ADVERTISEMENT

ಉತ್ತಮ ಗಳಿಕೆಗೆ ವಿಶಿಷ್ಟ ಕೋರ್ಸ್‌ಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:30 IST
Last Updated 24 ಸೆಪ್ಟೆಂಬರ್ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಯುಸಿ ಮುಗಿದ ಮೇಲೆ ಪದವಿ, ಸ್ನಾತಕೋತ್ತರ ಪದವಿ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ಬಗೆಯಾದರೆ ಕೆಲವೊಂದು ಕೋರ್ಸ್ ಮಾಡಿಕೊಂಡು ಉತ್ತಮ ಗಳಿಕೆಯ ಕೆಲಸ ಪಡೆಯುವುದು ಇನ್ನೊಂದು ವಿಧಾನ. ಉತ್ತಮ ಗಳಿಕೆಯೊಂದಿಗೆ ಸುತ್ತಾಟವೂ ಜೊತೆಯಾದರೆ ಮನಸ್ಸಿಗೆ ಖುಷಿ ಜೇಬಿಗೂ ಖುಷಿ.

ಕೆಲಸಕ್ಕೆ ಸೇರಿದ ಮೇಲೆ ಸಂಬಳದ ಜೊತೆಗೆ ಸುತ್ತಾಡಲೂ ಹಣ ಕೊಡುತ್ತಾರೆ ಎಂದರೆ ಯಾರಿಗೆ ಬೇಡ ಹೇಳಿ. ಆದರೆ ಅಂತಹ ಕೆಲಸಗಳು ಸಿಗುವುದು ಸುಲಭವಲ್ಲ. ಅದಕ್ಕಾಗಿ ನೀವು ಸರಿಯಾದ ಯೋಜನೆ ರೂಪಿಸಬೇಕು. ಕೆಲಸದ ಜೊತೆಗೆ ತಿರುಗಾಟಕ್ಕೂ ಅವಕಾಶ ನೀಡಿ ಎಲ್ಲಾ ರೀತಿಯ ಭತ್ಯೆಗಳನ್ನು ನೀಡುವ ವೃತ್ತಿಗಾಗಿ ನೀವು ಹುಡುಕಾಟ ನಡೆಸಬೇಕು. ಅಂತಹ ಕೆಲಸಗಳೂ ಇವೆಯೇ ಎಂದು ಕೇಳುತ್ತೀರಾ? ಖಂಡಿತ ಇದೆ. ಆ ಕೆಲಸಗಳು ಒಳ್ಳೆಯ ಸಂಬಳ ನೀಡುವ ಜೊತೆಗೆ ಸುತ್ತಾಟಕ್ಕೂ ಅವಕಾಶ ನೀಡುತ್ತವೆ. ಅವುಗಳಲ್ಲಿ ಕೆಲವು ಇಲ್ಲಿವೆ.

ಫೋಟೊಗ್ರಾಫರ್

ADVERTISEMENT

ಫೋಟೊಗ್ರಾಫರ್ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಸುಂದರ ಸ್ಥಳಗಳು ಹಾಗೂ ಕೈಯಲ್ಲಿ ಹಿಡಿದಿರುವ ಕ್ಯಾಮೆರಾ. ನಿಜ ಕೆಲವೊಂದು ಸಂದರ್ಭದಲ್ಲಿ ಮೇಲೆ ತಿಳಿಸಿದ ಅಂಶಗಳು ನಿಜ ಎನ್ನಿಸುತ್ತವೆ. ಆದರೆ ಫೋಟೊಗ್ರಫಿಯಲ್ಲಿ ಅನೇಕ ವಿಭಾಗಗಳಿದ್ದು ಅವುಗಳಲ್ಲಿ ಕೆಲವೊಂದನ್ನು ಆಯ್ದುಕೊಂಡರೆ ಖಂಡಿತ ನೀವು ಪ್ರಪಂಚ ಸುತ್ತಬಹುದು. ವೈಲ್ಡ್‌ಲೈಫ್‌ ಫೋಟೊಗ್ರಫಿ, ಟ್ರಾವೆಲ್ ಫೋಟೊಗ್ರಫಿ ಅಥವಾ ಸ್ಟ್ರೀಟ್ ಫೋಟೊಗ್ರಫಿ ಆಯ್ಕೆ ಮಾಡಿಕೊಂಡರೆ ಈ ಅವಕಾಶ ನಿಮ್ಮದಾಗುತ್ತದೆ. ಹೆಸರಾಂತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಉತ್ತಮ ಸಂಬಳದ ಜೊತೆಗೆ ದೇಸ– ವಿದೇಶಗಳನ್ನು ಸುತ್ತುವ ಅವಕಾಶವೂ ನಿಮ್ಮದಾಗಬಹುದು.

ಫ್ಯಾಷನ್ ಡಿಸೈನರ್

ಈ ವೃತ್ತಿಯಲ್ಲಿ ಒಮ್ಮೆ ಸ್ವಲ್ಪ ಮಟ್ಟಿನ ಅನುಭವ ಸಿಕ್ಕರೆ ಸಾಕು ನಿಮಗೆ ತಿರುಗಾಟಕ್ಕೆ ಉಚಿತವಾಗಿ ಟಿಕೆಟ್ ಸಿಕ್ಕಿದಂತೆ. ಫ್ಯಾಷನ್ ಶೋ ಇರುವಾಗ, ಮಾಡೆಲ್‌ಗಳ ಫೋಟೊಶೂಟ್ ಇದ್ದಾಗ ಡಿಸೈನರ್‌ಗಳು ತುಂಬಾ ತಿರುಗಾಟ ನಡೆಸಬೇಕಾಗುತ್ತದೆ. ಹಾಗಾಗಿ ಫ್ಯಾಷನ್ ಡಿಸೈನರ್‌ಗಳಿಗೂ ತಿರುಗಾಟ ಅವಿನಾಭಾವ ಸಂಬಂಧ ಎನ್ನುವುದು ಸುಳ್ಳಲ್ಲ.

ಪ್ರವಾಸಿ ಮಾರ್ಗದರ್ಶಕ

ಮೊದಲೆಲ್ಲಾ ಪ್ರವಾಸಿ ಮಾರ್ಗದರ್ಶಕ ಎಂದರೆ ಕೇವಲ ಶಾಲಾ ಮಕ್ಕಳಿಗೆ ಸ್ಥಳಗಳ ಪರಿಚಯ ಮಾಡಿಸುವವರು ಎಂಬುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರಸಿದ್ಧ ಸ್ಥಳಗಳ ಬಗ್ಗೆ ನೀವು ವಿವರವಾಗಿ ತಿಳಿದುಕೊಂಡರೆ ಖಂಡಿತ ನೀವೊಬ್ಬ ಉತ್ತಮ ಪ್ರವಾಸಿ ಮಾರ್ಗದರ್ಶಕ ಆಗಬಹುದು. ಕೇವಲ ಒಂದು ಸ್ಥಳದ ಬಗ್ಗೆ ತಿಳಿದುಕೊಳ್ಳದೇ ಅನೇಕ ಸ್ಥಳಗಳ ಬಗ್ಗೆ ತಿಳಿದುಕೊಂಡರೆ ನೀವೂ ಪ್ರವಾಸ ಮಾಡಬಹುದು. ಜೊತೆಗೆ ಇದರಿಂದ ನಿಮಗೆ ಮನರಂಜನೆ ಸಿಗುವ ಜೊತೆಗೆ ಬೇರೆಯವರನ್ನು ರಂಜಿಸಬಹುದು. ಯಾಕೆಂದರೆ ಬರೀ ತೋರಿಸುವುದು ಮಾತ್ರವಲ್ಲ ಪ್ರವಾಸಿಗಳ ಮನರಂಜಿಸಿದರೆ ಉತ್ತಮ ಮಾರ್ಗದರ್ಶಕ ಆಗುವುದು ಖಂಡಿತ. ಇದರಲ್ಲೂ ಗಳಿಕೆಗೆ ಕೊರತೆ ಇಲ್ಲ.

ಅನುವಾದಕರು

ನೀವು ಮೂರು ಭಾಷೆಗಳಲ್ಲಿ ಸ್ಪಷ್ಟವಾಗಿ ಸುಲಲಿತವಾಗಿ ಭಾಷಾನುವಾದ ಮಾಡಲು ಕಲಿತರೆ ಖಂಡಿತ ನೀವು ಉತ್ತಮ ಅನುವಾದಕರಾಗಬಹುದು. ಭಾಷಾನುವಾದಕರಿಗೆ ಉತ್ತಮ ಪ್ಯಾಕೇಜ್‌ನ ಸಂಬಳದೊಂದಿಗೆ ವಿದೇಶಗಳನ್ನು ಸುತ್ತುವ ಅವಕಾಶ ಹೆಚ್ಚು. ಅನುವಾದ ಕಲಿಯುವುದರಿಂದ ತಿರುಗಾಟದೊಂದಿಗೆ ಹಣವನ್ನೂ ಸಂಪಾದಿಸಬಹುದು.

ಈ ಮೇಲಿನ ಎಲ್ಲಾ ಕೆಲಸಗಳಿಗೂ ಪ್ರತ್ಯೇಕ ಕೋರ್ಸ್‌ಗಳಿದ್ದು ಉತ್ತಮ ಕಾಲೇಜು ಇಲ್ಲವೇ ಹೆಸರಾಂತ ಇನ್ಸ್‌ಟಿಟ್ಯೂಟ್‌ಗಳಲ್ಲಿ ಕೋರ್ಸ್ ಮಾಡಿದರೆ ಕೆಲಸ ದಕ್ಕಿಸಿಕೊಳ್ಳಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.