌಲ್ಯ ಶಿಕ್ಷಣ: ಈ ವಿಭಾಗದಲ್ಲಿಮಾನವೀಯ ಮೌಲ್ಯಗಳು, ದೇಹದ ಆರೋಗ್ಯ, ಪ್ರಮುಖ ರೋಗಗಳು, ರೋಗದ ಲಕ್ಷಣಗಳು, ಆರೋಗ್ಯ ಮತ್ತು ಮೌಲಿಕ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಕಂಪ್ಯೂಟರ್ ಸಾಕ್ಷರತೆ:ಇದರಲ್ಲಿ ಕಂಪ್ಯೂಟರ್‌ ಬಿಡಿಭಾಗಗಳಾದ ಸಿಪಿಯು, ಪ್ರಮುಖ ಇನ್‌ಪುಟ್ ಮತ್ತು ಔಟ್ ಪುಟ್ ಸಾಧನಗಳು, ನುಡಿ ತಂತ್ರಾಂಶ, ಎಂಎಸ್ ವರ್ಡ್, ಶಾರ್ಟ್ ಕಟ್ ಕೀ ಕುರಿತ ಪ್ರಶ್ನೆಗಳಿರುತ್ತವೆ.

ಪತ್ರಿಕೆ-2

ಈ ಪತ್ರಿಕೆಯಲ್ಲಿ ಸಾಮರ್ಥ್ಯ ಅಥವಾ ಸಾಮಾನ್ಯ ಜ್ಞಾನಕ್ಕೆ (ಜನರಲ್ ನಾಲೆಜ್) ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಇದು 150 ಅಂಕಗಳ ಪ್ರಶ್ನೆಪತ್ರಿಕೆ. ಸಮಾಜ ವಿಜ್ಞಾನ, ಗಣಿತ, ಜೀವ ವಿಜ್ಞಾನ ವಿಷಯಗಳ ಪ್ರಶ್ನೆಗಳಿರುತ್ತವೆ. ಆಂಗ್ಲ ಭಾಷೆಯ ಶಿಕ್ಷಕರಿಗೆ (ಅಭ್ಯರ್ಥಿಗಳಿಗೆ) ಇದು ಮಹತ್ವದ್ದು. ಇದರಲ್ಲಿ ಶೇ 45ರಷ್ಟು ಅಂಕಗಳನ್ನು ಗಳಿಸಲೇಬೇಕಾಗುತ್ತದೆ. ಈ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸಲಾಗುವುದು.

ಎರಡನೇ ಪತ್ರಿಕೆಯನ್ನು ಯಾವ ಬೋಧನಾ ಮಾಧ್ಯಮದ ಹುದ್ದೆಗೆ ಆಯ್ಕೆ ಮಾಡಿಕೊಂಡಿರುತ್ತಾರೋ ಅದೇ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕು ಅಥವಾ ಇಂಗಿಷ್ ಭಾಷೆಯಲ್ಲಿ ಉತ್ತರಿಸಬೇಕು. ಹೀಗಾಗಿ ಪತ್ರಿಕೆ 2 ಅನ್ನು ಯಾವ ಮಾಧ್ಯಮದಲ್ಲಿ ಉತ್ತರಿಸುತ್ತೀರಿ ಎಂಬುದನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.

ಪತ್ರಿಕೆ-3

ಇದು ಭಾಷಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಇದರಲ್ಲಿ ಒಟ್ಟು 100 ಅಂಕಗಳ ಪ್ರಶ್ನೆಗಳಿರುತ್ತವೆ. ಎರಡು ಗಂಟೆಗಳ ಅವಧಿಯ ಪರೀಕ್ಷೆ. ಈ ಪತ್ರಿಕೆಯಲ್ಲಿ ಶೇ 50ರಷ್ಟು ಅಂಕಗಳನ್ನು ಗಳಿಸಲೇಬೇಕು. ಅಭ್ಯರ್ಥಿಗಳು 2ನೇ ಪತ್ರಿಕೆಯಲ್ಲಿ ಯಾವ ಮಾಧ್ಯಮ ಎಂದು ನಮೂದಿಸಿರುತ್ತಾರೋ ಆ ಮಾಧ್ಯಮ ಭಾಷೆಯ ಭಾಷಾ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿವರಣಾತ್ಮಕ ಪರೀಕ್ಷೆ ಇರುತ್ತದೆ. ಉದಾ: ಕನ್ನಡ ಮಾಧ್ಯಮದ ಶಿಕ್ಷಕರಿಗಾದರೆ ಕನ್ನಡ ಭಾಷೆ, ವ್ಯಾಕರಣದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಕನ್ನಡ ಭಾಷಾ ಸಾಮರ್ಥ್ಯದ ಈ ಪತ್ರಿಕೆಯಲ್ಲಿ ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ನುಡಿಗಟ್ಟುಗಳು, ಗಾದೆಗಳನ್ನು ಪೂರ್ಣಗೊಳಿಸಿ, ಅನ್ಯಭಾಷೆಪದಗಳು, ಕನ್ನಡ ವ್ಯಾಕರಣ, ಸ್ವಂತ ವಾಕ್ಯದಲ್ಲಿ ಬಳಸಿ, ಹೇಳಿಕೆಗೆ ಸೂಕ್ತ ಪದ ಆಯ್ಕೆ ಮಾಡಿ (ಒನ್ ವರ್ಡ್ ಸಬ್‌ಟ್ಯೂಟ್), ಪದ ಬಿಡಿಸಿ ವಿಭಕ್ತಿ ಪ್ರತ್ಯಯ ಗುರುತಿಸಿ, ವಾಕ್ಯಗಳ ವಚನ ಬದಲಿಸುವುದು.. ಇತ್ಯಾದಿಗಳಿರುತ್ತವೆ. ಅಲ್ಲದೇ, 4 ಗದ್ಯ ಭಾಗದ ಒಟ್ಟು 20 ಪ್ರಶ್ನೆಗಳು ಹಾಗೂ 5 ಅಂಕದ 1 ಟಿಪ್ಪಣಿ ಬರೆಯುವ ಪ್ರಶ್ನೆ ಇರುತ್ತದೆ. ಗಾದೆಯ ಮಹತ್ವ ವಿವರಿಸುವುದು, ಸಾರಾಂಶ ಬರೆಯುವುದು, ಚಿತ್ರ ನೋಡಿ ಅಭಿಪ್ರಾಯ ಬರೆಯುವುದು ಹಾಗೂ ಪತ್ರ ಲೇಖನಕ್ಕೆ ತಲಾ 5 ಅಂಕಗಳನ್ನು ಇಡಲಾಗಿದೆ.

ಗಮನಿಸಿ: ಆಂಗ್ಲ ಭಾಷಾ ಶಿಕ್ಷಕರ ಆಯ್ಕೆಯಲ್ಲಿ ಮೊದಲ ಮತ್ತು ಎರಡನೆಯ ಪತ್ರಿಕೆಯ ಅಂಕಗಳನ್ನು ಮಾತ್ರ ಪರಿಗಣಿಸಿದರೆ ಉಳಿದ ವಿಷಯಗಳಾದ ಗಣಿತ, ಜೀವ ವಿಜ್ಞಾನ, ಸಮಾಜ ವಿಜ್ಞಾನದ ಶಿಕ್ಷಕರಿಗೆ ಪತ್ರಿಕೆ 1, 2 ಮತ್ತು 3 ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುತ್ತದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ, ವಯೋಮಿತಿ, ಮೀಸಲಾತಿ, ಪ್ರಶ್ನೆ ಪತ್ರಿಕೆಗಳ ಕುರಿತ ವಿವರಕ್ಕೆ www.schooleducation.kar.nic.in ವೆಬ್‌ಸೈಟ್ ವಿಳಾಸಕ್ಕೆ ಸಂಪರ್ಕಿಸಿ.

ಈ ಕೆಳಗಿನ ಅಂಕಗಳನ್ನು ಪರಿಗಣಸಿ ಮೆರಿಟ್ ನಿರ್ಧರಿಸಲಾಗುತ್ತದೆ

* ಟಿ.ಇ.ಟಿ ಅಂಕಗಳು ಶೇ 20

* ಪದವಿಯ ಅಂಕಗಳು ಶೇ 20

* ಬಿ.ಇಡಿ/ ಡಿ.ಇಡಿ ಅಂಕಗಳು ಶೇ 20

* ಈ ಸ್ಪರ್ಧಾತ್ಮ ಪರೀಕ್ಷೆ ಅಂಕಗಳು ಶೇ 50

––––––––

ಯಾವ ವಿಷಯದ ಶಿಕ್ಷಕರು? ಎಷ್ಟು ಹುದ್ದೆಗಳು?

ವಿಷಯ ಶಿಕ್ಷಕರು ಹುದ್ದೆಗಳು

ಆಂಗ್ಲ ಭಾಷೆ – 1500

ಗಣಿತ ಮತ್ತು ವಿಜ್ಞಾನ – 6500

ಜೀವ ವಿಜ್ಞಾನ – 2000

ಸಮಾಜ ಶಾಸ್ತ್ರ 5000

ಒಟ್ಟು 15 ಸಾವಿರ ಶಿಕ್ಷಕರು

(ಮುಂದಿನ ವಾರ: ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಏನೇನು ಓದಬೇಕು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.