ADVERTISEMENT

AI And Education: ಎಐ ಯುಗದಲ್ಲಿ ಎಂತಹ ಶಿಕ್ಷಣ ಬೇಕು?

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 23:30 IST
Last Updated 15 ಜೂನ್ 2025, 23:30 IST
   
ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯು ಶಿಕ್ಷಣದ ವಿವಿಧ ವಿಭಾಗಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ಬಗೆಯ ಹಲವು ಕೋರ್ಸ್‌ಗಳು ಭಿನ್ನ ಭಿನ್ನ ಶಿಕ್ಷಣ ವಿಭಾಗಗಳನ್ನು ಒಟ್ಟಿಗೆ ತರುತ್ತಿವೆ

ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಗೊಳ್ಳುವ ಶಿಕ್ಷಣವು ಒಂದು ಸಮಾಜದ ಆತ್ಮವಿದ್ದಂತೆ– ಜಿ.ಕೆ.ಚೆಸ್ಟರ್ಟನ್‌ ಅವರ ಈ ಹೇಳಿಕೆ ನನಗೆ ತುಂಬಾ ಇಷ್ಟವಾದುದು. ಇದು ಹಲವು ವಿಧಗಳಲ್ಲಿ ವಾಸ್ತವವನ್ನು ಬಹಳ ಮಟ್ಟಿಗೆ ಪ್ರತಿಬಿಂಬಿಸುತ್ತದೆ. ನಾವೀಗ ಒಂದು ರೀತಿಯ ಪುನಃಶ್ಚೇತನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿದ್ದೇವೆ. ನಾವು ಭಾರತೀಯರು ಮಾತ್ರವಲ್ಲ ಇಡೀ ಮನುಕುಲವೇ ಪರಿವರ್ತನೆಗೆ ಒಳಗಾಗುತ್ತಿದೆ.

ಜೀವನದ ಉದ್ದಕ್ಕೂ ಹಲವು ಬದಲಾವಣೆಗಳಿಗೆ ನಾವು ಮುಖಾಮುಖಿಯಾಗಿದ್ದೇವೆ. ಹಾಗೆಯೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಹ ಹಲವು ಬದಲಾವಣೆಗಳು ಆಗಿವೆ. ಈಗಲೂ ಈ ವ್ಯವಸ್ಥೆ ರೂಪಾಂತರಕ್ಕೆ ಒಳಗಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇಂದಿನ ಯುವ ಸಮುದಾಯಕ್ಕೆ ಯಾವ ರೀತಿಯ ಶಿಕ್ಷಣ ನೀಡಬೇಕು? ಶಿಕ್ಷಣದ ವಿಚಾರದಲ್ಲಿ ನಾವು ಮುಂದಿನ ಪೀಳಿಗೆಗೆ ಯಾವ ಆದರ್ಶವನ್ನು ಬಿಟ್ಟು ಹೋಗಬೇಕು? ಈ ಪ್ರಶ್ನೆಗಳಿಗೆ ಉತ್ತರಿಸಲು ನಾನು ಪ್ರಯತ್ನಿಸುವೆ.

ಈ ಜಗತ್ತು ಮತ್ತು ಅಲ್ಲಿನ ಔದ್ಯೋಗಿಕ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವಂತಹ ರೀತಿಯಲ್ಲಿ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ತಯಾರು ಮಾಡಬೇಕಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯು ವಿವಿಧ ಶಿಕ್ಷಣ ವಿಭಾಗಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ವಿಭಾಗಗಳನ್ನೂ ಒಂದುಗೂಡಿಸುತ್ತಿದೆ. ಉದಾಹರಣೆಗೆ, ಈಗಿನ ವಾಹನ ಉದ್ಯಮವು ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ರೊಬೊಟಿಕ್ಸ್‌, ರಾಸಾಯನಿಕ, ವಸ್ತುವಿಜ್ಞಾನ, ಕಂಪ್ಯೂಟರ್‌ ಸೈನ್ಸ್‌ ಮತ್ತು ವಿನ್ಯಾಸ ಶಿಕ್ಷಣ ವಿಭಾಗಗಳಲ್ಲಿನ ಅಂಶಗಳನ್ನು ಒಳಗೊಂಡಿರುತ್ತದೆ. ಹಿಂದೆ ಈ ಎಲ್ಲ ವಿಭಾಗಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತಿತ್ತು. ಆದರೆ, ಈಗ ನಾವು ಆ ಕಾಲವನ್ನು ದಾಟಿ ಮುಂದೆ ಸಾಗಿದ್ದೇವೆ. ಈ ಎಲ್ಲ ವಿಭಾಗಗಳನ್ನೂ ಸಂಯೋಜಿಸುವ ದಾರಿಯನ್ನು ತಂತ್ರಜ್ಞಾನೋದ್ಯಮಿಗಳು ಕಂಡುಹಿಡಿದಿದ್ದಾರೆ. ಇಂದು ಉದ್ಯಮವು ಹಲವು ಶಿಕ್ಷಣ ವಿಭಾಗಗಳು ಮತ್ತು ಅಂತರಶಿಸ್ತೀಯ ಶಿಕ್ಷಣ ವಿಭಾಗಗಳ ನಡುವೆ ಉತ್ತಮ ಸಮನ್ವಯ ಇರುವುದನ್ನು ಬಯಸುತ್ತದೆ.  

ADVERTISEMENT

ಈ ಕಾರಣಕ್ಕಾಗಿಯೇ, ಈಗ ಶಿಕ್ಷಣ ಕ್ಷೇತ್ರದಲ್ಲಿ ಅಂತರಶಿಸ್ತೀಯ ಸ್ವರೂಪದ ಹಲವು ಕೋರ್ಸ್‌ಗಳನ್ನು ಕಾಣಬಹುದಾಗಿದೆ. ದಶಕದಷ್ಟು ಹಳೆಯದಾದ ಜೈವಿಕ ತಂತ್ರಜ್ಞಾನ (ಬಯೊ– ಟೆಕ್ನಾಲಜಿ), ರೊಬೊಟಿಕ್ಸ್‌ ಹಾಗೂ ಈ ಮಾದರಿಯ ಇನ್ನು ಕೆಲವು ಕೋರ್ಸ್‌ಗಳು ಇತ್ತೀಚಿನ ವರ್ಷಗಳಲ್ಲಷ್ಟೇ ಬೇಡಿಕೆಯನ್ನು ಕಂಡವು. ಈಗಲೂ ಈ ಕೋರ್ಸ್‌ಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಇಂದು ಬಯೊಮೆಡಿಕಲ್‌, ಬಯೊ-ಎಂಜಿನಿಯರಿಂಗ್‌, ಡಿಸೈನ್‌ ಮತ್ತು ಮ್ಯಾನ್ಯುಫಾಕ್ಚರಿಂಗ್‌, ನ್ಯೂಕ್ಲಿಯರ್‌ ಮೆಡಿಸಿನ್‌, ಮೆಡಿಕಲ್‌ ಇಮೇಜಿಂಗ್‌, ಎನರ್ಜಿ ಸಿಸ್ಟಮ್ಸ್‌, ನ್ಯಾನೊ-ಸೈನ್ಸ್‌ ಹಾಗೂ ಇಂತಹ ಹಲವು ಕೋರ್ಸ್‌ಗಳು ಭಿನ್ನ ಭಿನ್ನ ಶಿಕ್ಷಣ ವಿಭಾಗಗಳನ್ನು ಒಟ್ಟಿಗೆ ತರುತ್ತಿವೆ. ದಶಕದಿಂದೀಚೆಗೆ ಕೆಲವು ಕಾಲೇಜುಗಳಲ್ಲಿ ಮಾತ್ರ ಮೆಕ್ಯಾಟ್ರಾನಿಕ್ಸ್‌, ರೊಬೊಟಿಕ್ಸ್‌, ಐಒಟಿ (ಇಂಟರ್‌ನೆಟ್‌ ಆಫ್‌ ಥಿಂಗ್ಸ್‌), ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ನಂತಹ ಕೋರ್ಸ್‌ಗಳಿದ್ದವು. ಈಗ ಹೆಚ್ಚು ಕಾಲೇಜುಗಳು ಈ ಕೋರ್ಸ್‌ಗಳನ್ನು ಆರಂಭಿಸಿವೆ. ಉತ್ತೇಜನಕಾರಿಯಾದ ಸಂಗತಿ ಎಂದರೆ, ಇವುಗಳನ್ನು ಈಗ ಡಿಪ್ಲೊಮಾ ಪ್ರಮಾಣಪತ್ರ ಕೋರ್ಸ್‌ಗಳ ರೂಪದಲ್ಲೂ ನೀಡಲಾಗುತ್ತಿದೆ. ಹಾಗಿದ್ದರೂ ಹೆಚ್ಚು ಮುಂದುವರಿದಿರುವ ಅಥವಾ ಭವಿಷ್ಯದ ಬಗ್ಗೆ ಯೋಚಿಸುವ ನಾಯಕತ್ವ ಹೊಂದಿರುವ ಶಿಕ್ಷಣ ಸಂಸ್ಥೆಗಳು ಮಾತ್ರ ಇಂತಹ ಅಂತರಶಿಸ್ತೀಯ ಕೋರ್ಸ್‌ಗಳ ಬಗ್ಗೆ ಗಮನ ಹರಿಸುತ್ತಿವೆ. ಇವುಗಳ ಜೊತೆಗೆ, ಸಿ-ಕ್ಯಾಂಪ್‌ನಂತಹ ಸರ್ಕಾರಿ ಸಂಸ್ಥೆಗಳು ಮತ್ತು ಫರ್ಸ್ಟ್‌ (ಎಫ್‌ಐಆರ್‌ಎಸ್‌ಟಿ) ಪ್ರತಿಷ್ಠಾನದಂತಹ ಸ್ವಯಂಸೇವಾ ಸಂಸ್ಥೆಗಳು ಕೂಡ ಶಿಕ್ಷಣ ಸಂಸ್ಥೆಗಳ ನಡುವೆ ಅಂತರಶಿಸ್ತೀಯ ಸಹಭಾಗಿತ್ವವನ್ನು ರೂಪಿಸಲು ಪ್ರಯತ್ನಿಸುತ್ತಿವೆ.

ಎಂತಹುದೇ ಸನ್ನಿವೇಶದಲ್ಲಿ ಪುಟಿದೇಳುವ ಸಾಮರ್ಥ್ಯ ಮತ್ತು ಸಮಸ್ಯೆ ಬಗೆಹರಿಸುವುದನ್ನು ಕಲಿಯುವ ಮನಃಸ್ಥಿತಿಯನ್ನು ಹೊಂದಿರುವ ಮುಂದಿನ ಪೀಳಿಗೆಯನ್ನು ನಿರ್ಮಿಸುವ ದಿಸೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂಬ ಆಶಾವಾದ ನನ್ನದು.

ಲೇಖಕ: ನಿಜ ವೆಂಚರ್‌ ಇಂಪ್ಯಾಕ್ಟ್ಸ್‌ ಸ್ಥಾಪಕ ಮತ್ತು ಟೆಕ್ನೊವೊಸ್‌ ಮಷೀನರಿ ಸಂಸ್ಥೆಯ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.