ADVERTISEMENT

ಸ್ಪರ್ಧಾವಾಣಿ: ಚಕಿತಗೊಳಿಸುವ ಚೀನಾದ ನವ ಸಂಶೋಧನೆಗಳು!

ಚನ್ನಬಸಪ್ಪ ರೊಟ್ಟಿ
Published 26 ಫೆಬ್ರುವರಿ 2025, 14:39 IST
Last Updated 26 ಫೆಬ್ರುವರಿ 2025, 14:39 IST
<div class="paragraphs"><p>ಸ್ಪರ್ಧಾವಾಣಿ: ಚಕಿತಗೊಳಿಸುವ ಚೀನಾದ ನವ ಸಂಶೋಧನೆಗಳು!</p></div>

ಸ್ಪರ್ಧಾವಾಣಿ: ಚಕಿತಗೊಳಿಸುವ ಚೀನಾದ ನವ ಸಂಶೋಧನೆಗಳು!

   

ಬಾ ಹ್ಯಾಕಾಶದಲ್ಲಿ ಚೀನಾ ‘ಕೃತಕ ದ್ಯುತಿಸಂಶ್ಲೇಷಣೆ’!

ಇತ್ತೀಚೆಗೆ, ‘ಟಿಯಾಂಗಾಂಗ್’ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಚೀನಾದ ‘ಶೆನ್‌ಝೌ–19’ ಬಾಹ್ಯಾಕಾಶ ನೌಕೆಯ ಸಿಬ್ಬಂದಿ ‘ಕೃತಕ ದ್ಯುತಿಸಂಶ್ಲೇಷಣೆ’ ತಂತ್ರಜ್ಞಾನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದರು. ಈ ಅನ್ವೇಷಣೆಯು ಬಾಹ್ಯಾಕಾಶದಲ್ಲಿ ಆಮ್ಲಜನಕ ಮತ್ತು ರಾಕೆಟ್ ಇಂಧನ ಪದಾರ್ಥಗಳ ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ. 2030ರ ವೇಳೆಗೆ ಯೋಜಿತ ಸಿಬ್ಬಂದಿಯೊಂದಿಗೆ ಚಂದ್ರನ ಮೇಲೆ ಇಳಿಯುವುದು ಸೇರಿದಂತೆ ಭವಿಷ್ಯದ ಕಾರ್ಯಾಚರಣೆಗಳಿಗೆ ಹೆಚ್ಚಿನ ಬೆಂಬಲ ಒದಗಿಸುತ್ತದೆ. ‘ಕೃತಕ ದ್ಯುತಿಸಂಶ್ಲೇಷಣೆ’ ಸಸ್ಯಗಳು ಸೂರ್ಯನ ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರನ್ನು ಆಮ್ಲಜನಕ ಮತ್ತು ಗ್ಲೂಕೋಸ್ ಆಗಿ ಪರಿವರ್ತಿಸಲು ಬಳಸುವ ನೈಸರ್ಗಿಕ ಪ್ರಕ್ರಿಯೆಯನ್ನು ಅನುಕರಿಸುತ್ತದೆ.

ADVERTISEMENT

ಶೆನ್‌ಝೌ–19 ಸಿಬ್ಬಂದಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಇಂಗಾಲದ ಡೈಆಕ್ಸೈಡ್ ಮತ್ತು ನೀರನ್ನು ಆಮ್ಲಜನಕ ಮತ್ತು ಹೈಡ್ರೋಕಾರ್ಬನ್ ಇಂಧನಗಳಾಗಿ ಪರಿವರ್ತಿಸಲು ಅರೆವಾಹಕ ವೇಗವರ್ಧಕಗಳನ್ನು ಬಳಸುತ್ತದೆ. ಈ ನವೀನ ವಿಧಾನವು ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ, ಕೋಣೆಯ ಉಷ್ಣಾಂಶ ಮತ್ತು ಪ್ರಮಾಣಿತ ವಾತಾವರಣದ ಒತ್ತಡದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಡ್ರಾಯರ್ ಆಕಾರದ ಸಾಧನವನ್ನು ಬಳಸಿಕೊಂಡು ಸಿಬ್ಬಂದಿ 12 ಪ್ರಯೋಗಗಳನ್ನು ನಡೆಸಿದರು. ಕೋಣೆಯ ಉಷ್ಣಾಂಶದಲ್ಲಿ ಇಂಗಾಲದ ಡೈಆಕ್ಸೈಡ್ ಪರಿವರ್ತನೆ, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಅನಿಲ ಸಾಗಣೆ ಮತ್ತು ಬೇರ್ಪಡಿಕೆ ಮತ್ತು ಪ್ರತಿಕ್ರಿಯಾ ಉತ್ಪನ್ನಗಳ ನೈಜ–ಸಮಯದ ಪತ್ತೆ ಇವುಗಳಲ್ಲಿ ಸೇರಿವೆ.

ಈ ತಂತ್ರಜ್ಞಾನ ಬಾಹ್ಯಾಕಾಶ ಯಾತ್ರೆಗಳಿಗೆ ಬಹಳ ಮುಖ್ಯವಾಗಿದೆ. ದೀರ್ಘಾವಧಿಯ ಕಾರ್ಯಾಚರಣೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಭರವಸೆಯನ್ನು ಇದು ನೀಡಿದೆ. ಬಾಹ್ಯಾಕಾಶದಲ್ಲಿ ಆಮ್ಲಜನಕ ಮತ್ತು ಇಂಧನವನ್ನು ಉತ್ಪಾದಿಸುವ ಮೂಲಕ, ಗಗನಯಾತ್ರಿಗಳು ಭೂಮಿಯಿಂದ ಬರುವ ಸರಬರಾಜಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಭವಿಷ್ಯದಲ್ಲಿ ದೂರದ ಆಕಾಶಕಾಯಗಳನ್ನು ಅನ್ವೇಷಿಸಲು ಮತ್ತು ಸಂಭಾವ್ಯ ಮಾನವ ವಸಾಹತುಗಳನ್ನು ಸ್ಥಾಪಿಸಲು ಈ ಸಾಮರ್ಥ್ಯವು ನಿರ್ಣಾಯಕವಾಗಲಿದೆ.

ಈ ಹಿಂದೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಉಸಿರಾಡುವ ಗಾಳಿಯನ್ನು ಉತ್ಪಾದಿಸಲು ಶಕ್ತಿ–ತೀವ್ರ ವಿಧಾನಗಳನ್ನು ಬಳಸಲಾಗಿತ್ತು. ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸಲು ಅದು ಸೌರಫಲಕಗಳನ್ನು ಬಳಸಿಕೊಂಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಕೃತಕ ದ್ಯುತಿಸಂಶ್ಲೇಷಣೆ ವಿಧಾನವು ದೀರ್ಘಕಾಲೀನ ಕಾರ್ಯಾಚರಣೆಗಳಿಗೆ ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರ ವಿಧಾನವಾಗಿ ಹೊರಹೊಮ್ಮಿದೆ. ಭೂಮ್ಯಾತೀತ ಕೃತಕ ದ್ಯುತಿಸಂಶ್ಲೇಷಣೆಯ ಕುರಿತು ಚೀನಾದ ಸಂಶೋಧನೆಯು 2015ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯಡಿ ಬಾಹ್ಯಾಕಾಶ ನೌಕೆಗೆ ಪ್ರೊಪಲ್ಷನ್ ವ್ಯವಸ್ಥೆ ಒದಗಿಸುವ ಮೀಥೇನ್‌ನಂಥ ಇಂಧನಗಳನ್ನು ಉತ್ಪಾದಿಸುವ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ.

‘ಕೃತಕ ದ್ಯುತಿಸಂಶ್ಲೇಷಣೆ’ ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣದಲ್ಲಿ ಮಾನವನ ಬದುಕುವಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಮ್ಲಜನಕ ಮತ್ತು ಇಂಧನದ ಸುಸ್ಥಿರ ಮೂಲವನ್ನು ರಚಿಸುವ ಮೂಲಕ, ಗಗನಯಾತ್ರಿಗಳು ಭೂಮಿಯಿಂದ ಮರುಪೂರೈಕೆ ಇಲ್ಲದೇ ಜೀವಾಧಾರಕ ವ್ಯವಸ್ಥೆಗಳನ್ನು ನಿರ್ವಹಿಸಬಹುದು.

ಪರಮಾಣು ಸಮ್ಮಿಳನದಲ್ಲಿ ಚೀನಾ ಗಮನಾರ್ಹ ಪ್ರಗತಿ

ಚೀನಾ ಇತ್ತೀಚೆಗೆ ಪರಮಾಣು ಸಮ್ಮಿಳನ ಸಂಶೋಧನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಪ್ರಾಯೋಗಿಕ ಸುಧಾರಿತ ಸೂಪರ್‌ಕಂಡಕ್ಟಿಂಗ್ ಟೋಕಮಾಕ್ (EAST: Experimental Advanced Superconducting Tokamak) ಪ್ಲಾಸ್ಮಾವನ್ನು 1,000 ಸೆಕೆಂಡುಗಳ ಕಾಲ ಉಳಿಸಿಕೊಂಡಿದೆ. ಇದು 2023ರಲ್ಲಿ ಸ್ಥಾಪಿಸಲಾದ 403 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಮೀರಿಸಿದೆ.

ಪರಮಾಣು ಸಮ್ಮಿಳನವು ಶಕ್ತಿಯನ್ನು ಬಿಡುಗಡೆ ಮಾಡಲು ಪರಮಾಣು ನ್ಯೂಕ್ಲಿಯಸ್‌ಗಳನ್ನು ವಿಲೀನಗೊಳಿಸುವ ಕಾರ್ಯತಂತ್ರವಾಗಿದೆ. ಪರಮಾಣುಗಳನ್ನು ವಿಭಜಿಸುವ ಪರಮಾಣು ವಿದಳನಕ್ಕಿಂತ ಭಿನ್ನವಾಗಿ, ಸಮ್ಮಿಳನವು ಕನಿಷ್ಠ ವಿಕಿರಣಶೀಲ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಮತ್ತು ಹಸಿರುಮನೆ ಅನಿಲಗಳನ್ನು ಹೊರಸೂಸುವುದಿಲ್ಲ. ಹವಾಮಾನ ಬದಲಾವಣೆ ಹಾಗೂ ಜಾಗತಿಕ ಉಷ್ಣತೆ ಏರಿಕೆಯನ್ನು ಎದುರಿಸುವ ನಿಟ್ಟಿನಲ್ಲಿ ಮತ್ತು ಜಾಗತಿಕ ಇಂಧನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಸಂಶೋಧನೆ ಗಮನಾರ್ಹ ಪ್ರಗತಿಯಾಗಿದೆ. ಪರಮಾಣು ಸಮ್ಮಿಳನ ಕನಿಷ್ಠ ಪರಿಸರ ಪ್ರಭಾವದೊಂದಿಗೆ ವಾಸ್ತವಿಕವಾಗಿ ಅನಿಯಮಿತ ಶಕ್ತಿಯನ್ನು ನೀಡುತ್ತದೆ. ಇದರಿಂದ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆಯಾಗುತ್ತದೆ.

ಪರಮಾಣು ಸಮ್ಮಿಳನ ಸಂಶೋಧನೆಯಡಿ ಚೀನಾ ಗಣಿತ ಶಕ್ತಿಯನ್ನು ಉತ್ಪಾದಿಸುತ್ತಿರುವ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಚೀನಾ ಸೃಷ್ಟಿಸಿದ ‘ಕೃತಕ ಸೂರ್ಯ’ ಎಂದು ಕರೆಯಲಾಗುತ್ತದೆ. ಈ ಪ್ರಯೋಗವನ್ನು ಚೀನಾದ ಹೆಫೆಯಲ್ಲಿರುವ ಪ್ಲಾಸ್ಮಾ ಭೌತಶಾಸ್ತ್ರ ಸಂಸ್ಥೆಯಲ್ಲಿ ನಡೆಸಲಾಗದೆ. ಇಲ್ಲಿ ಸ್ಥಾಪಿಸಿರುವ ರಿಯಾಕ್ಟರ್ ಸೂರ್ಯನ ಪರಮಾಣು ಸಮ್ಮಿಳನ ಪ್ರಕ್ರಿಯೆಯನ್ನು ಪುನರಾವರ್ತಿಸಿ ಅಪಾರ ಪ್ರಮಾಣದ ಶಕ್ತಿಸೃಷ್ಟಿಸುವ ಗುರಿಯನ್ನು ಹೊಂದಿದೆ. ಚೀನಾ 2006ರಿಂದ ಕಾರ್ಯನಿರ್ವಹಿಸುತ್ತಿದ್ದು, ದಕ್ಷತೆ ಮತ್ತು ಸ್ಥಿರತೆಯನ್ನು ಸುಧಾರಿಸಲು ಹಾಗೂ ದೃಢೀಕರಿಸಲು ವ್ಯಾಪಕ ಪ್ರಯೋಗಗಳನ್ನು ನಡೆಸುತ್ತಿದೆ.

ಸಮ್ಮಿಳನ ಶಕ್ತಿ ಬಳಸಲು ಚೀನಾ ‘ಟೋಕಮ್ಯಾಕ್’ ಎಂಬ ಪ್ರಾಯೋಗಿಕ ಸಾಧನ ವಿನ್ಯಾಸಗೊಳಿಸಿದ್ದು, ‘ಟೋಕಮ್ಯಾಕ್’ ಸಮ್ಮಿಳನದ ಶಕ್ತಿಯನ್ನು ಶಾಖದ ರೂಪದಲ್ಲಿ ಹೀರಿಕೊಳ್ಳುತ್ತದೆ. ಇದು ಸಾಂಪ್ರದಾಯಿಕ ವಿದ್ಯುತ್ ಸ್ಥಾವರಗಳಂತೆಯೇ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ EAST ರಿಯಾಕ್ಟರ್ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾ ದೇಶ ‘HL–2A’ ಮತ್ತು ‘J–TEXT’ ಸೇರಿದಂತೆ ಹಲವಾರು ಟೋಕಮ್ಯಾಕ್‌ಗಳನ್ನು ನಿರ್ವಹಿಸುತ್ತಿದೆ. ಚೀನಾದ ಅತಿದೊಡ್ಡ ಮತ್ತು ಸುಧಾರಿತ ಸಮ್ಮಿಳನ ಸಾಧನ HL–2M ಟೋಕಮ್ಯಾಕ್ ಅನ್ನು ಡಿಸೆಂಬರ್ 2020 ರಲ್ಲಿ ಯಶಸ್ವಿಯಾಗಿ ಚಾಲಿತಗೊಳಿಸಲಾಗಿದೆ.

ಚೀನಾ ಅಂತರರಾಷ್ಟ್ರೀಯ ‘ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್’ (ITER: International Thermonuclear Experimental Reactor) ತಯಾರಿಕೆಯ ಯೋಜನೆಯಲ್ಲೂ ಸಕ್ರಿಯವಾಗಿದ್ದು ಮಹತ್ವದ ಕೊಡುಗೆಗಳನ್ನು ನೀಡಿದೆ.

‘ಡೀಪ್‌ಸೀಕ್‌’ ಸಂಚಲನ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಸಂಚಲನ ಸೃಷ್ಟಿಸಿರುವ ಚೀನಾದ ‘ಡೀಪ್‌ಸೀಕ್‌’ ಸ್ಟಾರ್ಟ್‌ಅಪ್‌, ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದೆ. ‘ಡೀಪ್‌ಸೀಕ್‌’ ಅಭಿವೃದ್ಧಿ ಪಡಿಸಿರುವ ‘ಡೀಪ್‌ಸೀಕ್‌ R1’ ಎಂಬ ಜನರೇಟಿವ್‌ AI ಮಾದರಿ (ಮಾಡೆಲ್‌) ಅಮೆರಿಕದ ಓಪನ್‌ AIನ ಚಾಟ್‌ GPT ಸೇರಿದಂತೆ ದೊಡ್ಡದೊಡ್ಡ ತಂತ್ರಜ್ಞಾನ ಕಂಪನಿಗಳು ರೂಪಿಸಿರುವ ಜನರೇಟಿವ್‌ AI ಮಾದರಿಗಳಿಗೆ ಸವಾಲೊಡ್ಡಿದೆ.

ಡೀಪ್‌ಸೀಕ್‌ ಕಂಪನಿ ತನ್ನ ವಿ3 ಜನರೇಟಿವ್‌ AI ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದನ್ನು 2,000ದಷ್ಟು ವಿಶೇಷ ಕಂಪ್ಯೂಟರ್‌ ಚಿಪ್‌ಗಳನ್ನು (N–vediaದ ಎಚ್‌800 GPU ಚಿಪ್‌ಗಳು) ಬಳಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಡೀಪ್‌ಸೀಕ್‌ ಹೇಳಿಕೊಂಡಿದ್ದು, ಬೇರೆ ಕಂಪನಿಗಳು ಇದೇ ರೀತಿಯ ಜನರೇಟಿವ್‌ AI ಮಾದರಿಗಳಿಗೆ 16 ಸಾವಿರದಷ್ಟು, ಹೆಚ್ಚು ಸಾಮರ್ಥ್ಯದ H100 ಚಿ‍ಪ್‌ಗಳನ್ನು ಬಳಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.