ADVERTISEMENT

ಪಿಯುಸಿ ಪರೀಕ್ಷಾ ಸಿದ್ಧತೆಗೆ ಆ್ಯಪ್‌

ಎಸ್.ರವಿಪ್ರಕಾಶ್
Published 29 ಜನವರಿ 2019, 19:45 IST
Last Updated 29 ಜನವರಿ 2019, 19:45 IST
   

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ಬರೆಯಲು ಅನುಕೂಲವಾಗುವ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ.

ಅಂತರ್‌ಕಾಲೇಜು ಡಿಜಿಟಲ್‌ ಸ್ಟಡಿರೂಂ ಪರಿಕಲ್ಪನೆಯಡಿ ಅಧ್ಯಾಪಕರು, ತಜ್ಞರು ಮತ್ತು ಎಂಜಿನಿಯರ್‌ಗಳು ಸೇರಿ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಇದಕ್ಕೆ ‘ಬಿಂಬ’ ಎಂಬ ಹೆಸರನ್ನಿಡಲಾಗಿದೆ. ಗ್ರಾಮೀಣ ಪ್ರದೇಶ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿ ಶುಲ್ಕ ಇರುವುದಿಲ್ಲ.

‘ಅಂತಿಮ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವನೀಯ ಐದು ಪ್ರಶ್ನೆಗಳನ್ನು ಪ್ರತಿ ನಿತ್ಯ ಅಪ್‌ಲೋಡ್‌ ಮಾಡಲಾಗುತ್ತದೆ. ಆ್ಯಪ್‌ ಮೂಲಕ ಪ್ರಶ್ನೆಗಳನ್ನು ಪರಿಶೀಲಿಸಿ ಉತ್ತರ ಬರೆಯಬೇಕು. ಉತ್ತರ ಬರೆದ ಬಳಿಕ ವಿದ್ಯಾರ್ಥಿಗಳು ಅದರ ಚಿತ್ರವನ್ನು ಸೆರೆ ಹಿಡಿದು ಆ್ಯಪ್‌ ಮೂಲಕ ಪೋಸ್ಟ್‌ ಮಾಡಬೇಕು’ ಎನ್ನುತ್ತಾರೆ ಬಿಂಬ ಆ್ಯಪ್‌ ಅಭಿವೃದ್ಧಿಪಡಿಸಿರುವ ಐಪಿಒಎಂಒ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರಿಪ್ರಕಾಶ್‌ ಶಾನಬಾಗ್.

ADVERTISEMENT

ಪ್ರತಿ ನಿತ್ಯವೂ ಪಠ್ಯದಲ್ಲಿ ಓದಿದ ವಿಷಯವನ್ನು ಸ್ಮರಣೆ ಮತ್ತು ಮನನ ಮಾಡಲು ಈ ಆ್ಯಪ್‌ ನೆರವಾಗಲಿದೆ. ವಿಜ್ಞಾನವಲ್ಲದೆ, ವಾಣಿಜ್ಯ ಮತ್ತು ಕಲೆ ವಿಷಯಗಳ ಬಗ್ಗೆಯೂ ಪ್ರಶ್ನೆಗಳನ್ನು ಪೋಸ್ಟ್‌ ಮಾಡಲಾಗುತ್ತದೆ. ಈ ಆ್ಯಪ್‌ನ ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಕ್ರಿಕೆಟ್‌ ಕೋಚಿಂಗ್ ಮಾದರಿಯಲ್ಲಿ ತರಬೇತಿ ನೀಡಲಾಗುತ್ತದೆ. ಹೀಗಾಗಿ ‘ಕ್ವೆಶ್ಚೆನ್ ಬೌಲಿಂಗ್‌ ಮೆಷಿನ್‌’ ಎಂದೂ ಕರೆಯಲಾಗುತ್ತದೆ.

ಈ ಆ್ಯಪ್‌ ಅನ್ನು 2018 ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಈಗ 20 ಸಾವಿರ ವಿದ್ಯಾರ್ಥಿಗಳು ಮತ್ತು 30 ಶಿಕ್ಷಣ ಸಂಸ್ಥೆಗಳು ಡಿಜಿಟಲ್‌ ಕ್ಲಾಸ್‌ರೂಂಗೆ ಸೇರಿಕೊಂಡಿವೆ. ತಜ್ಞರು ಪ್ರಶ್ನೆಗಳನ್ನು ಆಯ್ಕೆ ಮಾಡಿ ಪ್ರತಿ ದಿನ ಸಂಜೆ ಆರು ಗಂಟೆಗೆ ಅಪ್‌ಲೋಡ್‌ ಮಾಡುತ್ತಾರೆ ಎನ್ನುತ್ತಾರೆ ಹರಿಪ್ರಕಾಶ್‌.

ವಿದ್ಯಾರ್ಥಿಗಳಿಗೆ 2,3,5 ಅಂಕಗಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರು ಪೇಪರ್‌, ಪೆನ್‌ ಇಟ್ಟುಕೊಂಡು ಉತ್ತರ ಬರೆದು ಅದರ ಚಿತ್ರವನ್ನು ಪೋಸ್ಟ್‌ ಮಾಡಬೇಕು. ಉತ್ತರ ಬರೆಯುವುದೂ ಒಂದು ಕೌಶಲ್ಯ. ನಿಖರ ಪದಗಳನ್ನು ಬಳಸಿ ಉತ್ತರ ಬರೆಯಬೇಕು. ಇದಕ್ಕೆ ‘ಸ್ಕಿಮಾ’ ಎನ್ನಲಾಗುತ್ತದೆ.

‘ಯಾವ ರೀತಿ ಉತ್ತರ ಬರೆಯಬೇಕು ಎಂಬುದರ ಒಂದು ಮಾರ್ಗಸೂಚಿಯೇಸ್ಕಿಮಾ. ವಿದ್ಯಾರ್ಥಿ ಸ್ಕಿಮಾಗೆ ಅನುಗುಣವಾಗಿ ಉತ್ತರ ಬರೆದಿದ್ದಾನೋ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಬಹುದು. ಎಷ್ಟು ಅಂಕ ಸಿಗಬಹುದು ಎಂಬುದನ್ನೂ ತಿಳಿದುಕೊಳ್ಳಬಹುದು. ಇದರಲ್ಲಿ ಕೆಲವು ‘ಕೀ’ ಪದಗಳನ್ನು ಬಳಸಬೇಕು. ಆಗ ಮಾತ್ರ ಪೂರ್ಣ ಅಂಕ ಸಿಗುತ್ತದೆ. ಮೌಲ್ಯಮಾಪಕರು ಸ್ಕಿಮಾ ನೋಡಿಕೊಂಡೇ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಾರೆ’ ಎಂದು ಅವರು ಹೇಳುತ್ತಾರೆ.

ಬೀದರ್‌, ಕಲಬುರಗಿ ಜಿಲ್ಲೆಗಳ ಯಾವುದೊ ಒಂದು ಹಳ್ಳಿಯ ವಿದ್ಯಾರ್ಥಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗೆ ತನ್ನ ಸಂದೇಹವನ್ನು ತಿಳಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ದುಬಾರಿ ಹಣಕೊಟ್ಟು ಟ್ಯೂಷನ್‌ಗಳಿಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ.

ವೆಬ್‌ಪೋರ್ಟಲ್‌ ವಿವರ–https://onbimba.com/qber, ವಿವರಗಳಿಗೆ 9845601453 ಸಂಪರ್ಕಿಸಬಹುದು.

ವಿದ್ಯಾರ್ಥಿಗಳು ಏನು ಮಾಡಬೇಕು?

*ಮೊದಲಿಗೆ OnBimba ಆ್ಯಪ್‌ ಅನ್ನು ಗೂಗಲ್‌ ಪ್ಲೇನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

* ಪ್ರತಿ ದಿನ 5 ಪ್ರಶ್ನೆಗಳಿಗೆ ಉತ್ತರ ಬರೆದು, ಫೋಟೊ ತೆಗೆದು ಪೋಸ್ಟ್‌ ಮಾಡಬೇಕು.

* ಉತ್ತರ ಪತ್ರಿಕೆಯನ್ನು ತಜ್ಞರು ಪರಿಶೀಲನೆ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.