ADVERTISEMENT

ಪ್ರಚಲಿತ ವಿದ್ಯಮಾನಗಳು: ಆಲಿವ್ ರಿಡ್ಲಿ ಆಮೆಗಳ ಗೂಡು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 20:58 IST
Last Updated 2 ಏಪ್ರಿಲ್ 2025, 20:58 IST
   

ಆಲಿವ್ ರಿಡ್ಲಿ ಆಮೆಗಳ ಗೂಡು

* ಆಲಿವ್ ರಿಡ್ಲಿ ಆಮೆಗಳು ‘ಅರಿಬಾಡಾ’ ಎಂದು ಹೆಸರಾದ ವಿಶಿಷ್ಟ ಸಾಮೂಹಿಕ ಗೂಡುಕಟ್ಟುವ ನಡವಳಿಕೆಗೆ ಹೆಸರುವಾಸಿಯಾಗಿವೆ.

* ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿರುವ ಈ ವಿಶಿಷ್ಟ ಆಮೆಗಳು ಒಡಿಶಾದ ರುಶಿಕುಲ್ಯ, ಗಹಿರ್ಮಾಥ ಮತ್ತು ದೇವೆ ನದಿಗಳ ಮುಖಜಭೂಮಿಯಲ್ಲಿ ಗೂಡುಕಟ್ಟಲು ಬೀಡುಬಿಟ್ಟಿವೆ.

ADVERTISEMENT

* ಆಲಿವ್ ರಿಡ್ಲಿ ಆಮೆಗಳು ಸಾಮಾನ್ಯವಾಗಿ ಪ್ರತಿ 2–3 ವರ್ಷಗಳಿಗೊಮ್ಮೆ ಗೂಡು ಕಟ್ಟುತ್ತವೆ. ಈ ಹಿಂದೆ 2023 ರಲ್ಲಿ, ರುಶಿಕುಲ್ಯ ನದಿ ಮುಖಜ ಭೂಮಿಯ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ದಾಖಲೆಯ 6,37,000 ಆಲಿವ್ ರಿಡ್ಲಿ ಆಮೆಗಳು ಗೂಡುಕಟ್ಟಿದವು.

* ಬಂಗಾಳ ಕೊಲ್ಲಿಯಲ್ಲಿ ಆಮೆಗಳ ಸಂಯೋಗಕ್ಕೆ ಅನುಕೂಲಕರ ಹವಾಮಾನ ಪರಿಸ್ಥಿತಿಗಳಿದ್ದು, ಲಕ್ಷಾಂತರ ಆಮೆಗಳು ಗರ್ಭ ಧರಿಸಿದ್ದು, ಗೂಡುಕಟ್ಟುವ ಪ್ರಕ್ರಿಯೆ ಆರಂಭಿವೆ. ಫೆಬ್ರುವರಿ ಮಾಸಾಂತ್ಯದಲ್ಲಿ ಗೂಡುಕಟ್ಟುವ ಪ್ರಕ್ರಿಯೆ ಮುಗಿಯಲಿದೆ.

* ಈ ವರ್ಷ ರುಶಿಕುಲ್ಯಾ ನದಿಯಲ್ಲಿ ಪ್ರವಾಹ ಉಂಟಾಗಿಲ್ಲ, ಇದರಿಂದ ಕಡಲತೀರದ ಸವೆತವಾಗಿಲ್ಲ. ಹೀಗಾಗಿ, ಹೊಸ ಮರಳು ದಿಬ್ಬಗಳು ನಿರ್ಮಾಣಗೊಂಡಿದ್ದು, ಆಲಿವ್ ರಿಡ್ಲಿ ಆಮೆಗಳಿಗೆ ಗೂಡುಕಟ್ಟಲು ಹೆಚ್ಚುವರಿ ಸ್ಥಳ ಲಭಿಸಿದೆ. ಇದರಿಂದ ಈ ಬಾರಿ ಕಳೆದ ಸಲಕ್ಕಿಂತ ಹೆಚ್ಚಿನ ಗೂಡುಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

* ಗೂಡುಕಟ್ಟುವ ಆಮೆಗಳನ್ನು ಹಾಗೂ ಗೂಡುಗಳನ್ನು ರಕ್ಷಿಸಲು, ನ.1 ರಿಂದ ಮೇ 31 ರವರೆಗೆ 20 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಕಡಲತೀರವನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಇತರ ಅಡಚಣೆಗಳನ್ನು ತಡೆಗಟ್ಟಲು ಬೇಲಿ ಹಾಕಲಾಗಿದೆ.

* ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ (ZSI: Zoological Survey of India) 2021 ರಿಂದ ಸುಮಾರು 15,000 ಆಮೆಗಳಿಗೆ ಟ್ಯಾಗ್ ಅಳವಡಿಸಿದೆ. ಈ ಉಪಕ್ರಮವು ಅವುಗಳ ನಡವಳಿಕೆ, ಗೂಡುಕಟ್ಟುವ ಮಾದರಿ ಮತ್ತು ಜೀವನ ಚಕ್ರಗಳ ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಟ್ಯಾಗ್ ಮಾಡಲಾದ ಆಲಿವ್ ರಿಡ್ಲಿ ಆಮೆಗಳನ್ನು ಮರು ಪರಿಶೀಲಿಸುವುದು ಸಂಶೋಧನೆಗೆ ಅಮೂಲ್ಯ ದತ್ತಾಂಶವನ್ನು ಒದಗಿಸುತ್ತದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತ

* ಭಾರತವು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ದೀರ್ಘಕಾಲದ ಬದ್ಧತೆಯನ್ನು ವ್ಯಕ್ತಪಡಿಸಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ಇತ್ತೀಚಿನ ಘಟನೆಗಳಲ್ಲಿ ಭಾರತದ ಈ ಬದ್ಧತೆಯು ಮತ್ತೊಮ್ಮೆ ಬೆಳಕಿಗೆ ಬಂದಿದೆ.

* ಶಾಂತಿಪಾಲಕರ ದುರಂತ ಸಾವಿನ ನಂತರವೂ, ಭಾರತ ಜಾಗತಿಕ ಶಾಂತಿಗಾಗಿ ತನ್ನ ಸಮರ್ಪಣೆ ಪ್ರದರ್ಶಿಸಿ, ವಿವಿಧ ಕಾರ್ಯಾಚರಣೆಗಳಿಗೆ ಹಲವಾರು ಪಡೆಗಳು ಮತ್ತು ಪೊಲೀಸರನ್ನು ನಿಯೋಜಿಸಿದೆ.

* ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡಿಕೊಳ್ಳುವ ಅಥವಾ ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

* 1948 ರಲ್ಲಿ ಸ್ಥಾಪನೆಯಾದ ಇದು, ಸ್ವರಕ್ಷಣೆಯನ್ನು ಹೊರತುಪಡಿಸಿ, ಒಪ್ಪಿಗೆ, ನಿಷ್ಪಕ್ಷಪಾತ ಮತ್ತು ಬಲಪ್ರಯೋಗವಿಲ್ಲದೇ ಇರುವ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

* ಪ್ರಸ್ತುತ 125 ದೇಶಗಳಿಂದ ಸುಮಾರು 1,00,000 ಆಯ್ದ ಸಿಬ್ಬಂದಿ ವಿಶ್ವದಾದ್ಯಂತ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸಕ್ರಿಯ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

* ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೊದಲ ಕಾರ್ಯಾಚರಣೆ 1948 ರಲ್ಲಿ ನಡೆಯಿತು. ಈ ಕಾರ್ಯಾಚರಣೆಯಲ್ಲಿ ವಿಶ್ವಸಂಸ್ಥೆಯ ಒಪ್ಪಂದವೊಂದರ ಅನುಷ್ಠಾನದ ಮೇಲ್ವಿಚಾರಣೆ ವಹಿಸಲಾಗಿತ್ತು.

* ನಂತರ ದಶಕಗಳಲ್ಲಿ, 10 ಲಕ್ಷಕ್ಕೂ ಹೆಚ್ಚು ಯೋಧರು ವಿಶ್ವಸಂಸ್ಥೆಯ ಧ್ವಜದ ಅಡಿಯಲ್ಲಿ ಶಾಂತಿಪಾಲಕರಾಗಿ ಸೇವೆ ಸಲ್ಲಿಸಿದ್ದು, 70 ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದಾರೆ.

* ಇಷ್ಟೆಲ್ಲ ಸಾಧನೆಗಳ ನಡುವೆಯೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ರಾಜಕೀಯ ಅಧಿಕಾರದ ಒತ್ತಡ, ಸಂಪನ್ಮೂಲಗಳ ಕೊರತೆ, ಆತಿಥೇಯ ರಾಷ್ಟ್ರಗಳ ಪ್ರತಿರೋಧ ಹಾಗೂ ಸರ್ವಾಧಿಕಾರ ಧೋರಣೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ.

* ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ದಲ್ಲಿ M23 ಬಂಡುಕೋರರೊಂದಿಗಿನ ಹೋರಾಟದಲ್ಲಿ ಆರು ಜನ UN ಶಾಂತಿಪಾಲಕರ ಸಾವಿಗೀಡಾದರು. ಅವರಲ್ಲಿ ಇಬ್ಬರು ದಕ್ಷಿಣ ಆಫ್ರಿಕನ್ನರು, ಒಬ್ಬರು ಉರುಗ್ವೆಯರು ಮತ್ತು ಮೂವರು ಮಲಾವಿಯನ್ ಶಾಂತಿಪಾಲಕರು ಸೇರಿದ್ದಾರೆ.

* ಕಾಂಗೋದಲ್ಲಿ UN ಶಾಂತಿಪಾಲನಾ ಕಾರ್ಯಾಚರಣೆ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅಲ್ಲಿ 14,000 ಸೈನಿಕರನ್ನು ನಿಯೋಜಿಸಲಾಗಿದೆ.

* ಖನಿಜಗಳಿಂದ ಸಮೃದ್ಧವಾಗಿರುವ ಪೂರ್ವ ಕಾಂಗೋದಲ್ಲಿ 100ಕ್ಕೂ ಹೆಚ್ಚು ಸಶಸ್ತ್ರ ಗುಂಪುಗಳು ಸಂಪನ್ಮೂಲಗಳ ಮೇಲಿನ ನಿಯಂತ್ರಣಕ್ಕಾಗಿ ಹೋರಾಟ ನಡೆಸುತ್ತಿವೆ. ಇದರಿಂದ ಆ ಪ್ರದೇಶದಲ್ಲಿ ದಶಕಗಳಿಂದ ಆಂತರಿಕ ಕ್ಷೋಭೆ ತಲೆದೋರಿದೆ.

* ಭಾರತ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಅತಿ ಹೆಚ್ಚು ಕೊಡುಗೆ ನೀಡುವ ದೇಶವಾಗಿದೆ. ಭಾರತ ಇಲ್ಲಿಯವರೆಗೆ 49 ಕಾರ್ಯಾಚರಣೆಗಳಲ್ಲಿ 2,53,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ.

* ಭಾರತೀಯ ಶಾಂತಿಪಾಲಕರು ತಮ್ಮ ತಾಂತ್ರಿಕ ಪರಿಣತಿಗೆ ಹೆಸರುವಾಸಿಯಾಗಿದ್ದು, ವಿವಿಧ ಕಾರ್ಯಾಚರಣೆಗಳಲ್ಲಿ ವೈದ್ಯಕೀಯ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಿದ್ದಾರೆ.

* ಭಾರತವು ಹೆಲಿಕಾಪ್ಟರ್‌ಗಳು ಮತ್ತು ಎಂಜಿನಿಯರಿಂಗ್ ಘಟಕಗಳು ಸೇರಿದಂತೆ ವಿಶೇಷ ಮಿಲಿಟರಿ ಸಾಮರ್ಥ್ಯಗಳನ್ನು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕೊಡುಗೆಯಾಗಿ ನೀಡಿದೆ.

* ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಕೇಂದ್ರ 67,000 ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಿದ್ದು, ಲೈಂಗಿಕ ಶೋಷಣೆ ತಡೆಗಟ್ಟುವಿಕೆಯಂಥ ನಿರ್ಣಾಯಕ ತರಬೇತಿ ನೀಡಿದೆ.

‘ಡಿಜಿಟಲ್ ಆರ್ಥಿಕತೆ’ ವರದಿ

* ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ‘ಭಾರತದ ಡಿಜಿಟಲ್ ಆರ್ಥಿಕತೆಯ ಅಂದಾಜು ಮತ್ತು ಮಾಪನ’ ಎಂಬ ಪ್ರಮುಖ ವರದಿಯನ್ನು ಬಿಡುಗಡೆ ಮಾಡಿದೆ.

* ಭವಿಷ್ಯದ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸುವಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ನೀತಿ ನಿರೂಪಕರು ಹಾಗೂ ಉದ್ಯಮಿಗಳಿಗೆ ಈ ವರದಿಯು ನಿರ್ಣಾಯಕವಾಗಿದೆ.

* ಡಿಜಿಟಲ್ ಆರ್ಥಿಕತೆ ಡಿಜಿಟಲ್ ತಂತ್ರಜ್ಞಾನ ಬಳಸುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ಡಿಜಿಟಲ್ ವಲಯದ ಕೈಗಾರಿಕೆಗಳು ಮಾತ್ರವಲ್ಲದೇ, ಬ್ಯಾಂಕಿಂಗ್, ಶಿಕ್ಷಣ, ವ್ಯಾಪಾರದಂಥ ಸಾಂಪ್ರದಾಯಿಕ ವಲಯಗಳ ಪಾಲನ್ನು ಇದು ಒಳಗೊಂಡಿದೆ.

* ವರದಿಯ ಪ್ರಕಾರ, ಇತ್ತೀಚಿನ ಅಂದಾಜುಗಳು ಮತ್ತು ಸಂಶೋಧನೆಗಳನ್ವಯ ಭಾರತದ ಡಿಜಿಟಲ್ ಆರ್ಥಿಕತೆಯು 2022–23ರಲ್ಲಿ ರಾಷ್ಟ್ರೀಯ ಆದಾಯದ ಸರಿಸುಮಾರು ಶೇ 11.74 ರಷ್ಟಿದ್ದು, ಇದು ₹ 31.64 ಲಕ್ಷ ಕೋಟಿಗೆ ಸಮನಾಗಿದೆ.

* ಈ ಅಂಕಿ ಅಂಶಗಳನ್ವಯ ಭಾರತ ಡಿಜಿಟಲ್ ಆರ್ಥಿಕತೆಯಲ್ಲಿ, OECD ಚೌಕಟ್ಟು ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಶಿಫಾರಸು ಮಾಡಿದ ಇನ್‌ಪುಟ್–ಔಟ್‌ಪುಟ್ ವಿಧಾನಗಳನ್ನು ಬಳಸಿಕೊಳ್ಳುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ.

* ICT ಸೇವೆಗಳು ಮತ್ತು ದೂರಸಂಪರ್ಕ ವಲಯಗಳನ್ನು ಒಳಗೊಂಡಿರುವ ಡಿಜಿಟಲ್ ಕೈಗಾರಿಕೆಗಳು ದೇಶದ ಮಾರುಕಟ್ಟೆಯ ಒಟ್ಟು ಮೌಲ್ಯವರ್ಧನೆಗೆ (GVA: Gross Value Added) ಸುಮಾರು ಶೇ 2 ರಷ್ಟು ಕೊಡುಗೆ ನೀಡುತ್ತವೆ. ಹೆಚ್ಚುವರಿಯಾಗಿ, ಬ್ಯಾಂಕಿಂಗ್ ಮತ್ತು ಶಿಕ್ಷಣದಂಥ ಸಾಂಪ್ರದಾಯಿಕ ವಲಯಗಳಲ್ಲಿ ಡಿಜಿಟಲ್‌ ತಂತ್ರಜ್ಞಾನದ ಬಳಕೆಯಿಂದಲೂ ಶೇ 2ರಷ್ಟು ದೇಶದ ಮಾರುಕಟ್ಟೆಯ ಮೌಲ್ಯವರ್ಧನೆ ಉಂಟಾಗುತ್ತದೆ.

* 2022–23ರಲ್ಲಿ ಡಿಜಿಟಲ್ ಆರ್ಥಿಕತೆ ವಲಯವು ಸುಮಾರು 14.67 ಮಿಲಿಯನ್ ಕಾರ್ಮಿಕರಿಗೆ ಉದ್ಯೋಗ ಒದಗಿಸಿದ್ದು, ಇದು ಭಾರತದ ಒಟ್ಟು ಉದ್ಯೋಗಿಗಳ ಪೈಕಿ ಶೇ 2.55 ಪಾಲನ್ನು ಒಳಗೊಂಡಿದೆ.

* ಭಾರತದ ಡಿಜಿಟಲ್ ಆರ್ಥಿಕತೆ ಒಟ್ಟಾರೆ ಆರ್ಥಿಕತೆಗಿಂತ 2 ಪಟ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಮುನ್ಸೂಚನೆಗಳು ಸೂಚಿಸಿವೆ, ವಿವಿಧ ವಲಯಗಳಲ್ಲಿ ಹೆಚ್ಚಲಿರುವ ಡಿಜಿಟಲೀಕರಣ ದಿಂದ ಇದು 2030 ರ ವೇಳೆಗೆ ರಾಷ್ಟ್ರೀಯ ಆದಾಯದ 5ನೇ ಒಂದು ಭಾಗದಷ್ಟಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.