ADVERTISEMENT

ಎಐ: ತಾರ್ಕಿಕ ಚಿಂತನೆಗೆ ಅವಕಾಶ

ವಿಜಯ್‌ಕುಮಾರ್ ಎಚ್.ಕೆ.
Published 13 ಆಗಸ್ಟ್ 2019, 19:30 IST
Last Updated 13 ಆಗಸ್ಟ್ 2019, 19:30 IST
AI (artificial intelligence) concept.
AI (artificial intelligence) concept.   

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ) ಇತ್ತೀಚೆಗೆ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಅಭ್ಯಾಸ ಕ್ರಮ. ಇದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ಇಂಡಸ್ಟ್ರಿಯಲ್ ರೋಬೊಟಿಕ್ಸ್ ಎಂಜಿನಿಯರಿಂಗ್, ಮೆಕಾಟ್ರಾನಿಕ್ಸ್, ಇನ್‌ಫಾರ್ಮೇಶನ್ ಸೈನ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಈ ಮೊದಲು ಐಚ್ಛಿಕ ವಿಷಯವಾಗಿತ್ತು. ಇತ್ತೀಚೆಗೆ ಆ ವಿಷಯದಲ್ಲೇ ಪರಿಣತಿಯನ್ನು ನೀಡುವ ಎಂಜಿನಿಯರಿಂಗ್ ಕೋರ್ಸ್‌ಗಳು ಬಂದಿವೆ.ಐಟಿ ಉದ್ಯಮದಲ್ಲಿ ಕೂಡ ಇದು ಬಹಳಷ್ಟು ಅವಕಾಶಗಳ ನಿರೀಕ್ಷೆಯನ್ನು ಹುಟ್ಟಿಸುತ್ತಿದೆ.

ಸಮಸ್ಯೆ ಬಿಡಿಸುವ ಕೌಶಲ

ಕೆಲವೊಮ್ಮೆ ನಮ್ಮ ಪ್ರವೃತ್ತಿಗಳು ವೃತ್ತಿ ಭೂಮಿಕೆಯನ್ನು ನಿರ್ಧರಿಸುತ್ತವೆ. ನಮ್ಮ ಪ್ರವೃತ್ತಿಗೆ ತಕ್ಕಂತೆ ಶಿಕ್ಷಣವೂ ಕೈಜೋಡಿಸಿದರೆ ಯಶಸ್ಸು ಖಂಡಿತ. ಉದಾಹರಣೆಗೆ: ನಿಮಲ್ಲಿ ಬೀಜಗಣಿತ ಮತ್ತು ಅಂಕಗಣಿತ ಲೆಕ್ಕಗಳನ್ನು ಅಥವಾ ಗಣಿತದ ಯಾವುದೇ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಪರಿಣತಿ ಇದೆಯೇ? ಅಂತಹದ್ದೊಂದು ತಾರ್ಕಿಕ ಮನಃಸ್ಥಿತಿ ಇದ್ದರೆ ಅಥವಾ ಸಂಶೋಧನಾ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕೆಂಬ ಇಚ್ಛೆ ಇದ್ದರೆ ಕೃತಕ ಬುದ್ಧಿಮತ್ತೆ ಖಂಡಿತವಾಗಿಯೂ ನಿಮಗೆ ಹಿಡಿಸುವಂತಹ ಕ್ಷೇತ್ರ. ಕಂಪ್ಯೂಟರ್ ಕೌಶಲ ಇಲ್ಲ, ಪ್ರೋಗ್ರಾಮಿಂಗ್ ಕಲ್ಪನೆ ಇಲ್ಲ ಅಂತ ಬೇಸರ ಬೇಡ, ಅವೆಲ್ಲವೂ ನಿಮ್ಮ ಪ್ರಯಾಣದ ಊರುಗೋಲುಗಳಷ್ಟೆ. ತಾರ್ಕಿಕ ಆಲೋಚನೆ (ಲಾಜಿಕಲ್ ಥಿಂಕಿಂಗ್) ಇದ್ದರೆ ಸಾಕು, ಯಾವುದೇ ಪದವೀಧರರಾದರೂ ಆರಾಮವಾಗಿ ಈ ವಿಷಯವನ್ನು ಆಯ್ದುಕೊಳ್ಳಬಹುದು.

ADVERTISEMENT

ಯಂತ್ರಗಳೂ ನಮ್ಮಂತೆ ಯೋಚಿಸಲು ಸಾಧ್ಯವೇ ಎಂಬ ಪ್ರಶ್ನೆ ಏಳಬಹುದು. ಇಲ್ಲಿ ಯಂತ್ರಗಳಿಗೂ ಭಾವನೆಯ ಉತ್ತೇಜನ ನೀಡುವುದೇ ಪ್ರೋಗ್ರಾಮ್‌. ಕೃತಕ ಬುದ್ಧಿಮತ್ತೆ ಪ್ರೋಗ್ರಾಮರ್ ಆಗಿ ನೀವು ಮಾಡಬೇಕಾದ ಕೆಲಸವೂ ಅದೇ. ನಿಮ್ಮೊಳಗಿನ ತಾರ್ಕಿಕ ಚಿಂತನೆಯನ್ನು ಕಂಪ್ಯೂಟರ್ ಅಲ್ಗಾರಿದಂ (ಗಣಕಪದ್ಧತಿ) ಮೂಲಕ ಯಂತ್ರದೊಳಗೆ, ಯಂತ್ರಮಾನದೊಳಗೆ ಶೇಖರಣೆ ಮಾಡುವುದು. ಎಲ್ಲವೂ ಸ್ವಯಂಚಾಲಿತವಾಗುತ್ತಿರುವಾಗ ಈ ಕ್ಷೇತ್ರಕ್ಕೆ ಉಜ್ವಲ ಭವಿಷ್ಯ ಇದೆ ಎಂಬುದಂತೂ ಹೌದು.

ಕಂಪ್ಯೂಟರ್‌ನಲ್ಲಿ ಬಿ.ಎಸ್‌ಸಿ. / ಬಿ.ಇ. ಯಲ್ಲಿ ಪದವಿ, ಎಂ.ಎಸ್‌ಸಿ./ ಎಂ.ಎಸ್./ ಎಂ.ಟೆಕ್‌.ನಲ್ಲಿ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ ಹೆಚ್ಚಿನ ಆದ್ಯತೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪದವೀಧರರು ವಿಎಲ್ಎಸ್‌ಐ ಪೋಗ್ರಾಂ ಕೋರ್ಸ್ ಮಾಡಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು.ಅಲ್ಪಾವಧಿ ಕೋರ್ಸ್‌ಗಳೂ ಇವೆ.

ಕೃತಕ ಬುದ್ಧಿಮತ್ತೆ ತಂತ್ರಾಂಶ ಸಾಕಷ್ಟು ಸಂಶೋಧನಾ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ಉದಾ: ಮುಂಬಯಿಯ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್, ಡಿಆರ್‌ಡಿಒ, ಸಿಡ್ಯಾಕ್, ಐಐಎಂ, ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಹಾಗೂ ಮತ್ತಿತರ ಸಂಶೋಧನಾ ಸಂಸ್ಥೆಗಳು.

ಕಂಪ್ಯೂಟರ್ ಅಥವಾ ಮೊಬೈಲ್ ಆಧಾರಿತ ಗೇಮ್‌ಗಳು, ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್‌ಗಳ ಅಭಿವೃದ್ಧಿ, ಲ್ಯಾಂಗ್ವೇಜ್ ಡಿಟೆಕ್ಷನ್ ಮಷಿನ್, ಕಂಪ್ಯೂಟರ್ ವಿಷನ್, ಎಕ್ಸ್‌ಪರ್ಟ್ ಸಿಸ್ಟಂ ಮತ್ತು ರೋಬೊಟಿಕ್ಸ್ ಕ್ಷೇತ್ರಗಳಲ್ಲಿ ಸಂಶೋಧನೆಗೂ ಸಾಕಷ್ಟು ಅವಕಾಶಗಳಿವೆ.

ಕಲಿಕಾ ವಿಷಯ ಮತ್ತು ಪ್ರೋಗ್ರಾಮಿಂಗ್

ಸರ್ಚ್ ಎಂಜಿನ್ ಅಭಿವೃದ್ಧಿ, ವೆಬ್ ಕ್ರಾಲರ್, ವೆಬ್ ಇಂಡೆಕ್ಸ್ ಮತ್ತು ಪೇಜ್‌ಗೆ ಬಳಕೆಯಾಗುವ ಪ್ರೋಗ್ರಾಂಗಳೇ ಬೇರೆ. ಹಾಗೆಯೇ ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್‌, ಅಮೆಝಾನ್ ರೆಕಮೆಂಡೇಷನ್ ಎಂಜಿನ್ ಅಭಿವೃದ್ಧಿಗೆ ಬಳಕೆಯಾಗುವ ಪ್ರೋಗ್ರಾಂ ಬೇರೆ. ಉದಾಹರಣೆ: ಮ್ಯಾತ್ಲ್ಯಾಬ್, ಆಕ್ಟೇವ್ಮೊದಲಾದವು.

ಕೆಲಸದಲ್ಲಿನ ನಿಮ್ಮ ಪಾತ್ರ

ರೋಬೊಟಿಕ್ ಸೈಂಟಿಸ್ಟ್‌, ಇಂಟೆಲಿಜೆನ್ಸ್ ಪ್ರೋಗ್ರಾಮರ್, ರೋಬೊಟಿಕ್ ಎಂಜಿನಿಯರ್ ಆಗಿ ಉದ್ಯೋಗ ನಿರ್ವಹಿಸಬಹುದು.ಎಐ ಪ್ರೋಗ್ರಾಮರ್ ಆಗುವುದಕ್ಕೆ ಮುನ್ನ ನಿಮ್ಮಲ್ಲಿ ಒಂದಿಷ್ಟು ಅರ್ಹತೆ ಇರಬೇಕು. ಸ್ವಲ್ಪವಾದರೂ ಕಂಪ್ಯೂಟರ್ ತಂತ್ರಜ್ಞಾನದ ಪರಿಚಯ ಇರಬೇಕು. ಮುಖ್ಯವಾಗಿ ತಾತ್ವಿಕವಾಗಿ ಆಲೋಚಿಸಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇರಬೇಕು. ಪಝಲ್ ಸಾಲ್ವಿಂಗ್ ಸಾಮರ್ಥ್ಯ ಬೆಳೆಸಿಕೊಳ್ಳಿ. ಇದರಿಂದ ಅಲ್ಗಾರಿದಂ ಕುರಿತ ತಿಳಿವಳಿಕೆ ಅಷ್ಟೇನೂ ಕಷ್ಟ ಎನಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.