ADVERTISEMENT

ಕ್ಯಾಂಟೀನ್ ಎಂಬ ಅನುಭವ ಮಂಟಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:31 IST
Last Updated 2 ಏಪ್ರಿಲ್ 2019, 19:31 IST
ಚಿತ್ರ: ಎಸ್‌.ವಿ.ಹೂಗಾರ್‌
ಚಿತ್ರ: ಎಸ್‌.ವಿ.ಹೂಗಾರ್‌   

ಕಾಲೇಜು ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುವುದು ಕಾಲೇಜಿನಲ್ಲಿರುವ ಕ್ಯಾಂಟೀನ್‌ ಅಲ್ವಾ. ಹಾಗೆಯೆ ನಮ್ಮ ವಿವಿ ಕ್ಯಾಂಪಸ್ಸಿನಲ್ಲಿ ಜಗ್ಗಣ್ಣನ ಕ್ಯಾಂಟೀನ್ ತುಂಬಾ ಫೇಮಸ್. ಸದಾ ನಗುತ್ತಾ ಆತ್ಮೀಯವಾಗಿ ಸ್ವಾಗತಿಸುವ ಜಗ್ಗಣ್ಣನ ಕ್ಯಾಂಟೀನ್‌ನಲ್ಲಿ ತಯಾರಾಗುವ ಟೀ, ಗೋಬಿ ಮಂಚೂರಿ, ಪಾನಿಪುರಿ, ದೋಸೆ ಇತ್ಯಾದಿಗಳು ನಮಗೆ ಇಷ್ಟವಾಗುತ್ತಿದ್ದವು.

ಹಾಸ್ಟೆಲ್‌ನಲ್ಲಿ ಉಪ್ಪು ಖಾರವಿಲ್ಲದ ಊಟ ತಿನ್ನುವ ನಮಗೆ ಜಗ್ಗಣ್ಣನ ಕ್ಯಾಂಟೀನ್‌ನಲ್ಲಿರುವ ತಿಂಡಿಗಳೇ ಅಮೃತ. ಅದರಲ್ಲೂ ಸ್ನೇಹಿತರ ಹುಟ್ಟುಹಬ್ಬದಂತಹ ಮತ್ತೆ ಏನೇ ವಿಶೇಷವಿದ್ದರೂ ಚಿಕ್ಕದಾಗಿ ಟೀ ಪಾರ್ಟಿ ಮಾಡೋಣ ಅಂತ ಹೇಳಿ ನಮಗೆ ಬೇಕಾಗಿದ್ದನ್ನೆಲ್ಲಾ ತಿಂದು ಸ್ನೇಹಿತರ ಜೇಬಿಗೆ ಕತ್ತರಿ ಹಾಕುವ ನಮ್ಮ ನಾಟಕಕ್ಕೆ ಯಾವ ಬಹುಮಾನ ಕೊಟ್ಟರೂ ಸಾಲುತ್ತಿರಲಿಲ್ಲ. ಆದರಿಂದ ಕೆಲವು ಸ್ನೇಹಿತರು ಪಾರ್ಟಿ ಕೊಡಿಸುವುದರಿಲಿ, ನಮ್ಮ ಜೊತೆ ಕ್ಯಾಂಟೀನ್‌ಗೆ ಬರಲೂ ಹೆದರಿ, ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕ್ಯಾಂಟೀನ್‌ ಅನ್ನು ನಮ್ಮ ವಿವಿಯ ಪ್ರಣಯ ಪಕ್ಷಿಗಳ ಆಶ್ರಯಧಾಮ ಎಂದು ಕರೆದರೂ ತಪ್ಪಾಗಲಾರದು.

ನಮಗೆ ಕಣ್ಣಿಗೆ ಕಾಣದ, ಕಿವಿಗೆ ಕೇಳಿಸದ ಕಾಲೇಜಿನ ಎಷ್ಟೋ ವಿಷಯಗಳು ತಿಳಿಯುವುದು ಇಲ್ಲಿಯೇ. ಹಾಗೇಯೇ ಯಾವುದೇ ರೀತಿಯ ಸೀನಿಯರ್ಸ್ ಮತ್ತು ಜ್ಯೂನಿಯರ್ ಎಂಬ ಯಾವ ಭೇದ ಭಾವವಿಲ್ಲದೇ, ಒಂದೇ ತಾಯಿಯ ಮಕ್ಕಳಂತೆ ಸ್ನೇಹಿತರ ತಟ್ಟೆಯಲ್ಲಿನ ತಿಂಡಿಯನ್ನು ಅವರಿಗೆ ತಿನ್ನಲು ಬಿಡದಂತೆ ಬಕಾಸುರರಂತೆ ತಿನ್ನುವ ನಮ್ಮನ್ನು ನೋಡಿ ಜಗ್ಗಣ್ಣನ ತುಟಿ ಅಂಚಿನಲ್ಲಿ ನಗು ಬರುತ್ತಿತ್ತು. ಎಷ್ಟೋ ಬಾರಿ ತರಗತಿಯ ಮಧ್ಯದಲ್ಲಿ ಹುಷಾರಿಲ್ಲವೆಂದು ಕಾರಣ ಹೇಳಿ ಕ್ಯಾಂಟೀನ್‌ಗೆ ಹೋದ ನಿದರ್ಶನಗಳೇ ಹೆಚ್ಚು.

ADVERTISEMENT

ಪ್ರತಿ ದಿನ ಸಂಜೆ ಕ್ಯಾಂಟೀನ್ ಟೀ ಕುಡಿಯದೇ ಹಾಸ್ಟೆಲ್‌ಗೆ ಹೋದ ದಿನವಿರಲಿಲ್ಲ. ಅದರಲ್ಲೂ ನಮ್ಮ ವಿಭಾಗದ ಸ್ನೇಹಿತರ ಜೊತೆ ಕ್ಯಾಂಟೀನ್‌ಗೆ ಲಗ್ಗೆ ಇಟ್ಟರೆ ವಾಪಸ್ ಹಿಂತಿರುಗಿ ಬರುವವರೆಗೂ ನಮ್ಮದೇ ಪ್ರಪಂಚದಲ್ಲಿ ಅಕ್ಕಪಕ್ಕ ಕೂತವರನ್ನು ರೇಗಿಸಿಕೊಂಡು ಬರುತ್ತಿದ್ದೆವು. ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವವರಿಂದ ಹಿಡಿದು ಅಡುಗೆ ಮಾಡುವ ಭಟ್ಟರಿಗೂ ತಲೆಗೆ ಹುಳ ಬಿಡುತ್ತಿದ್ದೆವು. ನಮ್ಮ ಗಲಾಟೆಯಿಂದಲೇ ಕ್ಯಾಂಟೀನ್‌ಗೆ ಒಂದು ಕಳೆ ಬರುತ್ತಿತ್ತು. ನಮ್ಮ ವಿವಿ ಕ್ಯಾಂಪಸ್ಸಿನಲ್ಲಿ ಕ್ಯಾಂಟೀನ್‌ನಲ್ಲಿ ಸಿಗುವ ಸ್ವಾಂತಂತ್ರ್ಯ ಮತ್ತೆಲ್ಲೂ ಸಿಗುವುದಿಲ್ಲ.ಗೆಳೆಯನ್ನೊಬ್ಬನ ಗಮನವನ್ನು ಬೇರೆಡೆ ಸೆಳೆದು ಅವನ ಪಾನಿಪುರಿಯ ಪಾನಿಯನ್ನು ನಾವು ಅರ್ಧ ಹೀರಿ ಆತ ಈ ಕಡೆ ನೋಡುವುದರ ಒಳಗೆ ಅದಕ್ಕೆ ನೀರನ್ನು ಸೇರಿಸುತ್ತಿದ್ದೆವು. ನಂತರ ಸುಮ್ಮನೆ ಏನೂ ಗೊತ್ತಿಲ್ಲದಂತೆ ಕೂತು ಅವನು ಕುಡಿದಾಗ ಅವನ ಪೇಚಾಟ ನೋಡಿ ನೋಡುತ್ತಿದ್ದೆವು. ಹೀಗೆ ನಮ್ಮ ತರ್ಲೆ ತುಂಟಾಟಗಳಿಗೆ ಮಿತಿಯೇ ಇರುತ್ತಿರಲಿಲ್ಲ.

ಇದು ನಮ್ಮ ಹಾಗೇ ಅದೆಷ್ಟೋ ಜನ ವಿದ್ಯಾರ್ಥಿಗಳಿಗೆ ನೆನಪುಗಳ ತಂಗುದಾಣವಾಗಿದೆ. ಅವರು ನಮ್ಮ ಹಾಗೇ ಸಮಯ ಕಳೆದು ಹೋಗಿದ್ದಾರೆ.ಈಗ ನಮ್ಮ ಸರದಿ ಅಷ್ಟೇ. ಕ್ಯಾಂಟೀನ್ ಕೇವಲ ಮೋಜು ಮಸ್ತಿ ಅಷ್ಟೇ ಅಲ್ಲದೆ ಹಸಿದವರಿಗೆ ಅಮೃತ ನೀಡುವ ಪುಣ್ಯ ಸ್ಥಳವಾಗಿದೆ. ವಿವಿ ಕ್ಯಾಂಪಸ್‌ನಲ್ಲಿ ಈ ಒಂದು ಅನುಭವ ಮಂಟಪದಲ್ಲಿ ನನ್ನ ಹಾಗೂ ನನ್ನ ಸ್ನೇಹಿತರ ನೆನಪಿನ ಗಂಟು ಸಾಕಷ್ಟಿವೆ. ಹೀಗೆ ವಿದ್ಯಾರ್ಥಿ ಜೀವನದಲ್ಲಿ ಅದ್ಭುತ ಅನುಭವ ನೀಡುವ ಈ ಒಂದು ಅನುಭವ ಮಂಟಪವನ್ನು ನೆನಪಿಸಿಕೊಂಡಾಗ ಕಣ್ಣಿಂಚಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವೊಂದು ಘಟನೆಗಳನ್ನು ನೆನೆದು ನಗು ಬರುತ್ತದೆ.

-ಭಾಗ್ಯಶ್ರೀ ಎಸ್‌., ಕುವೆಂಪು ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.