ADVERTISEMENT

ಪಿಯುಸಿ 2018ರ ಫಲಿತಾಂಶ: ಉತ್ತೀರ್ಣ ಪ್ರಮಾಣ ಉತ್ತಮ

ಪಿಯು ಫಲಿತಾಂಶ ಶೇ 59.5ರಷ್ಟು ತೇರ್ಗಡೆ l ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನಕಲಾ ವಿಭಾಗದಲ್ಲಿ ಬಳ್ಳಾರಿಯ ‘ಇಂದೂ’ ಕಾಲೇಜಿಗೆ ಮೊದಲ 3 ಸ್ಥಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 3:54 IST
Last Updated 15 ಏಪ್ರಿಲ್ 2019, 3:54 IST
   

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಸೋಮವಾರ (ಏ.30) ಪ್ರಕಟವಾಗಿದ್ದು, ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಚಿಕ್ಕೋಡಿ ಕೊನೆಯ ಸ್ಥಾನದಲ್ಲಿದೆ.

ಒಟ್ಟಾರೆ ಶೇಕಡಾ 59.56ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿಗಿಂತ ಶೇ 7ರಷ್ಟು ಹೆಚ್ಚಳವಾಗಿದೆ. ಉತ್ತೀರ್ಣ ಪ್ರಮಾಣ 2016ರಲ್ಲಿ ಶೇ 57.2ರಷ್ಟಿತ್ತು. ಕಳೆದ ವರ್ಷ 52.38ಕ್ಕೆ ಕುಸಿದಿತ್ತು. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಎರಡನೇ ಸ್ಥಾನದಲ್ಲಿದೆ. ಕೊಡಗು ಮೂರು ಹಾಗೂ ಉತ್ತರ ಕನ್ನಡ ನಾಲ್ಕನೇ ಸ್ಥಾನ ಗಳಿಸಿವೆ. 2016ರಲ್ಲಿ ದ.ಕನ್ನಡ ಅಗ್ರಪಟ್ಟದಲ್ಲಿತ್ತು.

ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಒಂಬತ್ತು ವಿದ್ಯಾರ್ಥಿಗಳ ಪೈಕಿ 7ರಲ್ಲಿ ಬಾಲಕಿಯರೇ ಇದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನ ‘ಇಂದೂ ಕಾಲೇಜಿ’ನ ಮೂವರು ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

ADVERTISEMENT

ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಮಾಧ್ಯಮ ಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ ದರು. ಮೂರಕ್ಕಿಂತ ಹೆಚ್ಚು ಬಾರಿ ಶೂನ್ಯ ಫಲಿತಾಂಶ ಬಂದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದೂ ಎಚ್ಚರಿಸಿದರು. ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 59.95 ಹಾಗೂ ನಗರ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ 59.45ರಷ್ಟಿದೆ.

ಜೂನ್‌ 8ರಿಂದ ಪೂರಕ ಪರೀಕ್ಷೆ

ಪೂರಕ ಪರೀಕ್ಷೆಯನ್ನು ಜೂನ್‌ 8ರಿಂದ 20ರ ವರೆಗೆ ನಡೆಸಲಾಗುತ್ತದೆ ಎಂದು ಸಿ.ಶಿಖಾ ತಿಳಿಸಿದರು.

ಮೇ 15ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ–1ರ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದವರು ಒಂದು ವಿಷಯಕ್ಕೆ ₹140, ಎರಡು ವಿಷಯಕ್ಕೆ ₹270, ಮೂರು ಅಥವಾ ಹೆಚ್ಚಿನ ವಿಷಯಕ್ಕೆ ₹400 ಪರೀಕ್ಷಾ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ–1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಅಂಕಪಟ್ಟಿ ಶುಲ್ಕವಾಗಿ ₹50 ಕಟ್ಟಬೇಕು.

ಎಲ್ಲಾ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್‌ www.pue.kar.nic.in ಸಂಪರ್ಕಿಸಬಹುದು.

ಮೇ ಅಂತ್ಯದೊಳಗೆ ಕಾಲೇಜಿಗೆ ಅಂಕಪಟ್ಟಿ

*ಅಭ್ಯರ್ಥಿಗಳ ಅಂಕಪಟ್ಟಿಯ‌ನ್ನು ಆಯಾ ಕಾಲೇಜುಗಳಿಗೆ ಮೇ ಅಂತ್ಯದೊಳಗೆ ಕಳುಹಿಸಲಾಗುತ್ತದೆ.

*ತೇರ್ಗಡೆಯಾದ ವಿದ್ಯಾರ್ಥಿಗಳ ಭಾವಚಿತ್ರದಲ್ಲಿರುವ ನ್ಯೂನತೆ ಸರಿಪಡಿಸಲು ಮೇ 2ರಿಂದ 10ರ ವರೆಗೆ ಇಲಾಖಾ ಆನ್‌ಲೈನ್‌ ಪೋರ್ಟಲ್ ತೆರೆಯಲಾಗುವುದು.

*ಸ್ಕ್ಯಾನಿಂಗ್‌ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕ ಪಾವತಿಸಲು ಆನ್‌ಲೈನ್‌ ಪಾವತಿ ಸೌಲಭ್ಯ ಕಲ್ಪಿಸಲಾಗಿದೆ.

*ಉತ್ತರಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಮೇ 7ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ₹530 ಪಾವತಿಸಬೇಕು.

ಅಂಕಗಳ ಮರು ಎಣಿಕೆಗೆ ಶುಲ್ಕ ಇರುವುದಿಲ್ಲ.

ಉತ್ತರ ಪತ್ರಿಕೆಯ ಮರುಮೌಲ್ಯಮಾಪನ: ಮರುಮೌಲ್ಯ‍ಮಾಪನ ಹಾಗೂ ಮರು ಎಣಿಕೆಗೆ ಮೇ 14ರೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ವಿಷಯಕ್ಕೆ ಮರುಮೌಲ್ಯಮಾಪನದ ಶುಲ್ಕ ₹1670. ಅನುತ್ತೀರ್ಣ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬಾರದು.

ಫಲಿತಾಂಶ ತಿರಸ್ಕರಣಾ ಶುಲ್ಕ: ಪ್ರಥಮ ಬಾರಿಗೆ ಒಂದು ವಿಷಯಕ್ಕೆ ₹175 ಹಾಗೂ ದ್ವಿತೀಯ ಮತ್ತು ಅಂತಿಮ ಬಾರಿಗೆ ಒಂದು ವಿಷಯಕ್ಕೆ ₹350.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.