ADVERTISEMENT

ಕ್ಲಾಸ್‍ರೂಮ್ ಎಂಬ ‘ಅಡ್ಡ’!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 19:30 IST
Last Updated 13 ನವೆಂಬರ್ 2018, 19:30 IST
ClassRoom
ClassRoom   

ಕಾಲೇಜು ಜೀವನದಲ್ಲಿ ನಿನಗೆ ಯಾವುದು ತುಂಬಾ ಇಷ್ಟ ಅಂತ ಯಾರಾದರು ಕೇಳಿದರೆ, ಥಟ್‌ ಅಂತ ‘ಕ್ಲಾಸ್‍ರೂಮ್’ ಅನ್ನುತ್ತೀನಿ. ಕಾಲೇಜು ಅಂತಲ್ಲ, ಶಾಲಾದಿನಗಳಿಂದಲೂ ನನಗೆ ಕ್ಲಾಸ್‍ರೂಮ್ ಅಂದರೆ ಬಹಳ ಪ್ರೀತಿ; ಸ್ವಂತ ಅನ್ನೋ ಭಾವನೆ. ನಾಲ್ಕು ಗೋಡೆಗಳನ್ನು ಸೀಳಿ ಸಾಗೋ ನಮ್ಮ ಯೋಚನೆ, ಕನಸು ಎಲ್ಲವೂ ರೋಮಾಂಚನ ಅನ್ನಿಸತ್ತೆ ನನಗೆ. ನಮಗಂತೂ ಅದೇ ಲೋಕ, ಅದೇ ವಿಶ್ವ.

ಶಾಲೆ, ಪಿಯು ಅಥವಾ ಡಿಗ್ರಿ ಕಾಲೇಜಿಗೆ ಹೋದರೆ, ‘ಹಾಯ್‌, ನೋಡು ಇದು ನಮ್ಮ ಕ್ಲಾಸಾಗಿತ್ತು ಅಂತ’ ಒಮ್ಮೆ ಹಳೆ ನೆನಪು ಒತ್ತರಿಸಿ ಬರುತ್ತದೆ. ನಾವು ಪಿಯು ಮುಗಿಸೋ ಸಮಯ, ನಮ್ಮ ಕ್ಲಾಸ್‌ ಬಿಟ್ಟು ಹೋಗೋಕೆ ಮನಸ್ಸು ಒಪ್ಪಲಿಲ್ಲ. ಕೊನೆಗೆ ಖಾಲಿ ಕ್ಲಾಸ್‌ರೂಮ್‌ನ ವಿಡಿಯೊ ಮಾಡಿದ್ವಿ. ಈಗಲೂ ಅದು ನಮ್ಮ ಬಳಿ ಇದೆ. ನೋಡಿ, ನಾವು ಅಪ್ಪಿತಪ್ಪಿಯೂ ‘ನನ್ನ’ ಕ್ಲಾಸ್ ಅನ್ನುವುದಿಲ್ಲ, ‘ನಮ್ಮ’ ಕ್ಲಾಸ್ ಅನ್ನುತ್ತೇವೆ. ಇದೇ ನನಗೆ ಬಹಳ ಇಷ್ಟ ಆಗೋದು.

ನಾನು ಈಗ ಪತ್ರಿಕೋದ್ಯಮದಲ್ಲಿ ಎಂ.ಎ. ಓದುತ್ತಾ ಇದ್ದೇನೆ. ಕೇಳಬೇಕಾ, ಇಡೀ ಕ್ಲಾಸ್ ಕುದಿತಾ ಇರತ್ತೆ! ಜೊತೆಗೆ ಇಡೀ ಕಾಲೇಜಲ್ಲಿ ಹೆಚ್ಚು ಲವಲವಿಕೆಯಿಂದ ಇರುವುದು ನಮ್ಮ ಕ್ಲಾಸ್‍ (ಬೇರೆ ವಿಷಯಗಳ ಕ್ಲಾಸ್ ಚಟುವಟಿಕೆಯಿಂದ ಇರಲ್ಲ ಅಂತಲ್ಲ). ಸರ್ ಬಂದು ಪಾಠ ಶುರು ಮಾಡಿದರು, ಪಾಠದ ಮಧ್ಯ ರಾಜಕೀಯ ಮಾತು ಅಂತ ಇಟ್ಟುಕೊಳ್ಳಿ ನಮ್ಮಲ್ಲಿ ಎಲ್ಲಿಲ್ಲದ ಉತ್ಸಾಹ. ಟಿ.ವಿ. ಚಾನೆಲ್ ಚರ್ಚೆ ರೇಂಜಿಗೆ ನಮ್ಮ ಚರ್ಚೆ ಶುರು. ಟಿ.ವಿ.ನಲ್ಲಿ ಜಗಳ ಆಡಿದಂತೆ ಜಗಳ – ಬೆಲ್ ಆದಮೇಲೂ ನಮ್ಮದು ಮುಗಿಯಲ್ಲ. ಆದರೆ ಒಂದು, ಎಷ್ಟೇ ಜಗಳ ಆಡಿದರೂ ಆಮೇಲೆ ಎಲ್ಲರೂ ಒಂದೇ. ‘ಬಾ ಮಚಿ’ ...... ಅಂತ ಒಂದು ರೌಂಡ್ ಕಾಲೇಜು ಸುತ್ತುಕೊಂಡು ಬಂದರೆ ಆಯಿತು.

ADVERTISEMENT

ಸಿ.ಆರ್. (ಕ್ಲಾಸ್ ರೆಪ್ರೆಸೆಂಟೇಟಿವ್) ಆದರಂತೂ... ಅದು ಕ್ಲಾಸ್‍ರೂಮ್ ಅಲ್ಲ, ನಮ್ಮ ಆಡಳಿತ ವ್ಯಾಪ್ತಿ. ಸಿ.ಆರ್. ಆಗಿ ಆಯ್ಕೆ ಆದಮೇಲೆ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ನನ್ನ ಆಯ್ಕೆ ಅನ್ನೋ ಮಟ್ಟಕ್ಕೆ ನಮ್ಮದೊಂದು ಭಾಷಣ. ಆಗ ನಮಗೆ ಅದು ಪಾರ್ಲಿಮೆಂಟ್ ಇದ್ದಂಗೆ! ಒಗ್ಗಟಿನ ಭಾಷಣ!

ನನ್ನದು ಶಿವಮೊಗ್ಗ, ಈಗ ಇರೋದು ದಕ್ಷಿಣ ಕನ್ನಡದ ಉಜಿರೆ. ಮನೆಯ ನೆನಪು ಬೇರೆ. ನಮ್ಮ ಸ್ನೇಹಿತರೇ ಕುಲಬಾಂಧವರು. ಅವರು ತರುವ ಹಲಸಿನಹಣ್ಣು, ಮಾವಿನಕಾಯಿಚಿತ್ರಾನ್ನ ದೊಡ್ಡ ರಂಪ ಮಾಡಿ ‘ನನಗೆ, ನನಗೆ’ ಅಂತ ತಿಂದಿದ್ದು, ಬೇಸರ ಆದಾಗ ಅತ್ತಿದ್ದು, ನಮ್ಮ ರಾಜಕೀಯ ಚರ್ಚೆಗಳು, ನಿಲ್ಲದ ಗಾಸಿಪ್ ಮಾತುಗಳು, ಪರೀಕ್ಷೆಗಾಗಿ ಎಲ್ಲರೂ ಕೂತು ಒಟ್ಟಿಗೆ ಓದಿದ್ದು.. ಅಬ್ಬಾ ಸಾವಿರ ನೆನಪುಗಳು.

ನಮ್ಮ ಜ್ಞಾನವನ್ನು ಹೆಚ್ಚಿಸುವ, ತಿದ್ದುವ ದೇಗುಲವಾಗಿ, ನಾಯಕತ್ವ ಗುಣ ಬೆಳೆಸುವ ಪಾರ್ಲಿಮೆಂಟ್ ಆಗಿ, ಜೀವನಪರೀಕ್ಷೆಗೆ ಸಿದ್ಧಗೊಳಿಸುವ ಗುರುವಾಗಿ, ನಮ್ಮ ಮೋಜು ಮಸ್ತಿಗೆ ‘ನಮ್ಮ ಅಡ್ಡ’ವಾಗಿ, ದೂರದ ಊರಿಂದ ಬಂದು ಇಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೆ ತಾಯಿಯಾಗಿ ಬೆಚ್ಚನೆಯ ಅನುಭವವನ್ನುನೀಡುವುದೇ ನಮ್ಮ ಕ್ಲಾಸ್‍ರೂಮ್. ಆ ಜಗತ್ತು ಕಲಿಸುವ ಪಾಠ ಅಮೂಲ್ಯವಾದುದು. ನಾಲ್ಕು ಗೋಡೆಗಳ ಮಧ್ಯ ಇದ್ದುಕೊಂಡೂ ಅದರಾಚೆಗೆ ನಮ್ಮನ್ನು ಯೋಚಿಸುವಂತೆ ಅನುವು ಮಾಡಿಕೊಡುವ ಕ್ಲಾಸ್‍ರೂಮ್ ನನಗೆ ಬಹಳ ಪ್ರಿಯ ಸ್ಥಳ.

ಆಲಾಪ,ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.