ADVERTISEMENT

SSC Exam: ಸಾಮಾನ್ಯ ಅಧ್ಯಯನಕ್ಕೆ ಒತ್ತು ನೀಡಿ

ಎಸ್‌ಎಸ್‌ಸಿ ಪರೀಕ್ಷೆ; ಹಂತ–1ರ ಪರೀಕ್ಷಾ ಪೂರ್ವ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 20:15 IST
Last Updated 5 ಜನವರಿ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ (ಸ್ಟಾಫ್ ಸಲೆಕ್ಷನ್‌ ಕಮಿಷನ್‌– ಎಸ್ಎಸ್‌ಸಿ) 36 ವಿವಿಧ ವೃಂದಗಳಲ್ಲಿ(ಇಲಾಖೆಗಳಲ್ಲಿ) ಖಾಲಿ ಇರುವ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ.

ವಿವಿಧ ಹುದ್ದೆಗಳ ವರ್ಗೀಕರಣಕ್ಕೆ ಅನುಸಾರವಾಗಿ ಒಟ್ಟು ನಾಲ್ಕು ಹಂತದ ಪರೀಕ್ಷೆಗಳಿರುತ್ತವೆ. ಮೊದಲ ಹಂತದ(ಹಂತ–1) ಪರೀಕ್ಷೆ ಎಲ್ಲರಿಗೂ ಕಡ್ಡಾಯವಾಗಿದ್ದು, ವರ್ಗವಾರು ನಿಗದಿಪಡಿಸಿದ ಅಂಕವನ್ನು ಪಡೆದವರು ಎರಡನೇ ಹಂತ (ಹಂತ– 2)ದ ಪರೀಕ್ಷೆಗೆ ಅರ್ಹರಾಗುತ್ತಾರೆ.

ಹಂತ–1ರ ಸಿದ್ಧತೆ ಹೀಗಿರಲಿ: ಮೊದಲ ಹಂತದ ಪರೀಕ್ಷೆ ಇದೇ ಏಪ್ರಿಲ್‌ 22ರಲ್ಲಿ ನಡೆಯುವ ಸಾಧ್ಯತೆಯಿದೆ. ಅಂದರೆ ಇನ್ನೂ 100 ರಿಂದ 120 ದಿನಗಳು ಬಾಕಿ ಇವೆ. ಪೂರ್ವ ಸಿದ್ಧತೆಗೆ ಅವಕಾಶವಿದೆ. ಸಮಯ ವ್ಯರ್ಥ ಮಾಡದೆ ಪ್ರತಿ ದಿನ ಕನಿಷ್ಠ 8 ರಿಂದ 10 ಗಂಟೆ ಅಭ್ಯಾಸ ಮಾಡಿದರೆ, ಪೂರ್ಣ ಸಿದ್ಧತೆಗೆ ಕನಿಷ್ಠ 100 ರಿಂದ 120 ಗಂಟೆ ಅವಕಾಶ ದೊರೆಯುತ್ತದೆ. ಅಧ್ಯಯನ ಸುಗಮವಾಗಿ ಸಾಗುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ.

ADVERTISEMENT

ಹಂತ – 1 ರ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಬಹುಆಯ್ಕೆ ಮಾದರಿಯಲ್ಲಿರುತ್ತದೆ. ಅದು 60 ನಿಮಿಷದ ಕಂಪ್ಯೂಟರ್ ಆಧಾರಿತ ಪರೀಕ್ಷೆ. 100 ಅಂಕದ ಪ್ರಶ್ನೆಪತ್ರಿಕೆಯಿರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕದಂತೆ 200 ಅಂಕಗಳು ನಿಗದಿಯಾಗಿರುತ್ತದೆ. ಪ್ರಶ್ನೆಪತ್ರಿಕೆಯು ಹಿಂದಿ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.5 ಋಣಾತ್ಮಕ(ನೆಗೆಟಿವ್‌) ಅಂಕವಿರುತ್ತದೆ.

ಈ ಹಂತ ಪರೀಕ್ಷೆಯಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಮೊದಲ ವಿಭಾಗದಲ್ಲಿ ಸಾಮಾನ್ಯ ಬೌದ್ಧಿಕ ಶಕ್ತಿ ಮತ್ತು ತಾರ್ಕಿಕತೆಗೆ(ಪರ್ಸನಲ್‌ ಇಂಟೆಲಿಜೆನ್ಸಿ ಅಂಡ್ ರೀಸನಿಂಗ್‌) ಸಂಬಂಧಿಸಿದ್ದಾಗಿರುತ್ತದೆ. ಈ ವಿಭಾಗದಲ್ಲಿ 25 ಪ್ರಶ್ನೆಗಳಿರುತ್ತವೆ. ಸಾಮಾನ್ಯ ಬೌದ್ಧಿಕ ಶಕ್ತಿ ಮತ್ತು ತಾರ್ಕಿಕತೆಯಲ್ಲಿ ಸಮಸ್ಯೆ ಬಿಡಿಸುವಿಕೆ, ಸಂಬಂಧ ಜೋಡಣೆ, ನಿರ್ಧಾರ ತೆಗೆದುಕೊಳ್ಳುವಿಕೆ, ವಿಭಾಗೀಕರಣ, ಅವಲೋಕನ, ಸ್ಮರಣಾ ಸಾಮರ್ಥ್ಯ, ಅಂಕಿ-ಸಂಖ್ಯೆ ಸಮಯ ನಿರ್ವಹಣೆ ಮತ್ತಿತರ ಬೌದ್ಧಿಕ ಕೃತಿಮತ್ತೆಯನ್ನು ಪರೀಕ್ಷಿಸುತ್ತದೆ. ಇದು ಹೆಚ್ಚಿನ ಅಭ್ಯಾಸವನ್ನು ಕೇಳುತ್ತದೆ. ಈ ಹಿಂದೆ ವಿವರಿಸಿದಂತೆ ಒಟ್ಟು 1000 ರಿಂದ 1200 ಗಂಟೆಯ ಪೂರ್ವ ಸಿದ್ದತಾ ಸಮಯವಿದ್ದರೆ
ಶೇ 30 ರಿಂದ 35 ರಷ್ಟು ಸಮಯವನ್ನು ಬೌದ್ಧಿಕ ಶಕ್ತಿಗೆ ಸಂಬಂಧಿಸಿದ ಪ್ರಶ್ನೆಗಳ ಅಭ್ಯಾಸಕ್ಕಾಗಿ ಮೀಸಲಿಡಬೇಕು.

ಇಂಗ್ಲಿಷ್ ಹಾಗೂ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಕೆಲವೊಮ್ಮೆ ನಿಖರವಾದ ಉತ್ತರವನ್ನು ನಿರ್ಧರಿಸುವುದು ಕಷ್ಟ. ಆದರೆ ಸಾಮಾನ್ಯ ಬೌದ್ಧಿಕ ಶಕ್ತಿ ಮತ್ತು ತಾರ್ಕಿಕತೆ ವಿಭಾಗದಲ್ಲಿ
ಶೇ 100ರಷ್ಟು ನಿಖರವಾದ ಉತ್ತರ ಹುಡುಕಲು ಸಾಧ್ಯವಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು.

ಸಾಮಾನ್ಯ ಜ್ಞಾನ:ಸಾಮಾನ್ಯ ಜ್ಞಾನ ಎಂಬುದು ಬ್ರಹ್ಮಾಂಡದಂತೆ. ಅದು ಎಂದಿಗೂ ಪರಿಪೂರ್ಣಗೊಳಿಸಲಾಗದ ವಸ್ತು ಮತ್ತು ವಿಷಯ. ಹಾಗೆಂದು ಈ ಪರೀಕ್ಷೆಯಲ್ಲಿ ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆಯ ‍ಮಟ್ಟದ ಪ್ರಶ್ನೆಗಳನ್ನು ಕೇಳುವುದಿಲ್ಲ. ಬದಲಿಗೆ ಒಬ್ಬ ಪ್ರತಿಭಾವಂತ ಪದವಿಧರ ಹೊಂದಿರುವ ಸಾಮಾನ್ಯಜ್ಞಾನವನ್ನು ಪರೀಕ್ಷಿಸುವಂತಹ ಪ್ರಶ್ನೆಗಳಿರುತ್ತವೆ.

ಪ್ರಚಲಿತ ವಿದ್ಯಮಾನಗಳ ಕುರಿತು ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪ್ರತಿದಿನ ವೃತ್ತ ಪತ್ರಿಕೆಗಳನ್ನು ಕಡ್ಡಾಯವಾಗಿ ಓದಬೇಕು. ಪತ್ರಿಕೆಗಳಲ್ಲಿ ರಾಷ್ಟ್ರೀಯ– ಅಂತರರಾಷ್ಟ್ರೀಯ ಸುದ್ದಿ, ಕ್ರೀಡೆ, ವ್ಯಾಪಾರ–ವ್ಯವಹಾರದ ಸುದ್ದಿಗಳಿಗೆ ಹೆಚ್ಚಿನ ಗಮನಕೊಡಿ. ನಿತ್ಯ 2 ರಿಂದ 3 ಗಂಟೆ ಸಾಮಾನ್ಯ ಅಧ್ಯಯನಕ್ಕೆ ಮೀಸಲಿಡಬೇಕು. ಅದರಲ್ಲಿ 30 ರಿಂದ 40 ನಿಮಿಷ ಪ‍್ರಚಲಿತ ಸುದ್ದಿಗಳನ್ನು ಅಧ್ಯಯನ ಮಾಡುತ್ತಾ ಟಿಪ್ಪಣಿ ಮಾಡಿಕೊಳ್ಳಬೇಕು. ಸಿಬಿಎಸ್‌ಸಿ, ಐಸಿಐಸಿಐ, ಐಜಿಸಿಎಸ್ ಪರೀಕ್ಷಾ ಮಂಡಳಿಗಳ 8 ರಿಂದ 10 ನೇ ತರಗತಿ ಪಠ್ಯ ಪುಸ್ತಕಗಳನ್ನು ಓದಬೇಕು.

ನೆನಪಿಡಿ; ಈ ವಿಭಾಗದಲ್ಲಿ ಋಣಾತ್ಮಕ(ನೆಗೆಟಿವ್‌) ಅಂಕವಿರುವ ಕಾರಣ, ಊಹೆಯ ಆಧಾರದ ಮೇಲೆ ಪ್ರಶ್ನೆಗಳಿಗೆ ಉತ್ತರಿಸದೇ, ಸ್ಪಷ್ಟವಾಗಿ ಮಾಹಿತಿ ಗೊತ್ತಿರುವ ಪ್ರಶ್ನೆಗಳಿಗಷ್ಟೇ ಉತ್ತರಿಸಬೇಕು.

ಪರಿಮಾಣಾತ್ಮಕ ಸಾಮರ್ಥ್ಯ: ಅಂಕಿ-ಸಂಖ್ಯೆಯ ಪರಿಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ ಪರಿಮಾಣಾತ್ಮಕ ಸಾಮರ್ಥ್ಯ ವಿಭಾಗದಲ್ಲಿ 25 ಪ್ರಶ್ನೆಗಳನ್ನು ಕೇಳಲಾಗುತ್ತದೆ. 10ನೇ ತರಗತಿ ಮಟ್ಟದ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಮೂಲ ಗಣಿತದ ಲಾಭ ಮತ್ತು ನಷ್ಟ, ಬಡ್ಡಿ ಶ್ರೇಣಿಕರಣ ರಿಯಾಯಿತಿ ಮೊದಲಾದ ವಿಷಯಗಳ ಬಗ್ಗೆ ಅಭ್ಯಾಸ ಮಾಡಬೇಕು. ಮೂಲಗಣಿತದ ಬಗ್ಗೆ ಹೆಚ್ಚಿನ ಜ್ಞಾನವಿರುವ ಪ್ರತಿದಿನ ಪಠ್ಯಕ್ರಮಾನುಸಾರವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನಿಟ್ಟು ಕೊಂಡು ಅಭ್ಯಾಸ ಮಾಡಬೇಕು.

***

ಇಂಗ್ಲಿಷ್‌ ಗ್ರಹಿಕೆ ಮುಖ್ಯ

ಇಂಗ್ಲಿಷ್‌ ಭಾಷಾ ವಿಷಯದ ಸಾಮಾನ್ಯ ಜ್ಞಾನದ ಬಗ್ಗೆ 25 ಪ್ರಶ್ನೆಗಳಿರುತ್ತವೆ. ಸಾಮಾನ್ಯವಾಗಿ ಮಾತನಾಡುವ ಭಾಷೆಗೂ ಆಡಳಿತಾತ್ಮಕ ಭಾಷೆಗೂ ವ್ಯತ್ಯಾಸವಿರುತ್ತದೆ. ಆಡಳಿತಾತ್ಮಕ ಭಾಷೆಯಲ್ಲಿ ಪದ ಹಾಗೂ ವಾಕ್ಯ ರಚನೆಯ ಕ್ರಮ ಬದ್ಧತೆ ಇರುತ್ತದೆ. ಲಿಂಗ, ವಚನ, ವಿಭಕ್ತಿ, ಧಾತುಕಾಲದ ಬಳಕೆ ಸನ್ನಿವೇಶಕ್ಕೆ ಸೂಕ್ತವಾಗಿರುತ್ತದೆ. ಆದ್ದರಿಂದ ನಾಲ್ಕಾರು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬೇಕು.

(ಮುಂದಿನ ವಾರ: ಅಧ್ಯಯನ ಸಾಮಗ್ರಿ, ಎರಡು ಮತ್ತು ಮೂರನೇ ಹಂತದ ಪರೀಕ್ಷೆ ಸಿದ್ಧತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.