ADVERTISEMENT

ನೀವೂ ಆಗಬಹುದು ಐಸ್‌ಕ್ರೀಮ್‌ ಟೇಸ್ಟರ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:30 IST
Last Updated 29 ಅಕ್ಟೋಬರ್ 2019, 19:30 IST
Young happy man eating his cake in candy shopBusinessman in a candy shop
Young happy man eating his cake in candy shopBusinessman in a candy shop   

ಸಾಮಾನ್ಯವಾಗಿ ನಮಗೆ ಯಾವುದೋ ಒಂದು ತಿನಿಸಿನ ಮೇಲೆ ವಿಶೇಷ ಒಲವಿರುತ್ತದೆ. ಅದರಲ್ಲೂ ಈಗಿನ ಮಕ್ಕಳು ತಿಂಡಿ–ತಿನಿಸುಗಳ ವಿಶೇಷತೆಯನ್ನು ಕಂಡುಹಿಡಿಯುವುದರಲ್ಲಿ ನಿಸ್ಸೀಮರು. ತಾವು ಇಷ್ಟ‍ಪಡುವ ತಿಂಡಿಯಲ್ಲಿ ಎಷ್ಟು ಬಗೆಯ ಫ್ಲೇವರ್‌ಗಳಿವೆ, ಅದರ ರುಚಿಗೆ ಕಾರಣವೇನು ಹಾಗೂ ಅದರ ಬಣ್ಣ, ವಿನ್ಯಾಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವರಗಳನ್ನು ಮಕ್ಕಳು ತಿಳಿದಿರುತ್ತಾರೆ. ‘ತಿನ್ನುವುದು ಮಾತ್ರ ಗೊತ್ತು, ಬೇರೆ ಏನೂ ಗೊತ್ತಿಲ್ಲ’ ಎಂದು ಮಕ್ಕಳನ್ನು ಹಂಗಿಸುವ ಬದಲು ಅವರಲ್ಲಿರುವ ಫುಡ್‌ ಟೇಸ್ಟಿಂಗ್ ಕಲೆಯನ್ನು ಬೆನ್ನು ತಟ್ಟಿ ಪೋಷಕರು ಪ್ರೋತ್ಸಾಹಿಸಬೇಕಿದೆ.

ಯಾಕೆಂದರೆ ತಿನ್ನುವ ಕಲೆಯೂ ನಿಮ್ಮ ಮಗುವಿಗೆ ಉದ್ಯೋಗ ಒದಗಿಸಬಲ್ಲದು ಎಂದರೆ ನೀವು ನಂಬಲೇಬೇಕು. ಅದುವೇ ಟೇಸ್ಟರ್ ವೃತ್ತಿ. ಆಹಾರದ ರುಚಿ ನೋಡಿ ಗುಣಮಟ್ಟವನ್ನು ತಿಳಿಸುವ ಕೆಲಸವಿದು. ಅದರಲ್ಲಿ ಐಸ್‌ಕ್ರೀಮ್ ಟೇಸ್ಟರ್‌ ವೃತ್ತಿ ಕೂಡ ಒಂದು. ಎಲ್ಲರ ಬಾಯಲ್ಲೂ ನೀರೂರಿಸುವಂತೆ ಮಾಡುವ ಐಸ್‌ಕ್ರೀಮ್‌ ಟೇಸ್ಟರ್‌ಗಳಿಗೆ ಡಿಮ್ಯಾಂಡ್‌ ಹೆಚ್ಚು. ನಿಮಗೆ ಬಗೆ ಬಗೆಯ ಐಸ್‌ಕ್ರೀಮ್‌ ಟೇಸ್ಟ್ ನೋಡುವುದರಲ್ಲಿ ಹೆಚ್ಚಿನ ಒಲವಿದ್ದರೆ ನಿಮ್ಮ ಮುಂದಿನ ತಯಾರಿ ಹೀಗಿರಲಿ.

ಉಚಿತವಾಗಿ ಐಸ್‌ಕ್ರೀಮ್ ಸವಿದು, ಅದರ ಗುಣಮಟ್ಟ ಹಾಗೂ ರುಚಿ, ವಿನ್ಯಾಸ, ಪರಿಮಳ, ಬಣ್ಣವನ್ನು ನಿರ್ಣಯಿಸಿ ಅದಕ್ಕೆ ಹಣ ಪಡೆಯುವ ಈ ವೃತ್ತಿಯನ್ನು‘ತಂಪಿನ ವೃತ್ತಿ’ ಎಂದೂ ಹೇಳಬಹುದು. ಭಿನ್ನ ವಿಭಿನ್ನ ಅಭಿರುಚಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅದಕ್ಕೆಂದೇ ಇರುವ ವಿಶೇಷ ಕೋರ್ಸ್‌ಗಳಿಗೆ ಸೇರಬಹುದು.

ADVERTISEMENT

ಕೌಶಲ ಮತ್ತು ಅರ್ಹತೆಗಳು
ಮೊದಲು ಐಸ್‌ಕ್ರೀಮ್‌ಗೆ ಬಳಸುವ ಅಗತ್ಯ ವಸ್ತುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ವಿವೇಚನೆಯಿಂದ ಗುಣಮಟ್ಟ ಗುರುತಿಸುವ ಹಾಗೂ ಆರೋಗ್ಯಕರ ಆಹಾರ, ಪರಿಮಳದ ಸೂಕ್ಷ್ಮ ವ್ಯತ್ಯಾಸಗಳನ್ನು ವಸ್ತು ನಿಷ್ಠವಾಗಿಟ್ಟುಕೊಂಡು ರುಚಿಯನ್ನು ಗುರುತಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್, ಸ್ಟೀಲ್‌ ಹಾಗೂ ಇತರ ಪಾತ್ರೆಗಳಲ್ಲಿ ತಯಾರಿಸುವ ಐಸ್‌ಕ್ರೀಮ್‌ಗಳ ವ್ಯತ್ಯಾಸಗಳನ್ನು ಹಾಗೂ ಅದರ ರುಚಿ, ಪರಿಮಳದ ಬದಲಾವಣೆಗಳನ್ನು ತಿಳಿಯುವ ಜಾಣ್ಮೆ ಬಹಳ ಮುಖ್ಯ.

ಐಸ್‌ಕ್ರೀಮ್‌ ಟೇಸ್ಟ್‌ ಮಾಡುವುದು ಮಾತ್ರವಲ್ಲ ಅದಕ್ಕೆ ಬಳಸುವ ಪದಾರ್ಥಗಳ ಗುಣಮಟ್ಟ, ಪರಿಮಳ, ಬಾಳಿಕೆಯನ್ನು ಪರೀಕ್ಷಿಸಬೇಕು. ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ಹಾಗೂ ಆಕರ್ಷಕ ವಿನ್ಯಾಸಗಳನ್ನು ಪರಿಚಯಿಸುವ ಕೌಶಲವೂ ಅಗತ್ಯ. ಉತ್ಪನ್ನಗಳನ್ನು ನಿರ್ಣಯಿಸುವ ಕೌಶಲ ಹೊಂದಿದ್ದರೆ ಐಸ್‌ಕ್ರೀಮ್‌ ಕಂಪನಿಗಳಲ್ಲಿ ಮಾರ್ಕೆಟಿಂಗ್‌ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಬಹುದು. ದೇಶ– ವಿದೇಶಗಳ ವಿವಿಧ ರುಚಿಯ ಐಸ್‌ಕ್ರೀಮ್‌ಗಳ ತಿಳಿವಳಿಕೆಯೂ ಅಗತ್ಯ.

ಕೆಲಸ ಪಡೆಯುವುದು ಹೇಗೆ?
ಆಹಾರ ವಿಜ್ಞಾನ (ಡೇರಿ), ಉತ್ಪನ್ನ ಅಭಿವೃದ್ಧಿಗಳಿಗೆ ಸಂಬಂಧಿಸಿದ ಪದವಿ ಪಡೆದು, ಮಾರ್ಕೆಟಿಂಗ್ ಕೋರ್ಸ್‌ ಸೇರಿಕೊಳ್ಳಬಹುದು. ಹೆಚ್ಚು ಜನಪ್ರಿಯವಾಗಿರುವ ಐಸ್‌ಕ್ರೀಮ್‌ ಪಾರ್ಲರ್‌ ಅಥವಾ ಕಂಪನಿಗಳಲ್ಲಿ ನಿಮ್ಮ ಕೌಶಲ ಹೆಚ್ಚಿಸಿಕೊಳ್ಳಲು ಕಾರ್ಯ ನಿರ್ವಹಿಸಬಹುದು. ನಿಮ್ಮ ವೃತ್ತಿ ಬದ್ಧತೆ ಹಾಗೂ ಕಾರ್ಯ ವೈಖರಿ ಚುರುಕಾಗಿದ್ದರೆ ಕಂಪನಿಗಳಲ್ಲಿಯೇ ಕೆಲಸಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಬ್ಲಾಗ್‌, ಟ್ವಿಟರ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನೀವು ರುಚಿ ನೋಡಿದ ಐಸ್‌ಕ್ರೀಮ್‌ನ ಬಗ್ಗೆ ಬರೆದು, ಫೋಟೊ ಸಮೇತ ಅಪ್‌ಲೋಡ್ ಮಾಡಬಹುದು. ಇದರಿಂದ ನಿಮ್ಮ ವೃತ್ತಿಯ ಬೆಳವಣಿಗೆಗೆ ಸಹಾಯವಾಗುತ್ತದೆ.

ನಗರಗಳಲ್ಲಿ ನಡೆಯುವ ಆಹಾರ ಮೇಳಗಳಿಗೆ ಭೇಟಿ ನೀಡಿ. ಅಲ್ಲಿರುವ ವಿವಿಧ ಬಗೆಯ ಐಸ್‌ಕ್ರೀಮ್‌ಗಳನ್ನು ಸೇವಿಸಿ ಪರೀಕ್ಷಿಸಿ, ಮಾಹಿತಿ ಪಡೆದು ನಿಮ್ಮನ್ನು ನೀವು ಪರಿಚಯಿಸಿಕೊಳ್ಳಬಹುದು. ಜತೆಗೆ ಐಸ್‌ಕ್ರೀಮ್‌ ಕಂಪನಿಗಳ ಸಂಪರ್ಕಗಳನ್ನು ಹೆಚ್ಚಿಸಿಕೊಳ್ಳಬಹುದು. ಇದು ನಿಮ್ಮ ವೃತ್ತಿಗೆ ಸಹಾಯಕಾರಿ. ಈ ವೃತ್ತಿಗೆ ದೇಶ-ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.