ADVERTISEMENT

ಹತ್ತರ ನಂತರದ ಆತಂಕ: ಕಾಲೇಜು ಸೇರುವ ತವಕ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:30 IST
Last Updated 2 ಮೇ 2019, 19:30 IST
ನಗರದ ಮಲ್ಲೇಶ್ವರಂನಲ್ಲಿರುವ ಎಂಇಎಸ್ ಮಹಾವಿದ್ಯಾಲಯದ ಮುಂದೆ ಗುರುವಾರ ಪಿಯುಸಿ ನೋಂದಣಿ ಅರ್ಜಿಯನ್ನು ಪಡೆಯಲು ಸಾಲು ನಿಂತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು -ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್
ನಗರದ ಮಲ್ಲೇಶ್ವರಂನಲ್ಲಿರುವ ಎಂಇಎಸ್ ಮಹಾವಿದ್ಯಾಲಯದ ಮುಂದೆ ಗುರುವಾರ ಪಿಯುಸಿ ನೋಂದಣಿ ಅರ್ಜಿಯನ್ನು ಪಡೆಯಲು ಸಾಲು ನಿಂತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು -ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್   

ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬಂದಾಗಿದೆ. ಇದುವಿದ್ಯಾರ್ಥಿಗಳ ಬದುಕು ಹತ್ತಾರು ಕವಲುಗಳಾಗಿ ತೆರೆದುಕೊಳ್ಳುವ ಹೊತ್ತು. ಕೈತುಂಬಾ ಅಂಕ ಗಳಿಸಿರುವ ವಿದ್ಯಾರ್ಥಿಗಳುಭವಿಷ್ಯದ ಬದುಕಿಗೆ ಅಡಿಪಾಯ ಹಾಕುವ ಕಾಲೇಜು ಮೆಟ್ಟಿಲೇರುವ ತವಕದಲ್ಲಿದ್ದಾರೆ.

ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಆತಂಕದಲ್ಲಿರುವ ಪೋಷಕರು ಕಾಲೇಜುಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆ ಪದವಿಪೂರ್ವ ಶಿಕ್ಷಣ (ಪಿಯುಸಿ) ಆಗಿದೆ. ನಗರದ ಬಹುತೇಕ ಕಾಲೇಜುಗಳಲ್ಲಿ ಪಿಯು ಪ್ರವೇಶ ಅರ್ಜಿಗಳನ್ನು ವಿತರಿಸುತ್ತಿವೆ.

ವಿಜಯನಗರದ ಆರ್‌ಎನ್‌ಎಸ್‌ ವಿದ್ಯಾನಿಕೇತನ,ರಾಜಾಜಿನಗರದ ಕೆಎಲ್‌ಇ ಕಾಲೇಜು, ಬಸವನಗುಡಿ ಮತ್ತು ಜಯನಗರದಲ್ಲಿರುವ ವಿಜಯಾ ಕಾಲೇಜು, ನ್ಯಾಷನಲ್‌ ಕಾಲೇಜು, ಮಲ್ಲೇಶ್ವರದ ಎಂ.ಇ.ಎಸ್‌, ಕಿಶೋರ್‌ಕೇಂದ್ರ, ಎಂಎಲ್‌ಎ ಮಹಿಳಾ ಕಾಲೇಜು, ವಿದ್ಯಾಮಂದಿರ, ಹಿಮಾಂಶು ಕಲಾಜ್ಯೋತಿ ಮತ್ತು ಜೈನ್‌ ಕಾಲೇಜು ಸೇರಿದಂತೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಕರು ಅರ್ಜಿ ಪಡೆಯಲುಬೆಳಿಗ್ಗೆಯಿಂದಲೇ ಉದ್ದನೆಯ ಸಾಲುಗಳಲ್ಲಿ ನಿಂತಿದ್ದಾರೆ.

ADVERTISEMENT

ಡೈರಿ ಸರ್ಕಲ್‌ನಲ್ಲಿರುವಸೇಂಟ್‌ ಜಾನ್ಸ್‌ ಮತ್ತು ಕ್ರೈಸ್ಟ್‌ ಕಾಲೇಜು, ವಸಂತ ನಗರದ ಮೌಂಟ್‌ ಕಾರ್ಮೆಲ್‌, ಶೇಷಾದ್ರಿಪುರಂ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳು ಆನ್‌ಲೈನ್‌ನಲ್ಲಿ ಅರ್ಜಿ ವಿತರಿಸುತ್ತಿವೆ. ಇಲ್ಲಿ ಭರ್ತಿ ಮಾಡಿದ ಅರ್ಜಿ ಮರಳಿಸಲು ಕೂಡ ಭಾರಿ ದಟ್ಟನೆ ಕಾಣುತ್ತಿದೆ.

ವಾಣಿಜ್ಯ ವಿಷಯಕ್ಕೆ ಎಲ್ಲಿಲ್ಲದ ಬೇಡಿಕೆ!

ವಿಜ್ಞಾನದಂತೆ ವಾಣಿಜ್ಯ ವಿಷಯಕ್ಕೂ ಈ ಬಾರಿ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ವಿಷಯ ಆಯ್ಕೆಗೆ ಆಸಕ್ತಿ ತೋರುತ್ತಿದ್ದಾರೆ.

ಕಾಲೇಜುಗಳ ಮುಂದೆ ಅರ್ಜಿ ಪಡೆಯಲು ಸಾಲಿನಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಮಾತನಾಡಿಸಿದಾಗ ಹೆಚ್ಚಿನವರ ಮೊದಲ ಆದ್ಯತೆ ವಿಜ್ಞಾನ ಮತ್ತು ವಾಣಿಜ್ಯ ವಿಷಯವಾಗಿದ್ದವು.ಸಾಧಾರಣ ಅಂಕ ಪಡೆದ ವಿದ್ಯಾರ್ಥಿಗಳು ಕಲಾ ವಿಭಾಗದತ್ತ ಮುಖ ಮಾಡಿದ್ದಾರೆ.

ಅರ್ಜಿ ಪಡೆಯಲು ಭಾರಿ ನೂಕುನುಗ್ಗಲು, ಪೈಪೋಟಿ ಇರುವ ಕಾರಣ ಒಂದು ಕಾಲೇಜಿನ ಮುಂದೆ ಅಪ್ಪ, ಮತ್ತೊಂದು ಕಾಲೇಜಿನ ಮುಂದೆ ಅಮ್ಮ ಹಾಗೂ ಮಗದೊಂದು ಸರದಿ ಸಾಲಿನಲ್ಲಿ ಮಗ ಕ್ಯೂನಲ್ಲಿ ನಿಂತಿದ್ದರು.

ರಾಜಾಜಿ ನಗರ ಮತ್ತು ಮಲ್ಲೇಶ್ವರದಲ್ಲಿ ಟ್ಯೂಷನ್‌ ಕ್ಲಾಸ್‌ಗಳಿರುವುದರಿಂದ ಈ ಭಾಗಗಳ ಕಾಲೇಜಿನಲ್ಲಿ ಪ್ರವೇಶ ದೊರೆತರೆ ಅನುಕೂಲವಾಗುತ್ತದೆ ಎಂದು ನಾಗರಭಾವಿಯಿಂದ ಅರ್ಜಿ ಪಡೆಯಲು ಬಂದಿದ್ದ ರಾಜಾಜಿನಗರಕ್ಕೆ ಬಂದಿದ್ದ ವಿಜಯಾ ಮತ್ತು ಅನುಸೂಯಾ ಅಭಿಪ್ರಾಯಪಟ್ಟರು.

ಬಡತನದಲ್ಲಿ ಅರಳಿದ ಮೊಗ್ಗು

‘ಕಡು ಬಡತನದ ಕಷ್ಟಗಳ ನಡುವೆಯೂ ನನ್ನ ಮಗಳು (ಐಶ್ಚರ್ಯ ಎಸ್‌.) ಎಸ್‌ಎಸ್‌ಎಲ್‌ಸಿಯಲ್ಲಿ ಶೇ 86ರಷ್ಟು ಅಂಕ ಗಳಿಸಿದ್ದಾಳೆ. ಇತರ ಮಕ್ಕಳಂತೆ ಮನೆಪಾಠಕ್ಕೆ ಕಳಿಸಲು ಹಣ ಇಲ್ಲದ ಕಾರಣ ಸ್ವಂತ ಪರಿಶ್ರಮದ ಮೇಲೆ ಇಷ್ಟು ಅಂಕ ಗಳಿಸಿದ್ದಾಳೆ. ಇಷ್ಟು ಅಂಕ ಗಳಿಸುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ. ಅವಳಿಗೊಂದು ಉತ್ತಮ ಭವಿಷ್ಯ ಕಲ್ಪಿಸುವ ಮಹದಾಸೆ ಇದೆ’ ಎನ್ನುತ್ತಾರೆಗಾಯತ್ರಿ ನಗರದ ನಿವಾಸಿ ಶಿಲ್ಪಾ ಎಸ್‌.

ಮಗಳ ಪಿಯು ಪ್ರವೇಶಕ್ಕಾಗಿ ಅರ್ಜಿ ಪಡೆಯಲು ಕಾಲೇಜು ಬಳಿ ಬಂದಿದ್ದ ಅವರು, ಕಾಲೇಜು ಶುಲ್ಕ ವಿಚಾರಿಸುತ್ತಿದ್ದವೇಳೆ ‘ಮೆಟ್ರೊ’ ಜತೆ ಮಾತಿಗೆ ಸಿಕ್ಕರು.

‘ನಾವು ಮೂಲತಃ ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯವರು. ಚಿಕ್ಕವಳಿದ್ದಾಗಲೇ ಮದುವೆ ಮಾಡಿದರು. ಮನೆಯಲ್ಲಿ ಬಡತನ. ಗಂಡ ದುಡಿಯುತ್ತಿಲ್ಲ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ನನಗಂತೂ ಓದಲು ಆಗಲಿಲ್ಲ. ಮಕ್ಕಳಾದರೂ ಓದಲಿ ಎಂದು ಮನೆಗೆಲಸ ಮಾಡಿಕೊಂಡು ಎರಡು ಮಕ್ಕಳನ್ನು ಓದಿಸುತ್ತಿದ್ದೇನೆ’ ಎಂದು ತಮ್ಮ ಹಿನ್ನೆಲೆ ಹಂಚಿಕೊಂಡರು.

‘ಹತ್ತಾರು ಮನೆಗಳ ಕೆಲಸ ಮಾಡಿ ಸಂಸಾರ ನಿಭಾಯಿಸುತ್ತಿರುವೆ. ನನಗೆ ಸಹಾಯ ಮಾಡುತ್ತಲೇ ಮಗಳು ಓದಿ ಇಷ್ಟು ಅಂಕ ಗಳಿಸಿರುವುದು ನಿಜಕ್ಕೂ ಸಂತಸ ತಂದಿದೆ. ಮಗ ಬುದ್ಧಿಮಾಂದ್ಯ. ನಾನಿಲ್ಲದಾಗ ಅವನನ್ನು ಮಗಳೇ ನೋಡಿಕೊಳ್ಳುತ್ತಾಳೆ’ ಎಂದು ಮಗಳ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟರು.

‘ಒಳ್ಳೆಯ ಕಾಲೇಜು ಬೇಕು ಎಂದು ಮಗಳು ಹಠ ಹಿಡಿದಿದ್ದಾಳೆ. ಅಲ್ಲಿಯ ದುಬಾರಿ ಶುಲ್ಕ ಪಾವತಿಸುವ ಆರ್ಥಿಕಶಕ್ತಿ ನನಗಿಲ್ಲ. ಮನೆಗೆಲಸ ಮಾಡಿ ಬಂದ ಹಣ ಮನೆ ಖರ್ಚು ನಿಭಾಯಿಸಲು ಸಾಕಾಗಲ್ಲ. ಮಗ ಬುದ್ಧಿಮಾಂದ್ಯ. ಅವನ ಶಾಲೆ, ಔಷಧಿ, ಚಿಕಿತ್ಸೆ ಖರ್ಚು ನಿಭಾಯಿಸುವುದೇ ಕಷ್ಟ. ಹೀಗಿರುವಾಗ ಕಾಲೇಜು ಫೀ ಎಲ್ಲಿಂದ ಕಟ್ಟಲಿ’ ಎಂದು ಶಿಲ್ಪಾ ಪ್ರಶ್ನಿಸುತ್ತಾರೆ.

ಯಾವುದಾದರೂ ಕಾಲೇಜು ಪ್ರವೇಶ ಶುಲ್ಕ ಕಡಿಮೆ ಮಾಡಿದರೆ ಮಗಳನ್ನು ಮುಂದಕ್ಕೆ ಓದಿಸಬಹುದು.ಯಾರಾದರೂ ದಾನಿಗಳು, ಶಿಕ್ಷಣ ಪ್ರೇಮಿಗಳು ಅಥವಾ ಶಿಕ್ಷಣ ಸಂಸ್ಥೆಗಳು ನೆರವು ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ. ಮಗಳ ಭವಿಷ್ಯ ರೂಪಿಸಲು ಏಕಾಂಗಿಯಾಗಿ ಹೋರಾಡುತ್ತಿರುವ ಮಹಿಳೆಗೆನೆರವು ನೀಡಲು ಬಯಸುವವರು ಈ ಸಂಖ್ಯೆಸಂಪರ್ಕಿಸಬಹುದು 73488 40029.

ತೆರೆದುಕೊಳ್ಳುತ್ತಿರುವ ಅವಕಾಶಗಳು

ವಾಣಿಜ್ಯ ಪದವೀಧರರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶಗಳು ತೆರೆದುಕೊಳ್ಳುತ್ತಿರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಕಾಲೇಜಿನಲ್ಲಿ ಎರಡೇ ದಿನದಲ್ಲಿ ಶೇ 45ರಷ್ಟು ಸೀಟು ಭರ್ತಿಯಾಗಿವೆ ಎಂದು ಮಲ್ಲೇಶ್ವರದ ಎಂ.ಎಲ್‌.ಎ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ ಎಚ್‌.ಜಿ. ಅವರು ‘ಮೆಟ್ರೊ’ಗೆ ತಿಳಿಸಿದರು. ಈ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮಾತ್ರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.