ADVERTISEMENT

ಕಲೆ ಮತ್ತು ಸಂಸ್ಕೃತಿ: ಪ್ರಚಲಿತ ವಿದ್ಯಮಾನಗಳು

ಪ್ರಜಾವಾಣಿ ವಿಶೇಷ
Published 31 ಮೇ 2023, 23:31 IST
Last Updated 31 ಮೇ 2023, 23:31 IST
Venugopala K.
   Venugopala K.

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.

1.ಕಪಿಲೇಶ್ವರ ದೇವಾಲಯ

– ಇತ್ತೀಚಿಗೆ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಕಪಿಲೇಶ್ವರ ದೇವಾಲಯವನ್ನು ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧಾರ ತೆಗೆದುಕೊಂಡಿದೆ.

ADVERTISEMENT

– ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರವನ್ನು ಭಾರತದ ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ. ಈ ನಗರದಲ್ಲಿ ಪ್ರಾಚೀನ ಕಾಲದ ಹಲವಾರು ದೇವಾಲಯಗಳು ತನ್ನ ಅಸ್ತಿತ್ವವನ್ನು ಹೊಂದಿದ್ದು, ಪ್ರಸ್ತುತ ಚರ್ಚಿಸುತ್ತಿರುವ ಕಪಿಲೇಶ್ವರ ದೇವಾಲಯ ಕಪಿಲ ಪ್ರಸಾದ ಎನ್ನುವ ಪ್ರದೇಶದಲ್ಲಿದ್ದು, ಜಗದ್ವಿಖ್ಯಾತ ಲಿಂಗರಾಜ ದೇವಾಲಯಕ್ಕೆ ಒಂದು ಕಿಲೋಮೀಟರ್ ದೂರದಲ್ಲಿದೆ.

– ಕಪಿಲೇಶ್ವರ ದೇವಾಲಯವನ್ನು ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸಿದ ನಂತರ ಮುಂದಿನ ಪೀಳಿಗೆಗಳಿಗೆ ಸಾಕ್ಷಿಯಾಗುವಂತೆ ಉತ್ತಮವಾಗಿ ನಿರ್ವಹಿಸಿ ಮತ್ತು ಸಂರಕ್ಷಿಸಲಾಗುತ್ತದೆ.

ದೇವಾಲಯದ ಇತಿಹಾಸ

– ಕಪಿಲೇಶ್ವರ ದೇವಾಲಯವನ್ನು ನೇ ಶತಮಾನದಲ್ಲಿ ನಿರ್ಮಿಸಲಾಗಿದೆ., ಈ ದೇವಾಲಯದ ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿರುವುದಿಲ್ಲ. ಆದರೆ,14 ನೇ ಶತಮಾನದಲ್ಲಿ ಗಜಪತಿ ಕಪಿಲೇಂದ್ರ ದೇವ ಈ ದೇವಾಲಯವನ್ನು ಪುನಶ್ಚೇತನಗೊಳಿಸಿದ್ದಾನೆ ಎಂಬ ಮಾಹಿತಿ ಇದೆ.

ವಿಶೇಷ ಸೂಚನೆ: ಈ ದೇವಾಲಯವನ್ನು ಕಳಿಂಗ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ.

2. ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ಪ್ರದರ್ಶನ

– ಮೇ 18ರಂದು ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಅಂಗವಾಗಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ‘ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ಪ್ರದರ್ಶನ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

– ಈ ಪ್ರದರ್ಶನದಲ್ಲಿ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಮೆಹೆಂಜೋದಾರೊದಲ್ಲಿ ಪತ್ತೆಯಾದ ‘ಡ್ಯಾನ್ಸಿಂಗ್ ಗರ್ಲ್‌(ನರ್ತಿಸುತ್ತಿರುವ ಹುಡುಗಿ)’ ಮೂಲ ಕಂಚಿನ ಪ್ರತಿಮೆಯ ಪ್ರತಿಕೃತಿಯನ್ನುಅನಾವರಣಗೊಳಿಸಲಾಯಿತು.

– ಈ ಪ್ರದರ್ಶನದಲ್ಲಿ ವಿವಿಧ ನಾಗರಿಕತೆಗಳ ಪರಂಪರೆ ಯನ್ನು ಪ್ರದರ್ಶಿಸಲಾಯಿತು. ಬ್ರಿಟಿಷ್ ಪುರಾತತ್ವ ಇಲಾಖೆಯ ಅಧಿಕಾರಿಯಾದ ಅರ್ನೆಸ್ಟ್ ಮೇಕ್‌ ಅವರು ಉತ್ಖನನ ಮಾಡಿದ್ದ ‘ಡ್ಯಾನ್ಸಿಂಗ್ ಗರ್ಲ್‌’ ಪ್ರತಿಕೃತಿ ಪ್ರದರ್ಶನದ ಕೇಂದ್ರಬಿಂದುವಾಗಿತ್ತು.

– ಮೆಹೆಂಜೋದಾರೊ ಪಾಕಿಸ್ತಾನದ ಭೂಪ್ರದೇಶದ ಭಾಗ ವಾದರೂ ಭಾರತ ಮತ್ತು ಪಾಕಿಸ್ತಾನದ ಒಪ್ಪಂದದ ಅನ್ವಯ ‘ಡ್ಯಾನ್ಸಿಂಗ್‌ ಗರ್ಲ್‌’ ಕಲಾಕೃತಿಯನ್ನು ಭಾರತ ತನ್ನಲ್ಲೇ ಉಳಿಸಿಕೊಂಡಿತು.

– ಈ ಕಲಾಕೃತಿಯ ಮತ್ತೊಂದು ವಿಶೇಷತೆಯೆಂದರೆ, ಸಿಂಧು ಮಹಾ ನಾಗರಿಕತೆಯ ಜನರಿಗೆ ಲೋಹಗಳ ಬಗ್ಗೆ ಇದ್ದಂತಹ ಅರಿವು ಮತ್ತು ಜ್ಞಾನವನ್ನು ಪ್ರದರ್ಶಿಸುತ್ತದೆ.

3. ಲಡಾಖ್‌ ಮರದ ಕೆತ್ತನೆಗಳಿಗೆ ಭೌಗೋಳಿಕ ಸೂಚಕ(Gl)

– ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಲಡಾಖ್‌ನ ಮರದ ಕೆತ್ತನೆಗಳಿಗೆ(Wood Carving) ಇತ್ತೀಚೆಗೆ ಭೌಗೋಳಿಕ ಸೂಚಕವನ್ನು(GI-Geographical Indicator) ನೀಡಿ ಗೌರವಿಸಲಾಗಿದೆ. ಸ್ಥಳೀಯ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಮತ್ತು ಸಂಪ್ರದಾಯವನ್ನು ಸಂರಕ್ಷಿಸುವ ಉದ್ದೇಶದಿಂದ ಈ ಮರದ ಕೆತ್ತನೆಗಳಿಗೆ ಭೌಗೋಳಿಕ ಸೂಚ್ಯಂಕವನ್ನು ನೀಡಿ ಗೌರವಿಸಲಾಗಿದೆ.

– ಭಾರತದಲ್ಲಿ ಭೌಗೋಳಿಕ ಸೂಚಕವನ್ನು, ಭೌಗೋಳಿಕ ಸೂಚಕ ಕಾಯ್ದೆ-1999ರ ಅನ್ವಯ ನೀಡಲಾಗುತ್ತದೆ. ಭೌಗೋಳಿಕ ಸೂಚಕವನ್ನು ಮತ್ತೊಂದು ಸ್ವರೂಪದ ಬೌದ್ಧಿಕ ಆಸ್ತಿ ಹಕ್ಕು ಎಂದು ಪರಿಗಣಿಸಬಹುದು. ಸ್ವಾಭಾವಿಕವಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಕಲಾಕೃತಿಗಳಿಗೆ ಅಥವಾ ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ ವಸ್ತುಗಳಿಗೆ ಮತ್ತು ಉತ್ಪನ್ನಗಳಿಗೆ ಈ ಸೂಚಕವನ್ನು ನೀಡಲಾಗುತ್ತದೆ.

– ಬೌದ್ಧಧರ್ಮದ ಸಿದ್ಧಾಂತಗಳನ್ನು ಮತ್ತು ಬೌದ್ಧಧರ್ಮದ ತತ್ವಗಳಿಂದ ಪ್ರೇರಿತವಾಗಿರುವ ಈ ಮರದ ಕೆತ್ತನೆಗಳು ಲಡಾಖ್‌ ಪ್ರದೇಶದಲ್ಲಿ ದೊರಕುವ ವಿಲೊ ಮತ್ತು ಏಪ್ರಿಕಾಟ್ ಮರಗಳಿಂದ ತಯಾರಿಸಲಾಗುತ್ತದೆ.

– ಲಡಾಖ್‌ನ ಮರದ ಕೆತ್ತನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಗಿಲು, ಕಿಟಕಿಗಳು ಮತ್ತು ಗೃಹಪಯೋಗಿ ವಸ್ತುಗಳನ್ನು ಅಲಂಕರಿಸಲು ಹೆಚ್ಚಾಗಿ ಬಳಸಲಾಗುತ್ತದೆ.

– ಭೌಗೋಳಿಕ ಸೂಚಕವನ್ನು ಯಾವುದೇ ಉತ್ಪನ್ನಕ್ಕೆ ನೀಡಿದ ನಂತರ, ಬೇರೆ ಪ್ರದೇಶದ ಯಾವುದೇ ತಯಾರಕರು ಈ ಹೆಸರನ್ನು ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಈ ಉತ್ಪನಗಳನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ.

ವಿಶೇಷ ಸೂಚನೆ: ಭೌಗೋಳಿಕ ಸೂಚಕ ನೋಂದಣಿಯೂ ಕೇಂದ್ರ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಉಪಯೋಗಗಳು

– ಪ್ರಸ್ತುತ ಭೌಗೋಳಿಕ ಸೂಚಕ ದೊರಕಿದ ನಂತರ ಲಡಾಖ್‌ ಪ್ರದೇಶದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ.

– ಸ್ಥಳೀಯ ಕುಶಲಕರ್ಮಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರಕುತ್ತವೆ.

– ಲಡಾಖ್‌ ಪ್ರದೇಶದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರಕುವ ಸಾಧ್ಯತೆಯಿದೆ. ಹಾಗೆಯೇ ಲಡಾಖ್ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.