ADVERTISEMENT

ಜಿರಳೆ ಸಾಂಬಾರ್ ಕಥೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:45 IST
Last Updated 5 ಮಾರ್ಚ್ 2019, 19:45 IST
ಚಿತ್ರ: ಭಾವು ಪತ್ತಾರ್‌
ಚಿತ್ರ: ಭಾವು ಪತ್ತಾರ್‌   

ಕಾಲೇಜು ಜೀವನ ನೆನಪಾದಾಗಲೆಲ್ಲ ನಮ್ಮ ಕಣ್ಣಿನಲ್ಲಿ ಮಿಂಚಿನ ಸಂಚಲನವಾಗುವುದಂತು ನಿಜ. ‌‌ಕಾಲೇಜಿನ ಜೊತೆಗೆ ಅನೇಕರ ಜೀವನದಲ್ಲಿ ಹಾಸ್ಟೆಲ್ ಕೂಡ ಸವಿ ನೆನಪಿನ ಬುತ್ತಿಯಲ್ಲಿ ಹಸಿರಾಗಿರುತ್ತದೆ. ನಾನು ಕೂಡ ಕಾಲೇಜಿಗೆ ಸೇರಿದ ಮೇಲೆ ವಸತಿ, ಊಟಕ್ಕೆಂದು ಸೇರಿದ್ದು ಹಾಸ್ಟೆಲ್‌ಗೆ. ಅಲ್ಲಿಯ ಊಟವೋ ದೇವರಿಗೆ ಪ್ರೀತಿ. ಆ ಕಾರಣಕ್ಕೆ ಊಟ, ತಿಂಡಿಗೆ ಕಾಲೇಜ್ ಕ್ಯಾಂಟಿನ್‌ ಅನ್ನೇ ಅವಲಂಬಿಸಿದ್ದೆವು.ಅಲ್ಲಿ ಉಡುಪಿ ಕ್ಯಾಂಟೀನ್‌ನವರ ಊಟವೆಂದರೆ ಬೆರಳು ಕಚ್ಚುವಷ್ಟು ರುಚಿ. ಆದರೆ ಕೆಲವೇ ದಿನಗಳಲ್ಲಿ ನಮ್ಮ ಕ್ಯಾಂಟೀನ್‌ನವರ ಒಂದು ವರ್ಷದ ಒಪ್ಪಂದ ಮುಗಿದು ಬೇರೆಯವರು ಆ ಕ್ಯಾಂಟೀನ್‌ ಅಡುಗೆಯನ್ನು ಆವರಿಸಿದ್ದರು. ಆದರೆ ಆ ಕ್ಯಾಂಟೀನ್‌ನವರ ನಡೆ ಮಾತ್ರ ನಮ್ಮನ್ನು ಸಿಟ್ಟಿಗೇಳಿಸುತ್ತಿತ್ತು. ಅವರು ಹೇಗೆಂದರೆ ಬೇಕಿದ್ದರೆ ತಿನ್ನಿ, ಇಲ್ಲ ಎದ್ದು ಹೋಗಿ ಎನ್ನುವ ಅಹಂಕಾರದ ಮಾತು ಅವರದ್ದು. ಉಡುಪಿ ಕ್ಯಾಂಟೀನ್‌ ರುಚಿ ಸವಿದಿದ್ದ ನಮಗೆ ಈ ಕ್ಯಾಂಟಿನ್ ಊಟ, ತಿಂಡಿಯ ಜೊತೆಗೆ ಅವರ ಅಹಂಕಾರವೂ ಪೆಟ್ಟು ನೀಡಿತ್ತು. ಹೇಗಾದರೂ ಅವರಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದೆವು. ಅದಕ್ಕಾಗಿ ಜಿರಳೆ ಕಥೆಯನ್ನು ಹೆಣೆದು ಕಾರ್ಯರೂಪಕ್ಕೆ ತರಲು ಯೋಚಿಸಿದೆವು.

ಅಲ್ಲಿಂದ ನಮ್ಮ ಜಿರಳೆ ಹುಡುಕುವ ಕಾರ್ಯ ಆರಂಭವಾಗಿತ್ತು. ಹಾಸ್ಟೆಲ್‌ನಲ್ಲಿ ಮೂರು ದಿನವಾದರೂ ಜಿರಳೆ ಸಿಗದೆ ಕೊನೆಗೆ ಸ್ನೇಹಿತರ ಮನೆಯಿಂದ ಜಿರಳೆ ತರಲು ಹೇಳಿದೆವು. ಆ ಕ್ಯಾಂಟೀನ್‌ನವರು ನೀಡಿದ ಸಾಂಬಾರ್‌ ಬೌಲ್‌ಗೆ ಜಿರಳೆ ಹಾಕಿ, ಎಲ್ಲರನ್ನೂ ಕರೆದು ತೋರಿಸಿ ಮುಷ್ಕರ ಮಾಡಿ ಅವರ ಕ್ಯಾಂಟೀನ್‌ ಸೇವೆಯನ್ನು ಅಂತ್ಯಗೊಳಿಸಿದ್ದೆವು. ಆದರೆ ಮುಂದಿನ ಒಂದು ವರ್ಷದವರೆಗೆ ಇಡ್ಲಿ ಜೊತೆ ಚಟ್ನಿಯೇ ನಮಗೆ ಗತಿಯಾಗಿತ್ತು. ಯಾಕೆಂದರೆ ಸಾಂಬಾರ್‌ನಲ್ಲಿ ಮೆಣಸು ನೋಡಿದರೂ ನಾವು ಹಾಕಿದ ಜಿರಳೆ ನೆನಪಾಗಿ ಚಟ್ನಿಯೇ ಗತಿ ಎಂಬ ಪರಿಸ್ಥಿತಿ ನಮ್ಮದಾಗಿತ್ತು.
–ಸುಮಾ ಮಹೇಶ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT