ADVERTISEMENT

ಕೈಬರಹದ ಕರಾಮತ್ತು

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 21:59 IST
Last Updated 19 ಜನವರಿ 2025, 21:59 IST
   

ಆಧುನಿಕ ಯುಗದಲ್ಲಿ ಗ್ಯಾಜೆಟ್‌ಗಳ ಮೇಲಿನ ಅವಲಂಬನೆಯಿಂದಾಗಿ ಕೈಬರಹದ ಕುರಿತ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಕೈಬರಹವು ತನ್ನದೇ ಪ್ರಮುಖ ಪಾತ್ರ ವಹಿಸುತ್ತದೆ. ಸುಂದರ ಕೈಬರಹವು ಅಂಕಗಳಿಕೆಗೂ ಸಹಾಯ ಮಾಡುತ್ತದೆ. ಅಷ್ಟೆ ಅಲ್ಲದೇ ಕೈಬರಹವು ಕಲಿಕೆ ಮತ್ತು ಮಿದುಳಿನ ಅಭಿವೃದ್ಧಿಗೆ ನೆರವಾಗುವ ಒಂದು ಕೌಶಲವಾಗಿದೆ

ಕೈಬರಹ ಮತ್ತು ಟೈಪಿಂಗ್‌ನಲ್ಲಿ ಪದಗಳನ್ನು ರಚಿಸುವಾಗ ಕೈ ಮತ್ತು ಬೆರಳುಗಳ ಚಲನೆಯನ್ನು ಒಳಗೊಂಡಿರುತ್ತದೆ. ಆದರೆ ಟೈಪಿಂಗ್‌ಗಿಂತಲೂ ಕೈಬರಹದಿಂದ ಆಗುವ ಪ್ರಯೋಜನಗಳು ಹೆಚ್ಚು. ಅಕ್ಷರಗಳ ಆಕಾರವನ್ನು ರಚಿಸುವಾಗ ಬೆರಳು ಮತ್ತು ಮಿದುಳಿನ ನಡುವೆ ಹಲವು ಹೊಂದಾಣಿಕೆಗಳು ನಡೆಯುತ್ತವೆ. ಬೆರಳು ಬೇರೆ ಬೇರೆ ತರಹದ ಚಲನೆಗೆ ಒಳಗಾಗುತ್ತವೆ. ಇದರಿಂದ ಮಿದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎನ್ನುತ್ತಾರೆ ವಾಂಡರ್ಬಿಲ್ಟ್ ವಿಶ್ವವಿದ್ಯಾಲಯದ ನರವಿಜ್ಞಾನಿ ಸೋಫಿಯಾ ವಿನ್ಸಿ-ಬೂಹರ್.   

ಆದರೆ ಟೈಪ್ ಮಾಡುವಾಗ ಇಷ್ಟೆಲ್ಲ ಸಂಕೀರ್ಣತೆ ಇರುವುದಿಲ್ಲ. ಬೆರಳುಗಳು ಏಕರೂಪದ ಚಲನೆ ಹೊಂದಿರುತ್ತದೆ. ಕೈಯಿಂದ ಅಕ್ಷರಗಳನ್ನು ರಚಿಸುವ ಪ್ರಕ್ರಿಯೆ ಬಗ್ಗೆ ನಾರ್ವೆ ಸಂಶೋಧಕರ ತಂಡವು ಸಂಶೋಧನೆಯೊಂದನ್ನು ನಡೆಸಿತು.  ತಂಡವು ಬರವಣಿಗೆಗೆ (ಪೆನ್ ಮತ್ತು ಪೇಪರ್ ಬಳಸಿ ಅಥವಾ ಕೀಬೋರ್ಡ್ ಮತ್ತು ಸ್ಕ್ರೀನ್ ಬಳಸಿ) ಆಧಾರವಾಗಿರುವ ನರಮಂಡಲವನ್ನು ಸೂಕ್ಷ್ಮವಾಗಿ ಅಭ್ಯಾಸ ನಡೆಸಿತು. 

ADVERTISEMENT

ಇದಕ್ಕಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಇಇಜಿ ಡೇಟಾವನ್ನು ಸಂಗ್ರಹಿಸಿತು. ಕೆಲವರು ಪೆನ್‌ನಿಂದ ಬರೆದಿದ್ದರು. ಇನ್ನು ಕೆಲವರು ಸ್ಕ್ರೀನ್‌ ಮೇಲೆ ಟೈಪ್ ಮಾಡಿದ್ದರು. 256 ಸಣ್ಣ ಸಂವೇದಕಗಳನ್ನು ನೆಟ್‌ನಲ್ಲಿ ಹೊಲಿದು ಅವರ ತಲೆಯ ಮೇಲೆ ಇರಿಸಿ, ಪ್ರತಿ ಪ್ರಾಂಪ್ಟ್‌ಗೆ ಐದು ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿ ಅವರ ಮಿದುಳಿನಲ್ಲಿದ್ದ ವಿದ್ಯುತ್ ಚಟುವಟಿಕೆಯನ್ನು ಅಳೆಯಲಾಯಿತು.

ಕೈಯಿಂದ ಬರೆದವರ ಮಿದಳಿನ ಹಲವು ಭಾಗಗಳು ಸಕ್ರಿಯವಾಗಿದ್ದವು. ಟೈಪ್ ಮಾಡಿದವರ ಮಿದುಳಿನಲ್ಲಿ ಅಂಥ ಬದಲಾವಣೆ ಕಂಡುಬರಲಿಲ್ಲ. ಇದಲ್ಲದೇ ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬರೆಯಲು ಕಲಿತ ಮಕ್ಕಳು ಒಂದೇ ರೀತಿಯಲ್ಲಿ ಕಂಡುಬರುವ ಅಕ್ಷರಗಳ ನಡುವಿನ ವ್ಯತ್ಯಾಸ ಕಂಡುಹಿಡಿಯಲು ಹೆಣಗಾಡುತ್ತಾರೆ. ಹಾಗಾಗಿ ಡಿಜಿಟಲ್‌ ಸಾಧನಗಳಿಗಿಂತ ಪೆನ್ನು ಮತ್ತು ಪೆನ್ಸಿಲ್‌ನಲ್ಲಿ ಬರೆಯವ ಪ್ರಯೋಜನವನ್ನು ಸಂಶೋಧನೆ ಒತ್ತಿ ಹೇಳುತ್ತದೆ. 

ವ್ಯಕ್ತಿತ್ವವನ್ನು ಬಿಂಬಿಸುವ ಕೈಬರಹವು ಸೃಜನಶೀಲತೆಯನ್ನು ಹೆಚ್ಚಿಸುವ,  ಕಲಿಕೆ ಹಾಗೂ ಜ್ಞಾಪಕಶಕ್ತಿ  ಹೆಚ್ಚಳಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ.  v

ಕೈಬರಹದಿಂದ ವ್ಯಕ್ತಿತ್ವ ಮಾಪನ

ಕೈಬರಹದಿಂದ ವ್ಯಕ್ತಿಯ ಗುಣವಿಶೇಷಗಳನ್ನು ಅರಿಯಬಹುದು. ಇದನ್ನು ಗ್ರಾಫಾಲಜಿ ಎನ್ನುತ್ತಾರೆ. ಕೈಬರಹ ವಿಶ್ಲೇಷಣೆಯ ಪರಿಕಲ್ಪನೆಯು ಹದಿನೇಳನೇ ಶತಮಾನದಷ್ಟು ಹಿಂದಿನದು. ಕೈಬರಹದಿಂದ ಬರಹಗಾರನ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಹುದು.

ನಾವು ಬರೆದ ಅಕ್ಷರದ ಗಾತ್ರಗಳು, ಪದಗಳ ಅಂತರ, ಅಕ್ಷರ ರೂಪಗಳು ಮತ್ತು ಇತರ ಅಂಶಗಳು ನಮ್ಮ ಪ್ರಾಮಾಣಿಕತೆ, ಏಕಾಗ್ರತೆ, ಭಾವನಾತ್ಮಕ ಸ್ಥಿರತೆ, ಕೆಲಸ ನಿರ್ವಹಿಸುವ ಪರಿ, ಸಂಘಟನಾ ಸಾಮರ್ಥ್ಯ ಸೇರಿ ಇನ್ನೂರಕ್ಕೂ ಹೆಚ್ಚು ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತದೆ. 

ದುಂಡಾದ ಅಕ್ಷರಗಳೊಂದಿಗೆ ಬರೆಯುವುದು ಸೃಜನಶೀಲತೆ ಮತ್ತು ಸೌಂದರ್ಯವನ್ನು ಸೂಚಿಸುತ್ತದೆ. ಮೊನಚಾದ ಅಕ್ಷರಗಳಲ್ಲಿ ಬರೆಯುವ ವ್ಯಕ್ತಿ ತೀಕ್ಷ್ಣ ಮತ್ತು ಕುತೂಹಲವುಳ್ಳ ಗುಣವನ್ನು ಹೊಂದಿರುತ್ತಾರೆ.

ಸಣ್ಣ ಅಕ್ಷರಗಳಲ್ಲಿ ಬರೆಯುವವರು ನಾಚಿಕೆ ಸ್ವಭಾವದವರು ಹಾಗೂ ಅಂತರ್ಮುಖಿಗಳಾಗಿರುತ್ತಾರೆ. ಅಂತೆಯೇ ದೊಡ್ಡ ಅಕ್ಷರಗಳಲ್ಲಿ ಬರೆಯುವ ಜನರು ಬಹಿರ್ಮುಖಿಗಳಾಗಿರುತ್ತಾರೆ ಎಂದು ಹೇಳುತ್ತಾರೆ. ಬರವಣಿಗೆಯ ಗಾತ್ರದಿಂದ ನಮ್ಮ ಏಕಾಗ್ರತೆ ಸಾಮರ್ಥ್ಯವನ್ನು ನಿರ್ಧರಿಸಬಹುದು.

ಪದಗಳನ್ನು ಒಟ್ಟುಗೂಡಿಸಿ ಬರೆಯುವ ವ್ಯಕ್ತಿಗಳು ಇತರರ ಸಹವಾಸವನ್ನು ಇಷ್ಟಪಡುತ್ತಾರೆ.  ಪದಗುಚ್ಛಗಳ ನಡುವೆ ದೊಡ್ಡ ಜಾಗವನ್ನು ಬಿಡುವವರು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಪೆನ್ನಿನ ಮೇಲೆ ಸಾಧಾರಣ ಪ್ರಮಾಣದ ಒತ್ತಡವು ಬದ್ಧತೆಯನ್ನು ಸೂಚಿಸುತ್ತದೆ, ಆದರೆ ತುಂಬಾ ಕಠಿಣವಾದ ಒತ್ತಡವು ಉದ್ವೇಗ ಮತ್ತು ಕೋಪವನ್ನು ಸೂಚಿಸುತ್ತದೆ.

ಬರವಣಿಗೆ ಅಸ್ಪಷ್ಟವಾಗಿದ್ದರೆ ಬರಹಗಾರ ಸುಳ್ಳು ಹೇಳುವ ಸಾಧ್ಯತೆಯಿದೆ ಎಂದು ಕೈಬರಹ ವಿಶ್ಲೇಷಣಾತಜ್ಞರು ಹೇಳುತ್ತಾರೆ. ಅಪರಾಧಗಳಿಗೆ ಸಂಬಂಧಪಟ್ಟ ತನಿಖೆಯಲ್ಲಿಯೂ ಕೈಬರಹದ ವಿಶ್ಲೇಷಣಾ ಕೌಶಲವನ್ನು ಉಪಯೋಗಿಸಲಾಗುತ್ತದೆ.

ಕೈಬರಹದಿಂದಾಗುವ ಅನುಕೂಲಗಳು ಹೀಗಿವೆ

1. ಮಿದುಳಿನ ಸಂಪರ್ಕವನ್ನು ಸುಧಾರಿಸುತ್ತದೆ: ಕೈಬರಹವು ಮಿದುಳಿನ ಹೊರಭಾಗಗಳು ಮತ್ತು ಕೇಂದ್ರ ಭಾಗಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಕಲಿಕೆ ಮತ್ತು ಸ್ಮರಣಾಶಕ್ತಿಗೆ ಸಹಾಯ ಮಾಡುತ್ತದೆ. 

2. ನರಮಂಡಲವನ್ನು ಬಲಪಡಿಸುತ್ತದೆ: ಕೈಬರಹವು ಹೊಸ ನರಕೋಶದ ಬೆಳವಣಿಗೆಗೆ ಪೂರಕವಾಗಿದೆ ಮತ್ತು ನರಮಂಡಲವನ್ನು ಬಲಪಡಿಸುತ್ತದೆ.

3. ಮಿದುಳನ್ನು ಚುರುಕುಗೊಳಿಸುತ್ತದೆ: ಕೈಬರಹವು ಭಾಷೆ, ಚಲನೆ, ಸ್ಮರಣೆ ಹಾಗೂ ಓದುವಿಕೆಗೆ ಸಂಬಂಧಿಸಿದ ಮಿದುಳಿನ ನರಗಳನ್ನು ಸಕ್ರಿಯಗೊಳಿಸುತ್ತದೆ. 

4. ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ: ಬರೆದು ಕಲಿತದ್ದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ವಿಮರ್ಶಾತ್ಮಕ ಚಿಂತನೆ ಮತ್ತು ಆತ್ಮಾವಲೋಕನ ಕೌಶಲವನ್ನು ಹೆಚ್ಚಿಸುತ್ತದೆ. ಇದಲ್ಲದೇ ಸತತವಾಗಿ ಕೈಬರಹದಲ್ಲಿ ತೊಡಗಿಸಿಕೊಳ್ಳುವುದರಿಂದ ಭಾವನೆಗಳನ್ನು ನಿಯಂತ್ರಿಸಲು, ಸ್ವಯಂ ಅರಿವು ಹೊಂದಲು ಸಾಧ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.