ADVERTISEMENT

ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಕಾರ್ಯಕ್ರಮಕ್ಕೆ ಸಿಬಿಎಸ್‌ಇ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:30 IST
Last Updated 24 ಮಾರ್ಚ್ 2021, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 6 ರಿಂದ 10ನೇ ತರಗತಿಗಳ ಇಂಗ್ಲಿಷ್‌ (ಓದುವುದು), ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಕಾರ್ಯಕ್ರಮಕ್ಕೆ ಸಿಬಿಎಸ್‌ಇ ಬುಧವಾರ ಚಾಲನೆ ನೀಡಿತು.

‘ಈ ಮೌಲ್ಯಮಾಪನ ಕಾರ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿರೂಪಿತ ಕಲಿಕಾ ಮಾದರಿಗೆ ಅನುಗುಣವಾಗಿ ಇರಲಿದೆ. ಪ್ರಸ್ತುತ ಸಿಬಿಎಸ್‌ಇ ಅನುಸರಿಸುತ್ತಿರುವ ಮೌಲ್ಯಮಾಪನ ವ್ಯವಸ್ಥೆಯ ಬದಲಾಗಿ ನೂತನ ಮೌಲ್ಯಮಾಪನ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆ ಮುಂದಿನ 2–3 ವರ್ಷಗಳಲ್ಲಿ ಕಾರ್ಯಗತವಾಗುವುದು’ ಎಂದು ಸಿಬಿಎಸ್‌ಇ ಚೇರಮನ್‌ ಮನೋಜ್‌ ಅಹುಜಾ ಹೇಳಿದರು.

‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯ ಆಶಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಒಳಗೊಂಡಿದೆ. 21ನೇ ಶತಮಾನದ ನಿರೀಕ್ಷೆಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ತಯಾರು ಮಾಡುವ ಗುರಿ ಹೊಂದಿದೆ. ಕಂಠಪಾಠಕ್ಕೆ ಒತ್ತು ನೀಡುವ ಕಲಿಕೆಗಿಂತ ಸಾಮರ್ಥ್ಯ ಆಧಾರಿತ ಶಿಕ್ಷಣಕ್ಕೆ ಎನ್‌ಇಪಿಯಲ್ಲಿ ಮಹತ್ವ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಬ್ರಿಟಿಷ್‌ ಕೌನ್ಸಿಲ್‌ ಹಾಗೂ ಬ್ರಿಟನ್‌ನ ಮೂರು ಸಂಸ್ಥೆಗಳಾದ ಕೇಂಬ್ರಿಜ್‌, ಎನ್‌ಎಆರ್‌ಐಸಿ ಹಾಗೂ ಅಲ್ಫಾಪ್ಲಸ್‌ ಸಹಯೋಗದಲ್ಲಿ ಸಿಬಿಎಸ್‌ಇ ‘ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಕಾರ್ಯಕ್ರಮ’ವನ್ನು ಸಿದ್ಧಪಡಿಸಲಿದೆ. ಈ ನಿಟ್ಟಿನಲ್ಲಿ ಕಾರ್ಯವೂ ಆರಂಭವಾಗಿದೆ’ ಎಂದರು.

‘ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ 40 ಜನ ಮೌಲ್ಯಮಾಪನ ಡಿಸೈನರ್ಸ್‌, 180 ಜನ ಪರೀಕ್ಷಾ ವಿಷಯ ಸಿದ್ಧಪಡಿಸುವವರು ಹಾಗೂ 360 ಜನ ಮಾಸ್ಟರ್‌ ಮೆಂಟರ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ಮಾದರಿ ಪ್ರಶ್ನೆಗಳ ಕೋಶ ಹಾಗೂ ಮಾದರಿ ಪಾಠಗಳ ಕಾರ್ಯಯೋಜನೆಗಳನ್ನು ಇವರು ಸಿದ್ಧಪಡಿಸುವರು’ ಎಂದು ಅವರು ವಿವರಿಸಿದರು.

‘ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಹಭಾಗಿತ್ವ ಭಾರತ ಮತ್ತು ಬ್ರಿಟನ್‌ ನಡುವಿನ ಉತ್ತಮ ಸಂಬಂಧಕ್ಕೆ ಸಾಕ್ಷಿ’ ಎಂದು ಬ್ರಿಟಿಷ್‌ ಕೌನ್ಸಿಲ್‌ನ ಭಾರತ ಶಾಖೆಯ ನಿರ್ದೇಶಕ ಬಾರ್ಬರಾ ವಿಕ್‌ಹ್ಯಾಮ್‌ ಅಭಿಪ್ರಾಯಪಟ್ಟರು.

‘ಸುಧಾರಿತ ಈ ಮೌಲ್ಯಮಾಪನ ಕಾರ್ಯಕ್ರಮದಿಂದ ಸಿಬಿಎಸ್ಇ ಶಾಲೆಗಳಲ್ಲಿ ಬೋಧನೆ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚುವುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.