ADVERTISEMENT

UPSC Toppers: ‘ಪರಿಶ್ರಮ, ಬದ್ಧತೆಯೇ ಮುಖ್ಯ'- ಅಪೂರ್ವಾ ಬಾಸೂರ ಸಂದರ್ಶನ

ಅಪೂರ್ವಾ ಬಾಸೂರ ಸಂದರ್ಶನ

ಪ್ರಮೋದ
Published 13 ಜುಲೈ 2022, 21:45 IST
Last Updated 13 ಜುಲೈ 2022, 21:45 IST
ಅಪೂರ್ವಾ ಬಾಸೂರ
ಅಪೂರ್ವಾ ಬಾಸೂರ   

ಕೊಪ್ಪಳ ಜಿಲ್ಲೆ ಗಂಗಾವತಿಯ ಅಪೂರ್ವಾ ಬಾಸೂರ, ದಂತವೈದ್ಯಕೀಯ ಪದವೀಧರೆ. ಈ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ 191ನೇ ರ‍್ಯಾಂಕ್ ಗಳಿಸಿದ್ದಾರೆ. ಸಾರ್ವಜನಿಕ ಆಡಳಿತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಅವರು ಎರಡನೇ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.ಪರೀಕ್ಷೆಯ ಯಶಸ್ಸಿನ ಹಿಂದಿನ ಅಧ್ಯಯನದ ಪಯಣದ ಕುರಿತು ‘ಸ್ಪರ್ಧಾವಾಣಿ‘ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

lಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೀರಿ, ಅಭಿನಂದನೆಗಳು. ನಿಮ್ಮ ಮುಂದಿನ ಹೆಜ್ಜೆ?

ಹಲವು ವರ್ಷಗಳ ಕಾಲ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಈಗ ಸಿಕ್ಕಿರುವ ಅವಕಾಶ ಬಹಳ ದೊಡ್ಡದು. ಸಾಧ್ಯವಾದಷ್ಟು ಮಹಿಳೆಯರ ಏಳ್ಗೆಗಾಗಿ ಕೆಲಸ ಮಾಡುವ ಆಸೆ ಇದೆ.

ADVERTISEMENT

lಯುಪಿಎಸ್‌ಸಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳನ್ನು ಎಷ್ಟನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದಿರಿ?

ಎರಡನೇ ಪ್ರಯತ್ನದಲ್ಲೇ ಪೂರ್ಣಗೊಳಿಸಿದೆ. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣವಾಗಲು ಸಾಧ್ಯವಾಗಿರಲಿಲ್ಲ.

lಮೊದಲ ಪ್ರಯತ್ನ ಫಲಿಸದಿರಲು ಕಾರಣವೇನು? ಆ ನ್ಯೂನತೆಗಳನ್ನು ಹೇಗೆ ಸರಿಪಡಿಸಿಕೊಂಡಿರಿ?

ಮೊದಲ ಪ್ರಯತ್ನದಲ್ಲಿ ಎರಡನೇ ಪತ್ರಿಕೆಯಲ್ಲಿ ಅರ್ಹತೆ ಪಡೆಯಲಾಗಲಿಲ್ಲ. ಎರಡನೇ ಬಾರಿ ಪರೀಕ್ಷೆ ಬರೆದಾಗ ಮೊದಲ ಸಲ ಮಾಡಿದ ತಪ್ಪುಗಳ ಅವಲೋಕನ ಮಾಡಿಕೊಂಡೆ. ಎರಡನೇ ಪತ್ರಿಕೆಗೆ ನಿತ್ಯ ಎರಡು ಗಂಟೆ ಹೆಚ್ಚು ಸಮಯ ಕೊಟ್ಟು ಓದಿದೆ. ಇದರಿಂದ ಎರಡನೇ ಅವಕಾಶದಲ್ಲಿ ಪ್ರಿಲಿಮ್ಸ್‌ ಮತ್ತು ಮುಖ್ಯಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದೆ.

lನೀವು ಬಳಸುತ್ತಿದ್ದ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ

ನಾನು ಓದಿದ ವಿಧಾನ,ಮಾಡಿಕೊಂಡಸಿದ್ಧತೆ, ಅಧ್ಯಯನ ಪರಿಕರಗಳು ಬಹುಶಃ ಎಲ್ಲರಿಗೂ ಅನ್ವಯ ವಾಗಲಿಕ್ಕಿಲ್ಲ. ದಿನಪೂರ್ತಿ ಓದುವುದಷ್ಟೇ ನನ್ನ ಕೆಲಸವಾಗಿತ್ತು. ಓದಿದ ವಿಷಯವನ್ನು ಹಲವು ಬಾರಿ ಪುನರಾವರ್ತನೆ ಮಾಡುತ್ತಿದೆ. ಇಂಗ್ಲಿಷ್‌ ಹಾಗೂ ಕನ್ನಡ ಪತ್ರಿಕೆಗಳನ್ನು ಓದುತ್ತಿದೆ. ಅದು ಸಂದರ್ಶನ ಸಮಯದಲ್ಲಿ ನೆರವಾಯಿತು. ಏನೇ ಓದಿದರೂ ಅದನ್ನು ಟಿಪ್ಪಣೆ ಮಾಡಿಟ್ಟುಕೊಳ್ಳುತ್ತಿದ್ದೆ.

l ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚುವರಿ ಕೋಚಿಂಗ್‌ ಅಗತ್ಯವಿದೆಯೇ ? ನೀವು ಕೋಚಿಂಗ್‌ಗೆ ಹೋಗಿ‌ದ್ದಿರಾ? ಯಾವ ರೀತಿ ಕೋಚಿಂಗ್ ನೆರವಾಗುತ್ತದೆ?

ನವದೆಹಲಿಯಲ್ಲಿ ಎರಡು ವರ್ಷ ತರಬೇತಿ ಪಡೆದಿದ್ದೇನೆ. ತರಬೇತಿ ಬೇಕು, ಬೇಡ ಎನ್ನುವುದುಅವರವರ ಓದಿನ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ. ಹೇಗೆ ಓದಬೇಕು, ಏನು ಓದಬೇಕು ಮತ್ತು ಯಾವುದನ್ನು ಓದಬಾರದು ಎನ್ನುವುದನ್ನು ಕೋಚಿಂಗ್‌ ಕೇಂದ್ರಗಳು ಸ್ಪಷ್ಟವಾಗಿ ತಿಳಿಸಿ ಕೊಡುತ್ತವೆ. ಇದರಿಂದ ನಮ್ಮ ಸಮಯವೂ ಉಳಿತಾಯವಾಗುತ್ತದೆ.

lಎಷ್ಟು ಸಮಯದಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಿ?

ಒಂಬತ್ತನೇ ತರಗತಿಯಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಬೇಕೆಂದು ನಿರ್ಧಾರ ಮಾಡಿದ್ದೆ. ಈ ಪರೀಕ್ಷೆಗಾಗಿ 2019ರಿಂದಲೇ ತಯಾರಿ ಆರಂಭಿಸಿದ್ದೆ. ನನ್ನ ಅನುಭವದ ಪ್ರಕಾರ, ಪ್ರೌಢಶಾಲೆ ಹಂತದಲ್ಲಿದ್ದಾಗ ತಯಾರಿ ಆರಂಭಿಸುವುದು ಉತ್ತಮ.

lನಿತ್ಯ ಎಷ್ಟು ಗಂಟೆ ಓದು ಅಗತ್ಯ?

ಕೆಲವರು ನಿತ್ಯ 16 ರಿಂದ 18 ತಾಸು ಓದಬೇಕು ಎಂದು ಸಲಹೆ ನೀಡುತ್ತಾರೆ. ಇಷ್ಟೊಂದು ದೀರ್ಘ ಅವಧಿಯ ಓದು ವರ್ಷಾನುಗಟ್ಟಲೆ ಸಾಧ್ಯ ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ಆದ್ದರಿಂದ ಸರಿಯಾಗಿ ಊಟ, ನಿದ್ದೆ, ವಿಶ್ರಾಂತಿಗೆ ಆದ್ಯತೆ ಕೊಟ್ಟು ಓದಬೇಕು. ಆಗ ಓದಿದ ವಿಷಯ ಹೆಚ್ಚು ಮನದಟ್ಟಾಗುತ್ತದೆ.

lಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ?

ಕೆಲಸ ಅಥವಾ ಸಾಧನೆಯಾಗಲಿ ಅದನ್ನು ಪೂರ್ಣಗೊಳಿಸಲು ಕಠಿಣ ಪರಿಶ್ರಮ ಮತ್ತು ಬದ್ಧತೆ ತುಂಬಾ ಮುಖ್ಯ. ಮುಖ್ಯವಾಗಿ ಸವಾಲುಗಳನ್ನು ಎದುರಿಸುವ ಗುಣ ಬೆಳೆಸಿಕೊಳ್ಳಬೇಕು. ಯುಪಿಎಸ್‌ಸಿ ಸವಾಲು ಕೂಡ ಇದರಿಂದ ಹೊರತಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.