ADVERTISEMENT

ಬಿ.ಎಸ್‌ಸಿ. ನಂತರ ಆಯುರ್ವೇದ ಕೋರ್ಸ್‌ ಸಾಧ್ಯವೇ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಹರೀಶ್ ಶೆಟ್ಟಿ ಬಂಡ್ಸಾಲೆ
Published 24 ಸೆಪ್ಟೆಂಬರ್ 2019, 19:30 IST
Last Updated 24 ಸೆಪ್ಟೆಂಬರ್ 2019, 19:30 IST
ಶಿರೋಧಾರೆ
ಶಿರೋಧಾರೆ    

ನಾನು ಬಿ.ಎಸ್‌ಸಿ. ಪದವಿಯನ್ನು ದಾವಣಗೆರೆ ವಿಶ್ವವಿದ್ಯಾಲಯಲ್ಲಿ ಮುಗಿಸಿದ್ದೇನೆ. ನನಗೆ ಆಯುರ್ವೇದ ವೈದ್ಯಕೀಯದಲ್ಲಿ ಕೋರ್ಸ್‌ ಮಾಡುವ ಆಸೆ ಇದೆ. ಮಾಡಲು ಸಾಧ್ಯವೇ?

-ಚೈತನ್ಯ ರವಿಕುಮಾರ್‌, ಊರು ಬೇಡ

ಚೈತನ್ಯ, ಸದ್ಯ ಇರುವ ಕ್ರಮದಂತೆ ನಿಮ್ಮ ಬಿ.ಎಸ್‌ಸಿ. ಆಧಾರದ ಮೇಲೆ ಆಯುರ್ವೇದದಲ್ಲಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಲು ಆಗುವುದಿಲ್ಲ. ಆದರೆ ನಿಮ್ಮ ಪಿ.ಯು.ಸಿ.ಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಮತ್ತು ಜೀವಶಾಸ್ತ್ರ ಕಡ್ಡಾಯವಾಗಿ ಓದಿದ್ದರೆ ಮತ್ತು ಶೇ 50 ಅಂಕಗಳೊಂದಿಗೆ ತೇರ್ಗಡೆ ಆದಲ್ಲಿ ಅದರ ಆಧಾರದ ಮೇಲೆ ವೈದ್ಯಕೀಯ ಕಾಲೇಜುಗಳಲ್ಲಿ ಅರ್ಯವೇದದಲ್ಲಿ ವೈದ್ಯಕೀಯ ಪದವಿಗೆ (ಬಿ.ಎ.ಎಮ್.ಎಸ್.) ಪ್ರವೇಶಾತಿ ಪಡೆಯಬಹುದು.

ADVERTISEMENT

ಕರ್ನಾಟಕದ ಆಯುರ್ವೇದ ಕಾಲೇಜುಗಳಲ್ಲಿ ಬಿ.ಎ.ಎಮ್.ಎಸ್. ಪದವಿಗೆ ಸರ್ಕಾರಿ ಸೀಟು ಪಡೆಯಲು ಸಿ.ಇ.ಟಿ. ಪರೀಕ್ಷೆಯ ಮುಖಾಂತರ ಪ್ರವೇಶಾತಿ ಪಡೆಯಬಹುದು. ಸದ್ಯದ ಸಿ.ಇ.ಟಿ. ಪರೀಕ್ಷಾ ಅಧಿಸೂಚನೆ ಪ್ರಕಾರ ಯಾವುದೇ ವಯಸ್ಸಿನ ಮಿತಿ ಇಲ್ಲ‌ದೇ ಇರುವುದರಿಂದ ಪ್ರಯತ್ನಿಸಬಹುದು. ನೀವು ಈಗಾಗಲೇ ಒಂದು ಪದವಿ ಮಾಡಿರುವುದರಿಂದ ನಿಮ್ಮಲ್ಲಿ ಸಮಯ, ಅವಕಾಶ ಮತ್ತು ವೈದ್ಯಕೀಯ ಶಿಕ್ಷಣ ಪಡೆಯಲು ಇರುವ ಆಸಕ್ತಿ ಎಲ್ಲವನ್ನೂ ಪರಿಗಣಿಸಿ ಅಂತಿಮ ನಿರ್ಧಾರಕ್ಕೆ ಬನ್ನಿ. ಶುಭಾಶಯ.

ನಾನು ಎಸ್‌.ಎಸ್‌.ಎಲ್‌.ಸಿ.ಯನ್ನು 2011ರಲ್ಲಿ ಪೂರ್ಣ ಮಾಡಿದ್ದೇನೆ. ಶೇ 39.52 ಫಲಿತಾಂಶ ಬಂದಿದೆ. ಹೆಚ್ಚು ಅಂಕ ಪಡೆಯಲು ಮತ್ತೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಬರೆಯಬಹುದೇ? ಬರೆಯಲು ಅವಕಾಶ ಇದೆಯೇ ಅಥವಾ ಮುಂದಿನ ಅಭ್ಯಾಸವನ್ನು ಮುಂದುವರಿಸಬೇಕೆ ತಿಳಿಸಿ.

-ರಿಯಾಜ್ ಅಹ್ಮದ್‌, ಊರು ಬೇಡ

ರಿಯಾಜ್, ಸದ್ಯದ ಮಾಹಿತಿ ಪ್ರಕಾರ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಲ್ಲಿ ಮತ್ತೆ ಬರೆಯಲು ಅವಕಾಶ ಇರುವುದಿಲ್ಲ. ತೇರ್ಗಡೆಯಾಗದಿರುವ ವಿಷಯಗಳಿಗೆ ಮಾತ್ರ ಬರೆಯಲು ಅವಕಾಶ ಇರುತ್ತದೆ. ಯಾವುದಕ್ಕೂ ಒಮ್ಮೆ ನಿಮ್ಮ ಹತ್ತಿರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಪರಿಶೀಲಿಸಿಕೊಳ್ಳಿ.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೇಗೋ ತೇರ್ಗಡೆ ಆಗಿದ್ದೀರಿ. ಕಡಿಮೆ ಅಂಕ ಪಡೆದಿರುವ ಬಗ್ಗೆ ಹೆಚ್ಚು ಚಿಂತಿಸಬೇಡಿ. ನಮಗೆ ಆಸಕ್ತಿ ಇರುವ, ಇರದಿರುವ ಎಲ್ಲ ವಿಷಯಗಳು ಇರುವುದರಿಂದಲೋ ಅಥವಾ ಆ ವಯಸ್ಸಿನ ಹುಡುಗಾಟ, ಶಿಕ್ಷಣ, ಕಲಿಕೆಯ ಸಮಸ್ಯೆಗಳಿಂದ ಅಥವಾ ಇನ್ನಾವುದೋ ಅನಿವಾರ್ಯ ಕಾರಣದಿಂದಲೋ ಕಡಿಮೆ ಅಂಕ ಬಂದಿರಬಹುದು. ಅದನ್ನೆಲ್ಲಾ ಪಕ್ಕಕಿಟ್ಟು ಮುಂದೆ ನೀವು ಏನು ಆಗಬೇಕು ಎಂದು ಯೋಚಿಸಿ. ನಿಮ್ಮ ಆಸಕ್ತಿ, ಪರಿಸ್ಥಿತಿ, ಅವಕಾಶ ಇತ್ಯಾದಿಗಳನ್ನು ನೋಡಿಕೊಂಡು ನಿರ್ಧರಿಸಿ. ಅದಕ್ಕಾಗಿ ಏನು ಓದಬೇಕು ಎಂದು ನೋಡಿ. ಅದನ್ನು ಆಸಕ್ತಿಯಿಂದ ಓದಿ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿ. ಆಲ್ ದಿ ಬೆಸ್ಟ್.

ನಾನು ಬಿ.ಎಸ್‌ಸಿ. (ಸಿಬಿಝೆಡ್‌) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ, ಮುಂದೆ ನನಗೆ ಉದ್ಯೋಗ ಮಾಡಲು ಅವಕಾಶಗಳನ್ನು ತಿಳಿಸಿ ಕೊಡಿ ಹಾಗೂ ಮುಂದೆ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ಸೂಕ್ತ?

-ಕೆ.ಯಶೋದ, ಊರು ಬೇಡ

ಯಶೋದ, ನೀವು ಕಲಿತಿರುವ ಮೂರು ವಿಷಯಗಳಲ್ಲಿ ನಿಮ್ಮ ಆಸಕ್ತಿಯ ವಿಷಯ ಯಾವುದು ಎಂದು ನಿರ್ಧರಿಸಿ. ಆ ವಿಷಯದಲ್ಲಿ ಎಂ.ಎಸ್‌ಸಿ. ಶಿಕ್ಷಣವನ್ನು ಮಾಡಬಹುದು ಅಥವಾ ಆ ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಉದ್ಯೋಗಕ್ಕೂ ಪ್ರಯತ್ನಿಸಬಹುದು. ಮುಂದಿನ ಶಿಕ್ಷಣಕ್ಕಾಗಿ ಎಂ.ಎಸ್‌ಸಿ. ಕೆಮೆಸ್ಟ್ರಿ, ಬಾಟನಿ ಮತ್ತು ಝೂವಾಲಜಿಯ ಜೊತೆಗೆ ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ, ಫಾರೆನ್ಸಿಕ್ ಸೈನ್ಸ್, ಫುಡ್ ಎಂಡ್ ನ್ಯೂಟ್ರಿಷನ್‌ಗಳಂತಹ ಸ್ನಾತಕೋತ್ತರ ಪದವಿಗಳನ್ನು ಓದಬಹುದು.
ಇನ್ನೂ ನೇರವಾಗಿ ಉದ್ಯೋಗವಕಾಶಗಳನ್ನು ಪಡೆಯಲು ಬಯಸಿದರೆ ನಿಮ್ಮ ಪದವಿ ವಿಷಯಗಳ ಕ್ಷೇತ್ರಗಳಲ್ಲಿ ಪ್ರಯತ್ನಿಸಿಬಹುದು. ಕೆಮಿಕಲ್ ಲ್ಯಾಬ್, ಫಾರ್ಮಾ ಕಂಪನಿಗಳಲ್ಲಿ, ರಸಗೊಬ್ಬರಗಳನ್ನು ತಯಾರಿಸುವ ಕಂಪೆನಿಗಳಲ್ಲಿ, ಪ್ರಾಣಿ ಸಂರಕ್ಷಣಾಲಯದಲ್ಲಿ, ಸಸ್ಯ ಸಂರಕ್ಷಣಾಲಯಗಳಲ್ಲಿ, ವನ್ಯಧಾಮ, ಅರಣ್ಯ ಇಲಾಖೆ, ಫಾರೆನ್ಸಿಕ್ ಲ್ಯಾಬ್‌ಗಳಲ್ಲಿ, ಸಂಶೋಧನೆ ಘಟಕಗಳಲ್ಲಿ, ಪರಿಸರವಿಜ್ಞಾನ ಘಟಕಗಳಲ್ಲಿ, ಕೃಷಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ, ಸರ್ಕಾರಿ ಹೈನುಗಾರಿಕೆ ಮತ್ತು ತೋಟಗಾರಿಕೆ ಇಲಾಖೆ ಮತ್ತು ಸಂಬಂಧಿಸಿದ ಖಾಸಗಿ ಸಂಸ್ಥೆಗಳಲ್ಲಿ. ಪ್ರಾಣಿ ಮತ್ತು ಸಸ್ಯಗಳ ಮೇಲೆ ಕೆಲಸ ಮಾಡುವ ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳಲ್ಲಿ ಪ್ರಯತ್ನಿಸಿ.

ನಿಮಗೆ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ನಿಮ್ಮ ಬಿ.ಎಸ್‌ಸಿ. ನಂತರ ಬಿ.ಎಡ್. ಶಿಕ್ಷಣ ಪಡೆದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರಾಗಬಹುದು. ಎಂ.ಎಸ್‌ಸಿ. ಮಾಡಿಕೊಂಡರೆ ಆ ವಿಷಯವಾಗಿ ಪಿ.ಯು.ಸಿ. ಮತ್ತು ಪದವಿ ಹಂತದಲ್ಲಿ ಪ್ರಾಧ್ಯಾಪಕರಾಗಬಹುದು. ಹಾಗೆ ಪಿಎಚ್.ಡಿ. ಶಿಕ್ಷಣ ಪಡೆದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನೆ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿ ಕಾರ್ಯ ಸಲ್ಲಿಸಬಹುದು.
ಇವಲ್ಲದೆ, ಸಾಮಾನ್ಯ ಪದವಿಯ ಆಧಾರದ ಮೇಲೆ ಕರೆಯಲ್ಪಡುವ ಸರ್ಕಾರಿ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆ, ಆಡಳಿತಾತ್ಮಕ ಹುದ್ದೆಗಳು ಮತ್ತು ಇತರೆ ಹುದ್ದೆಗಳಿಗೂ ಪ್ರಯತ್ನಿಸಬಹುದು. ಶುಭಾಶಯ.

ನಾನು 2017 ರಲ್ಲಿ ಡಿಪ್ಲೋಮಾ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಶೇ 80.83 ಅಂಕ ಗಳಿಸಿ ಪಾಸಾಗಿದ್ದೇನೆ. ನಂತರನನ್ನ ಆರೋಗ್ಯ ಸಮಸ್ಯೆಯ ಕಾರಣದಿಂದ ಒಂದು ವರ್ಷದ ನಂತರ ಎಂಜಿನಿಯರಿಂಗ್ ಸೇರಿದೆ. ಈಗಎಂಜಿನಿಯರಿಂಗ್ ಪೂರ್ಣಗೊಳಿಸಬೇಕು ಎಂದಿದ್ದೇನೆ. ಆದರೆ ನಮ್ಮ ಮುಂದಿನ ಬ್ಯಾಚ್ ಪಠ್ಯಕ್ರಮವು ಬದಲಾಗಿದೆ.ನನ್ನ ಪದವಿಯನ್ನು ಕರೆಸ್ಪಾಂಡೆನ್ಸ್ ಮಾಡುವ ಮೂಲಕ ಪೂರ್ಣಗೊಳಿಸಬಹುದೇ ಅಥವಾ ಕೆಲಸ ಮಾಡುವುದು ಉತ್ತಮವೇ?

-ಸಹನಾ ರಘುನಾಥ್, ಊರು ಬೇಡ

ನಿಮಗೆ ರೆಗ್ಯುಲರ್ ಆಗಿ ಕಲಿಯಲು ಇಚ್ಛೆಯಿದ್ದಲ್ಲಿ, ನೀವು ಪುನಃ ಎಂಜಿನಿಯರಿಂಗ್ ಪದವಿಗೆ ದಾಖಲಾಗಿ ಶಿಕ್ಷಣವನ್ನು ಪ್ರಾರಂಭಿಸಬಹುದು ಅಥವಾ ಕೆಲಸ ಮಾಡುತ್ತ ದೂರ ಶಿಕ್ಷಣದ ಮುಖಾಂತರ ಶಿಕ್ಷಣವನ್ನು ಮುಂದುವರೆಸಬಹುದು. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಆಂಧ್ರ ವಿಶ್ವವಿದ್ಯಾಲಯ ಇತ್ಯಾದಿಗಳಲ್ಲಿ ದೂರ ಶಿಕ್ಷಣದ ಮುಖಾಂತರ ಪದವಿ ಪಡೆಯಬಹುದು. ಯಾವುದೇ ವಿಶ್ವವಿದ್ಯಾಲಯದಿಂದ ಮಾಡುವುದಾದರೂ ಆ ವಿಶ್ವವಿದ್ಯಾಲಯದ ಮಾನ್ಯತೆಯ ಬಗ್ಗೆ ಸೂಕ್ತ ಮಾಹಿತಿ ಪಡೆದು ಮುಂದುವರೆಯಿರಿ. ಮುಕ್ತ ವಿಶ್ವವಿದ್ಯಾಲಯದ ಪದವಿಗಳಿಗೆ ಮಾನ್ಯತೆ ಇದ್ದರೂ ಹೆಚ್ಚಾಗಿ ಉದ್ಯೋಗದಾತರು ಪರಿಗಣಿಸದೆ ಇರುವುದರಿಂದ ಮುಕ್ತ ವಿಶ್ವವಿದ್ಯಾಲಯದ ಪದವಿಯ ಬಲದಲ್ಲಿ ಕೆಲಸ ಹುಡುಕುವುದು ಸ್ವಲ್ಪ ಕಷ್ಟ. ಅದಕ್ಕಾಗಿ ನಿಮ್ಮ ಡಿಪ್ಲೋಮಾ ಪದವಿಯ ಆಧಾರದ ಮೇಲೆ ಕೆಲಸ ಪಡೆದುಕೊಂಡು, ಅನುಭವ ಪಡೆಯುತ್ತ ದೂರ ಶಿಕ್ಷಣದಲ್ಲಿ ಬಿ.ಇ. ಪದವಿಯನ್ನು ಪಡೆಯಬಹುದು. ಆಗ ನಿಮ್ಮ ಕೆಲಸದ ಅನುಭವವು ನಿಮ್ಮ ಪದವಿ ಮುಂದಿನ ಹುದ್ದೆಗಳಿಗೆ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡುತ್ತದೆ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.